ಎಲ್ಲ ಕಾಲಕ್ಕೂ ಸಲ್ಲ ದಾರ್ಶನಿಕ ಪಂಪ

10
Published on

ಮೈಸೂರು: ಪಂಪ ಎಲ್ಲ ಕಾಲಕ್ಕೂ ಸಲ್ಲಬಲ್ಲ ದಾರ್ಶನಿಕ. ಸಾವಿರ ವರ್ಷದಿಂದ ಪಂಪ ಉಳಿದಿದ್ದಾನೆ. ಜತೆಗೆ ಮಹಾಕವಿ ಎಂಬ ಸ್ಥಾನವನ್ನು ಉಳಿಸಿಕೊಂಡಿದ್ದಾನೆ ಎಂದು ಮೈಸೂರು ವಿಶ್ವವಿದ್ಯಾಲಯ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ರಾಗೌ(ರಾಮೇಗೌಡ) ಬಣ್ಣಿಸಿದರು.

ರಾಷ್ಟ್ರೀಯ ವಿಚಾರಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಹಳಗನ್ನಡ ಹಾಗೂ ಹಳಗನ್ನಡ ಕವಿಗಳನ್ನು, ಕಾವ್ಯಗಳನ್ನು ಓದುವ, ಅವನನ್ನು ಅರ್ಥೈಸಿಕೊಳ್ಳುವುದರಲ್ಲಿ ಇವತ್ತಿನ ಪೀಳಿಗೆ ನಿರಾಸಕ್ತಿ ವಹಿಸುತ್ತಿದೆ. ಈ ನಿಟ್ಟಿನಲ್ಲಿ ಪಂಪನ ಕಾವ್ಯಗಳ ಬಗೆಗಿನ ವಿಚಾರಸಂಕಿರಣ ತಕ್ಕಮಟ್ಟಿಗೆ ಇನ್ನೂ ಕಾವ್ಯಗಳ ಉಳಿವಿಗೆ ಸಾಕ್ಷಿಯಾಗಿವೆ. ನಾನು ಪಂಪನ ಕಾವ್ಯದ ಒಳಹೊಕ್ಕು ಅವನ ಬಗ್ಗೆ ಪುಸ್ತಕವನ್ನು ರಚಿಸಿದ್ದೇನೆ ಎಂದರು.

ಆಂಗ್ಲ ಕವಿ ಏಲಿಯಟ್ ಮಾತಿನಂತೆ ಒಬ್ಬ ವಿಮರ್ಶಕ ನೂರು ವರ್ಷಕ್ಕೊಮ್ಮೆ, ತನ್ನ ಹಿಂದಿನ ಸಾಹಿತ್ಯವನ್ನ ವಿಮರ್ಶೆಯ ಮೂಲಕ ಅವಲೋಕಿಸಿ ಹೊಸ ಕ್ರಮದಲ್ಲಿ ಜೋಡಿಸುವ ಕೆಲಸ ಮಾಡಬೇಕು, ಆದರೆ ಅದು ಕ್ರಾಂತಿ ಮಾಡಬಾರದು. ಆದರೆ ಇದೆಲ್ಲ ಪಂಪನಿಗೆ ಅನ್ವಯಿಸುವುದೇ ಇಲ್ಲ. ಅವನ ಬಗ್ಗೆ ಆಕ್ಷೇಪ ಎತ್ತಬಹುದು, ಆದರೆ ಮಹಾಕವಿಯನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದು ಬಣ್ಣಿಸಿದರು.

ಕನ್ನಡದಲ್ಲಿ ಪಂಪನ ಉಲ್ಲೇಖ ಸಿಗುವ ಹಾಗೆ, ಬೇರೆ ಯಾರದು ಹಾಗೂ ಎಲ್ಲಿಯೂ ಸಿಗಲಾರದು. ಕವಿ ಎತ್ತರಕ್ಕೆ ಬೆಳೆದಷ್ಟು ಬಾಗಬೇಕೆ ಹೊರತು, ಬೀಗಬಾರದು. ಪಂಪ ಹೆಚ್ಚು ಮನ್ನಣೆ ಸಿಗದ ಪಾತ್ರಗಳನ್ನು ಗಮನಿಸಿ ಅವುಗಳನ್ನು ಬೆಳೆಸಿ, ಸಮಾನತೆ ಕಾಪಾಡುವ ಕೆಲಸ ಮಾಡಿ, ಕಾವ್ಯದ ಮೂಲಕ ಕಾವ್ಯ ನ್ಯಾಯ ಒದಗಿಸಿದ್ದಾನೆ ಎಂದರು.

ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕಾವ್ಯಗಳನ್ನು ಓದಿ ಅರ್ಥೈಸಿಕೊಂಡರೆ ಸಾಲದು, ಅದರ ಒಳಾರ್ಥವನ್ನು ಸೂಕ್ಷ್ಮವಾಗಿ ಗ್ರಹಿಸುವಂತಾಗಬೇಕು. ಪಂಪನಿಗೆ ದೊರಕಿದ ಅನುಕೂಲ, ಸೌಲಭ್ಯಗಳು ಇಂದಿಗೂ ಯಾವ ಕವಿಗೂ ದೊರೆತಿಲ್ಲ. ಪಂಪನ ಪ್ರತಿಮೆಗಳು ಪ್ರಸ್ತುತಕ್ಕೂ ಎಲ್ಲೂ ಕಾಣಲು ಸಿಗುವುದಿಲ್ಲ. ಆತ ಜೀವನ ಕ್ರಮದಿಂದ ಇಂದಿಗೂ ನಮ್ಮೊಳಗಿದ್ದಾನೆ, ಎಂದು ಅಭಿಪ್ರಾಯಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net