

ಎನ್.ಆರ್.ಪುರ: ರಾಜ್ಯದಲ್ಲಿ ಎಲ್ಲ ಭಾಷಿಗರು ಏಕತೆಯಿಂದ ಹೊಂದಿಕೊಂಡು ಬದುಕುತ್ತಿದ್ದಾರೆ ಎಂದು ಕಡಹಿನಬೈಲು ಗ್ರಾಪಂ ಉಪಾಧ್ಯಕ್ಷ ಸುನೀಲ್ ಕುಮಾರ್ ತಿಳಿಸಿದರು.
ಶುಕ್ರವಾರ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ನಡಿಗೆ ಶಾಲಾ ಕಾಲೇಜುಗಳ ಕಡೆಗೆ, ಮಕ್ಕಳಿಗೆ ಕನ್ನಡದಲ್ಲಿ ರಸ ಪ್ರಶ್ನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬೇರೆ ರಾಜ್ಯಗಳಲ್ಲಿ ಆ ರಾಜ್ಯದ ಭಾಷೆ ಬಿಟ್ಟು ಬೇರೆ ಭಾಷೆೆಯಲ್ಲಿ ಮಾತನಾಡುವುದೇ ಇಲ್ಲ. ಆದರೆ ಕರ್ನಾಟಕವು ಎಲ್ಲ ಭಾಷಿಕರಿಗೂ ಗೌರವ ನೀಡುತ್ತಿದೆ. ಕುವೆಂಪು, ಶಿವರಾಮ ಕಾರಂತ, ಯು.ಆರ್.ಅನಂತಮೂರ್ತಿಯಂತಹ ಮೇರು ಸಾಹಿತಿಗಳು ಹುಟ್ಟಿದ ನಾಡಾಗಿದೆ ಎಂದು ತಿಳಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಎಚ್.ಪೂರ್ಣೇಶ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಶಾಲಾ, ಕಾಲೇಜುಗಳಲ್ಲೂ ಕನ್ನಡದ ಕಂಪನ್ನು ಪಸರಿಸುವ ಕೆಲಸ ಮಾಡುತ್ತಿದೆ. ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅದೇ ಶಾಲೆಯಲ್ಲಿ ಸನ್ಮಾನಿಸಿ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.
ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಹಿರಿಯ ಶಿಕ್ಷಕ ವಿಶ್ವನಾಥ್ ಮಾತನಾಡಿ, 2 ಸಾವಿರ ವರ್ಷಗಳ ಇತಿಹಾಸ ಇರುವ ಕನ್ನಡ ಸುಂದರ ಭಾಷೆೆಯಾಗಿದೆ. ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿ ಹಾಗೂ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ. ಕನ್ನಡ ಉಳಿವಿಗಾಗಿ ಕನ್ನಡ ಸಾಹಿತ್ಯ ಪರಿಷತ್ ನಿರಂತರ ಹೋರಾಟ ಮಾಡಿಕೊಂಡು ಬರುತ್ತಿದೆ ಎಂದರು.
ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದ ಎಚ್.ವಿ.ಮನ್ವಿತ್ ಅವರನ್ನು ಪುರಸ್ಕರಿಸಲಾಯಿತು. ಜಾನಪದ ರಸಪ್ರಶ್ನೆ ಕಾರ್ಯಕ್ರಮವನ್ನು ತಾಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್ ಮತ್ತು ತಂಡದವರು ನಡೆಸಿಕೊಟ್ಟರು.
ಕಡಹಿನಬೈಲು ಗ್ರಾಪಂ ಅಧ್ಯಕ್ಷೆ ಅಶ್ವಿನಿ, ಸದಸ್ಯರಾದ ಚಂದ್ರಶೇಖರ್, ವಾಣಿ ನರೇಂದ್ರ, ಪೂರ್ಣಿಮಾ, ತಾಲೂಕು ಕಸಾಪ ಪ್ರಧಾನ ಕಾರ್ಯದರ್ಶಿ ನಂದಿನಿ ಆಲಂದೂರು, ಕಸಬಾ ಹೋಬಳಿ ಅಧ್ಯಕ್ಷ ಉದಯಗಿಲ್ಲಿ, ಯುವ ಘಟಕದ ಅಧ್ಯಕ್ಷ ಸತ್ಯಪ್ರಕಾಶ್, ಮಹಿಳಾ ಒಕ್ಕಲಿಗರ ಸಂಘದ ಕಾರ್ಯದರ್ಶಿ ಪೂರ್ಣಿಮಾ ಮಧು, ಕೋಶಾಧ್ಯಕ್ಷೆ ರೇಖಾ ಮೋಹನ್, ಮಾಜಿ ಅಧ್ಯಕ್ಷೆ ಮೀನಾಕ್ಷಿ ಕಾಂತರಾಜ್, ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಸದಸ್ಯರಾದ ಶೈಲಾ, ಸನ್ಮತಿರಕ್ಷಿತ್ ಇತರರಿದ್ದರು.