

ರಾಮನಗರ : ನಗರದ ವಿಜಯನಗರ ಸ್ತ್ರೀ ಶಕ್ತಿ ಭವನದಲ್ಲಿ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಪೋಷಣ್ ಅಭಿಯಾನ ಮಾಸಾಚರಣೆ ಮತ್ತು ಲಸಿಕಾ ಶಿಬಿರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ವೆಂಕಟಪ್ಪ, ಆಹಾರ ಪಡೆಯುವ ಹಕ್ಕು ಪ್ರತಿಯೊಬ್ಬರಿಗೂ ಇದೆ.
ಕುಟುಂಬದ ಪೌಷ್ಟಿಕ ಆಹಾರದ ನಿರ್ವಹಣೆಯನ್ನು ಮಹಿಳೆಯರು ಮಾಡಬೇಕಾಗಿದ್ದು ಪೋಷಕಾಂಶಯುಕ್ತ ಆಹಾರ ಸೇವನೆಯಿಂದ ದೊರೆಯುವ ಲಾಭಗಳು ಮತ್ತು ಕೊರತೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಆರೋಗ್ಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಮಾಡುತ್ತಿದೆ. ಎಲ್ಲರೂ ಇದರ ಪ್ರಯೋಜನ ಪಡೆದುಕೊಂಡು ಪೌಷ್ಟಿಕಾಂಶದ ಕೊರತೆಯಿಂದ ಉಂಟಾಗುವು ಸಾವು-ನೋವುಗಳನ್ನು ತಪ್ಪಸಬೇಕೆಂದು ಸಲಹೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸಿ.ವಿ. ರಾಮನ್ ಮಾತನಾಡಿ, ಜಿಲ್ಲಾದ್ಯಂತ ಪೋಷಣ್ ಅಭಿಯಾನ ಮಾಸಾಚರಣೆ ಆಚರಿಸಲಾಗುತ್ತಿದ್ದು ಇದರ ಮುಖ್ಯ ಉದ್ದೇಶ ಮನುಷ್ಯನ ಆರೋಗ್ಯ ವೃದ್ಧಿಗೆ ಪೋಷಕಾಂಶಗಳ ಮಹತ್ವ ಕುರಿತು ಅರಿವು ಮೂಡಿಸುವುದಾಗಿದೆ. ಇದರಿಂದ ಮಕ್ಕಳು, ಗರ್ಭಿಣಿ, ಬಾಣಂತಿ, ಹದಿ-ಹರೆಯದವರು, ಅಪೌಷ್ಟಿಕತೆ, ರಕ್ತ ಹೀನತೆ ಮತ್ತು ಇತರ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಗ್ರಾಮ ಮತ್ತು ಪಟ್ಟಣ ಪ್ರದೇಶಗಳಲ್ಲಿ ಅರಿವು ಮೂಡಿಸುವ ಇದಾಗಿದೆ. ತಾಯಂದಿರ ಸಭೆ, ಸ್ತ್ರೀ ಶಕ್ತಿ ಸಂಘಗಳ ಸಭೆಯಲ್ಲಿ ನಿರಂತರವಾಗಿ ಮಾಹಿತಿ ನೀಡುವುದರ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುವಂತೆ ಸಲಹೆ ನೀಡಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್. ಗಂಗಾಧರ್ ಮಾತನಾಡಿ, ಮನುಷ್ಯನಿಗೆ ಪೌಷ್ಟಿಕ ಆಹಾರ ಮುಖ್ಯವಾಗಿದ್ದು, ಸ್ಥಳೀಯವಾಗಿ ದೊರೆಯುವಂತಹ ಸಿರಿ-ಧಾನ್ಯ, ಹಸಿರುಸೊಪ್ಪು, ತರಕಾರಿ, ಹಣ್ಣುಗಳು, ಬೇಳೆಕಾಳು, ಮೊಳಕೆಕಾಳು, ಹಾಲು, ಮೊಟ್ಟೆ, ಮೀನು, ಮಾಂಸ ಇವುಗಳನ್ನು ಬಳಸುವುದರಿಂದ ಉತ್ತಮ ಆರೋಗ್ಯ ಜತೆಗೆ ರೋಗಗಲಿಂದರಕ್ಷಣೆ ಪಡೆಯಬಹುದು ಎಂದರು.
ಡಾ. ಹರ್ಷಿತ್, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೇಣುಗೋಪಾಲ್, ಮೇಲ್ವಿಚಾರಕಿ ಶಿವಮ್ಮ, ಮಹಿಳಾ ಹಿತರಕ್ಷಣೆ ವೇದಿಕೆ ಅಧ್ಯಕ್ಷೆ ಜಯಮ್ಮ, ಆರೋಗ್ಯ ಸಂರಕ್ಷಣಾಧಿಕಾರಿ ಸಂಗೀತ, ಜಿಲ್ಲಾ ಸಂಯೋಜಕರಾದ ಸತೀಶ್, ಚೇತನ್ ಕುಮಾರ್, ತಾಲೂಕು ಅಧ್ಯಕ್ಷೆ ಪುಷ್ಪಲತಾ, ಆರೋಗ್ಯ ಸಿಬ್ಬಂದಿ, ಆಶಾ-ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀಶಕ್ತಿ ಮತ್ತು ಜ್ಞಾನವಿಕಾಸ ಸಂಘದ ಸದಸ್ಯರು ಹಾಗೂ ಸಾರ್ವಜನಿಕರು ಹಾಜರಿದ್ದರು.
------------------------------------------------------------------