‘ಎಲ್ಲರ ಭಾರತ’ ಪುಸ್ತಕ ಬಿಡುಗಡೆ

22
Published on

ಮೈಸೂರು: ದೇಶದಲ್ಲಿ ಎಲ್ಲರೂ ಗಾಂಧಿಯನ್ನು ತಿಳಿದುಕೊಂಡಿದ್ದಾರೆ. ಆದರೆ ಯಾರೂ ಅವರನ್ನು ಸ್ವೀಕರಿಸಿಲ್ಲ. ಯಾರು ಅವರ ವಿಚಾರಧಾರೆ ಹಾಗೂ ಸಿದ್ಧಾಂತಗಳನ್ನು ಪಾಲಿಸುತ್ತಾರೋ ಆಗ ಮಾತ್ರ ಅವರನ್ನು ಸ್ವೀಕರಿಸಲು ಸಾಧ್ಯ ಎಂದು ಗಾಂಧಿವಾದಿ ತಗಡೂರು ಸತ್ಯನಾರಾಯಣ ಹೇಳಿದರು.


ಮೈಸೂರು ವಿವಿ ಗಾಂಧಿ ಅಧ್ಯಯನ ಕೇಂದ್ರದ ಗಾಂಧಿ ಭವನ ಹಾಗೂ ಗಾಂಧಿ ವಿಚಾರ ಪರಿಷತ್ ವತಿಯಿಂದ ಮಾನಸಗಂಗೋತ್ರಿಯ ಗಾಂಧಿ ಭವನದಲ್ಲಿ ಗುರುವಾರ ಆಯೋಜಿಸಿದ್ದ ಈ.ಧನಂಜಯ ಎಲಿಯೂರು ಅವರು ಕನ್ನಡಕ್ಕೆ ಅನುವಾದಿಸಿರುವ ‘ಎಲ್ಲರ ಭಾರತ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.


ಗಾಂಧಿ ಅವರನ್ನು ಪೂಜಿಸಿ, ವಿಗ್ರಹ ಮಾಡಿ ಕೂರಿಸಿದ್ದೇವೆ. ಆದರೆ ಅವರ ತ್ಯಾಗ, ಬಲಿದಾನ ಹಾಗೂ ಸಂದೇಶವನ್ನು ನಮ್ಮ ಹೃದಯಕ್ಕೆ ಬಿಟ್ಟುಕೊಳ್ಳುತ್ತಿಲ್ಲ. ಇದು ನಮ್ಮ ದೇಶದ ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
ಮಹಾತ್ಮ ಗಾಂಧೀಜಿ ಕುರಿತು ನೈಜ ಮಾಹಿತಿ ಯುವ ಸಮುದಾಯ್ಕಕೆ ಸಿಗುತ್ತಿಲ್ಲ. ಹೀಗಾಗಿ ಗಾಂಧಿ ಅಧ್ಯಯನ ಸಂಸ್ಥೆಗಳು, ಅವರ ಬಗ್ಗೆ ನೈಜ ಮಾಹಿತಿ, ಸಂಗತಿಗಳನ್ನು ತಿಳಿಸುವ ಜತೆಗೆ ಅವರ ವಿಚಾರಧಾರೆಗಳನ್ನು ಜನರಿಗೆ ತಿಳಿಸಿಕೊಡಬೇಕು ಎಂದರು.


ಗಾಂಧಿ ವಿಚಾರ ಪರಿಷತ್ ಅಧ್ಯಕ್ಷ ಪ.ಮಲ್ಲೇಶ್ ಮಾತನಾಡಿ, ಪ್ರಸ್ತುತ ಗಾಂಧೀಜಿ ಮತ್ತು ಅವರ ಚಿಂತನೆಗಳು ನಮಗೆ ಅನಿವಾರ್ಯ ಆಗಬೇಕಿದೆ. ನಮ್ಮ ಸಂವಿಧಾನದಲ್ಲಿ ಗಾಂಧಿ ಸ್ಪಷ್ಟವಾಗಿದ್ದಾರೆ. ಆದರೆ ಸಂವಿಧಾನವನ್ನು ಮುಂದಿಟ್ಟುಕೊಂಡು ಯಾವ ಸರ್ಕಾರವು ಆಡಳಿತ ಮಾಡುತ್ತಿಲ್ಲ. ಇಂದು ನ್ಯಾಯಾಂಗ ವ್ಯವಸ್ಥೆಯನ್ನೇ ಅನುಮಾನದಿಂದ ನೋಡುವ ಪರಿಸ್ಥಿತಿ ಬಂದೊದಗಿಸಿದೆ ಎಂದರು.
ಇಂದು ದಲಿತ, ರೈತ ಹಾಗೂ ಕಾರ್ಮಿಕ ಸಂಘಟನೆಗಳು ಅವರ ಕ್ಷೇತ್ರಕ್ಕೆ ಸೀಮಿತ ಮಾಡಿಕೊಂಡು ಹೋರಾಟ ಮಾಡುತ್ತಿವೆ. ಈ ಎಲ್ಲ ಸಂಘಟನೆಗಳ ಹುಟ್ಟಿಗೆ ಒಂದು ಕಾರಣ ಇತ್ತು, ಅನಿವಾರ್ಯತೆ ಇತ್ತು. ಆದರೆ ಇಂದು ಎಲ್ಲ ಸಂಘಟನೆಗಳು ಛಿದ್ರವಾಗಿವೆ. ಸಮಾಜ ಉತ್ತಮ ಹಂತಕ್ಕೆ ಬರಬೇಕಾದರೆ ಎಲ್ಲ ಸಂಘಟನೆಗಳು ಒಗ್ಗಟ್ಟಾಗಬೇಕಿದೆ ಎಂದು ತಿಳಿಸಿದರು.


ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತಕುಮಾರ್ ಈ. ಧನಂಜಯ ಎಲಿಯೂರು ಅವರು ಕನ್ನಡಕ್ಕೆ ಅನುವಾದಿಸಿರುವ ಗಾಂಧೀಜಿ ಅವರ ಮೊಮ್ಮಗ ರಾಜಮೋಹನ ಗಾಂಧಿ ಅವರ ಭಾಷಣ ಸಂಗ್ರಹ ಕೃತಿ ಎಲ್ಲರ ಭಾರತ ಬಿಡುಗಡೆ ಮಾಡಿದರು. ಗಾಂಧಿ ಭವನದ ನಿರ್ದೇಶಕ ಪ್ರೊ.ಎಂ.ಎಸ್. ಶೇಖರ್, ಲೇಖಕ ಈ. ಧನಂಜಯ ಎಲಿಯೂರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net