ಎಲ್ಲ ಕ್ಷೇತ್ರವನ್ನು ಪ್ರತಿನಿಧಿಸುವವರಾಗಿದ್ದ ಕುವೆಂಪು

kuvempu-240x300
Published on

ರಾಷ್ಟ್ರಕವಿ ಕುವೆಂಪು ಜಗತ್ತಿನಲ್ಲಿ ಎಲ್ಲ ಕ್ಷೇತ್ರವನ್ನು ಪ್ರತಿನಿಧಿಸುವ ವ್ಯಕ್ತಿಯಾಗಿದ್ದರು ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಎನ್.ಬೋರಲಿಂಗಯ್ಯ ಹೇಳಿದರು.

ಜನಸ್ಪಂದನ ಟ್ರಸ್ಟ್ ವತಿಯಿಂದ ಚಿಕ್ಕಮ್ಮಾನಿಕೇತನ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕುವೆಂಪು ಜನಿಸಿದ ಹಿಂದಿನ ಶತಮಾನ ಪ್ರಪಂಚದ ಇತಿಹಾಸಲ್ಲಿ ಮಹಾನ್ ಪುರುಷರು, ಕವಿಗಳು, ವಿಜ್ಞಾನಿಗಳು, ಋಷಿಗಳನ್ನು ನೀಡಿದೆ. ಆ ಎಲ್ಲ ಮಹಾನ್ ಸಾಧಕರ ಹೆಗಲ ಮೇಲೆ ಕುಳಿತ ಮಹಾನ್ ಚೇತನ ಕುವೆಂಪು ಆಗಿದ್ದಾರೆ. ಅಲ್ಲಿ ವಿಜ್ಞಾನಿಗಳು, ಸುಧಾರಕರು, ಸಾಹಿತಿಗಳು ಇದ್ದಾರೆ. ಪರಮಹಂಸರಂಥ ಮಹಾನ್ ಸಮನ್ವಯವಾದಿ, ವಿವೇಕಾನಂದರಂತಹ ಸಿಂಹ ಘರ್ಜನೆಯ ವಾಗ್ಮಿ, ದಯಾನಂದ ಸರಸ್ವತಿ ಸೇರಿದಂತೆ ಅನೇಕ ಚೇತನಗಳನ್ನು ಕಾಣಬಹುದು. ಆ ಎಲ್ಲರ ಶಕ್ತಿ, ಸಾಮರ್ಥ್ಯಗಳನ್ನು ಒಗ್ಗೂಡಿಸಿಕೊಂಡಿದ್ದ ಮಹಾನ್ ಚೇತನ ಕುವೆಂಪು. ಅಷ್ಟೇ ಅಲ್ಲದೆ, ಕರ್ನಾಟಕದ ಪಂಪ, ಕುಮಾರವ್ಯಾಸ, ರನ್ನ, ಹರಿಹರ, ಬಸವಣ್ಣ, ರತ್ನಾಕರವರ್ಣಿ ಸೇರಿದಂತೆ ಪಂಪನಿಂದ ಬೇಂದ್ರೆ ವರೆಗಿನ ಎಲ್ಲರ ಪ್ರಭಾವಕ್ಕೂ ಒಳಗಾಗುವ ಜತೆಗೆ ಎಲ್ಲರನ್ನೂ ಜೀರ್ಣಿಸಿಕೊಂಡಿದ್ದರು ಎಂದರು.

ನನಗೆ ತಿಳಿದ ಮಟ್ಟಿಗೆ ಕುವೆಂಪು ಅವರು ಮಹಾನ್ ಕವಿಯಾಗಿ, ಋಷಿಯಾಗಿ, ಮದುವೆಯಾಗಿಯೂ ಸನ್ಯಾಸಿಯಾಗಿದ್ದರು. ಅವರಿಗೆ ಗೊತ್ತಿಲ್ಲದ ವಿಷಯ ಇರಲಿಲ್ಲ. ಗೊತ್ತಿರುವವರ ಬಳಿ ಮಾತನಾಡಿ, ವಿಜ್ಞಾನವನ್ನು ಸಂಗ್ರಹಿಸಿಕೊಂಡಿದ್ದರು. ಎಲ್ಲ ವಿಚಾರಗಳನ್ನು ಗಟ್ಟಿಯಾಗಿ ಬಟ್ಟಿ ಇಳಿಸಿದ ಮೇರು ಕೃತಿಯೇ ಶ್ರೀರಾಮಾಯಣ ದರ್ಶನ ಎಂದರು.

ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿ, ಕುವೆಂಪು ಯುಗದ ಕವಿಯಾಗಿ ಹೊಸ ಬೆಳಕನ್ನು ಸಮಾಜಕ್ಕೆ ನೀಡಿದರು. ಬುದ್ಧನ ಚಿಂತನೆಯನ್ನು ಮೈಗೂಡಿಸಿಕೊಂಡು ಸಮಾಜಕ್ಕೆ ವೈಚಾರಿಕ ಸಂದೇಶ ಸಾರಿದರು ಎಂದರು.

ಕುವೆಂಪು ಅವರು ಜಾತಿ ವ್ಯವಸ್ಥೆಯಿಂದ ಹೊರ ಬನ್ನಿ ಎಂದು ಹೇಳಿದರು. ಆದರೆ, ದೇಶದಲ್ಲಿಂದು ಜಾತಿ ವ್ಯವಸ್ಥೆ ಕೆಟ್ಟ ಸ್ವರೂಪ ತಾಳಿದೆ. ನಾವು ವೇದಿಕೆಯಲ್ಲಿ ಕುವೆಂಪು ಅವರ ಬಗ್ಗೆ ಮಾತನಾಡುತ್ತೇವೆ. ಜಾತಿ ಪದ್ಧತಿಯನ್ನು ವಿರೋಧಿಸುತ್ತೇವೆ. ಆದರೆ, ವೇದಿಕೆಯಿಂದ ಇಳಿದ ಮೇಲೆ ಮತ್ತೆ ಜಾತಿ ಕೂಪಕ್ಕೆ ಸಿಲುಕುತ್ತೇವೆ ಎಂದು ಬೇಸರ ವ್ಯಕ್ತ ಪಡಿಸಿದರು.

ಕುವೆಂಪು ಅವರು ರೈತರು, ಕಾರ್ಮಿಕರು, ದಲಿತರು, ಮಹಿಳೆಯರ ಸಮಾನತೆ ಸಾಹಿತ್ಯದಲ್ಲಿ ಒತ್ತಾಯಿಸಿದರು. ಅವರ ಸಾಹಿತ್ಯ ಓದಿ, ಅವರ ಆದರ್ಶ ಮೈಗೂಡಿಸಿಕೊಂಡ ಅನೇಕರು ದೊಡ್ಡ ಕವಿಗಳಾಗಿದ್ದಾರೆ. ಕುವೆಂಪು ಸೇರಿದಂತೆ ಎಲ್ಲ ಸಮಾಜ ಸುಧಾರಕರು, ಕ್ರಾಂತಿಕಾರರ ಜಯಂತಿಯನ್ನು ಎಲ್ಲರೂ ಮಾಡಬೇಕು ಎಂದರು.

ಕುವೆಂಪು ಅವರ ಮಂತ್ರ ಮಾಂಗಲ್ಯದ ಮೂಲಕ ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡಬೇಕು. ಇಂದು ಎಲ್ಲ ಕಡೆ ಅಂತರ್ಜಾತಿ ವಿವಾಹ ಆಗುತ್ತಿದೆ. ಆದರೆ, ಅವರ ಮಕ್ಕಳು ಅಪ್ಪ ಅಥವಾ ಅಮ್ಮನ ಯಾವುದಾದರೂ ಜಾತಿಗೆ ಅಂಟಿಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತ ಪಡಿಸಿದರು.

ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಮಾತನಾಡಿ, ಜಾತ್ಯತೀತ ಸಮಾಜ ಸೃಷ್ಟಿಗೆ ಅಂತರ್ಜಾತಿ ವಿವಾಹ ಮುಖ್ಯ. ಅಂತರ್ಜಾತಿ ವಿವಾಹವಾದ ದಂಪತಿಗಳಿಗೆ ಅಭಿನಂದಿಸುತ್ತಿರುವ ಇಂತಹ ಕಾರ್ಯಕ್ರಮವನ್ನು ಶ್ಲಾಘಿಸಬೇಕು ಎಂದರು.

ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್, ಚಿಂತಕ ಪ್ರೊ.ಕಾಳೇಗೌಡ ನಾಗವಾರ, ರಂಗಕರ್ಮಿ ಜನಾರ್ದನ್, ಎಚ್.ಎ.ವೆಂಕಟೇಶ್, ಡಾ.ಆರ್.ಸ್ವಾಮಿ ಆನಂದ್, ಈ ಧನಂಜಯ ಎಲಿಯೂರು ಇತರರಿದ್ದರು.

ಇದೇ ವೇಳೆ ಕುವೆಂಪು ಅವರ ಆಶಯದ ಮಂತ್ರ ಮಾಂಗಲ್ಯದ ಅಡಿಯಲ್ಲಿ ಅಂತರ್ಜಾತಿ ವಿವಾಹವಾಗಿ ಆದರ್ಶದ ಬದುಕನ್ನು ಮುನ್ನಡೆಸುತ್ತಿರುವ ದಂಪತಿಗಳನ್ನು ಅಭಿನಂದಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net