

ಎನ್.ಆರ್.ಪುರ: ವಕೀಲರ ಹಾಗೂ ಕಚೆೇರಿ ಸಿಬ್ಬಂದಿ ಸಹಕಾರವಿದ್ದರೆ ಮಾತ್ರ ಸಾರ್ಥಕ ಸೇವೆ ಸಲ್ಲಿಸಬಹುದು ಎಂದು ನ್ಯಾಯಾಧೀಶ ದಾಸರಿ ಕ್ರಾಂತಿಕಿರಣ್ ತಿಳಿಸಿದರು.
ಸೋಮವಾರ ನ್ಯಾಯಾಲಯ ಆವರಣದಲ್ಲಿ ತಾಲೂಕು ವಕೀಲರ ಸಂಘ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ನ್ಯಾಯಾಧೀಶರೊಬ್ಬರೇ ಸಂಪೂರ್ಣ ನ್ಯಾಯ ಒದಗಿಸಲು ಸಾಧ್ಯವಿಲ್ಲ. ಸಹಾಯಕ ಸರ್ಕಾರಿ ಅಭಿಯೋಜಕರು, ವಕೀಲರು ಹಾಗೂ ಸಿಬ್ಬಂದಿ ಸಹಕಾರದಿಂದ ನ್ಯಾಯಸಮ್ಮತವಾಗಿ ಕಾರ್ಯ ಮಾಡಬಹುದು. ನಾನು ಈ ನ್ಯಾಯಾಲಯದಲ್ಲಿ ಮೂರು ವರ್ಷ ಸೇವೆ ಸಲ್ಲಿಸಿದ್ದೇನೆ. ಈ ಮೂರು ವರ್ಷಗಳೂ ನನಗೆ ಪರೀಕ್ಷಾ ವರ್ಷಗಳಿದ್ದಂತೆ. ಆದರೆ ಇಂದು ನನ್ನ ಲಿತಾಂಶದ ದಿನವೆನ್ನಿಸುತ್ತಿದೆ ಎಂದರು.
ಸಹಾಯಕ ಸರ್ಕಾರಿ ಅಭಿಯೋಜಕ ಗದಿಗೆಪ್ಪ ನೇಕಾರ , ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಚ್.ಎ.ಸಾಜು, ವಕೀಲರಾದ ಕೆ.ಪಿ.ಸುರೇಶ್‌ಕುಮಾರ್, ಎಸ್.ಎಸ್.ಸಂತೋಷ್‌ಕುಮಾರ್, ಜಿ.ದಿವಾಕರ್, ಈ.ಸಿ.ಜೋಯಿ, ಎಚ್.ಆರ್.ವೆಂಕಟೇಶ್‌ಮೂರ್ತಿ, ಬಸವರಾಜು ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಎನ್.ಆರ್.ಪುರ ನ್ಯಾಯಾಲಯದಿಂದ ದೊಡ್ಡಬಳ್ಳಾಪುರಕ್ಕೆ ವರ್ಗಾವಣೆಗೊಂಡ ನ್ಯಾಯಾಧೀಶರಿಗೆ ತಾಲೂಕು ವಕೀಲರ ಸಂಘ, ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ನ್ಯಾಯಾಂಗ ಇಲಾಖೆಯಿಂದ ಅಭಿನಂದಿಸಲಾಯಿತು. ನಂತರ ತಾಲೂಕಿನ 10 ಹಾವುಗೊಲ್ಲರ ಕುಟುಂಬಗಳಿಗೆ ಜಾತಿ ಪ್ರಮಾಣಪತ್ರ ವಿತರಿಸಲಾಯಿತು.