

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಒಂದು ದೇಶದಲ್ಲಿ ಒಂದೇ ಕಾನೂನು ಎನ್ನುವ ಸಂದೇಶ ನೀಡುತ್ತಿರುವುದು ಐತಿಹಾಸಿಕ ನಿರ್ಧಾರವಾಗಿದೆ ಎಂದು ಮೈಸೂರು ನಗರ ಬಿಜೆಪಿ ಉಪಾಧ್ಯಕ್ಷೆ ಹೇಮಾ ನಂದೀಶ್ ತಿಳಿಸಿದ್ದಾರೆ.
ಭಾರತ ದೇಶದಲ್ಲಿ ಜೈನರು, ಬೌದ್ಧರು, ಕ್ರೈಸ್ತರನ್ನು ಸೇರಿದಂತೆ ಹಲವು ಅಲ್ಪಸಂಖ್ಯಾತರಿಗಿಲ್ಲದ ವಕ್ಫ್ ಬೋರ್ಡ್ ಮುಸ್ಲಿಮರಿಗೆ ಯಾಕೆ ಎಂದು ಅವರು ಪ್ರಶ್ನಿಸಿದ್ದಾರೆ. ವಕ್ಫ್ ಬೋರ್ಡ್ ಕಾನೂನು ನೆರವಿನಿಂದ ಹಲವು ಮಠಮಾನ್ಯಗಳು, ಶಾಲಾ- ಕಾಲೇಜುಗಳು, ಮತ್ತು ಸಾರ್ವಜನಿಕರ ಆಸ್ತಿ ಸೇರಿದಂತೆ 1.2 ಲಕ್ಷ ಕೋಟಿ ರೂ. ಆಸ್ತಿ ಕಬಳಿಸಿದ್ದು, ದೇಶದ ಸರ್ಕಾರೇತರ ಅತಿ ಹೆಚ್ಚು ಆಸ್ತಿ ಹೊಂದಿದೆ ಎಂದು ಜೆಪಿಸಿ (ಜಂಟಿ ಸಂಸತ್ ಸಮಿತಿ) ವರದಿ ನೀಡಿದೆ. ಅತಿ ಹೆಚ್ಚು ರೈತರ ಆಸ್ತಿಯೊಂದಿಗೆ ಮುಸ್ಲಿಂ ಸಮುದಾಯದ ಆಸ್ತಿ ಕೂಡ ಕಬಳಿಸಿದ್ದು ಬಹಿರಂಗವಾಗಿದೆ. ಹೊಸ ವಕ್ಫ್ ಕಾಯ್ದೆ ತಿದ್ದುಪಡಿಯಿಂದ ಯಾರಿಗಾದರೂ ಅನ್ಯಾಯವಾದಾಗ ಜಿಲ್ಲಾಧಿಕಾರಿಗಳೊಂದಿಗೆ ಕೋರ್ಟ್ ಮೂಲಕ ನ್ಯಾಯ ಪಡೆಯಬಹುದು. ವಕ್ಫ್ ಸಮಿತಿಯಲ್ಲಿ ಮಹಿಳೆಯರೂ, ಮುಸ್ಲಿಂ ಇತರರಿಗೂ ಅವಕಾಶ ನೀಡಿ ಪಾರದರ್ಶಕವಾಗಿ ನ್ಯಾಯ ಕೊಡಿಸಲು ಅನುಕೂಲವಾಗಲಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.