ಎಪಿಎಂಸಿ ಹೊಸ ಸಮಿತಿ: ಅಧ್ಯಕ್ಷ ಉಮೇಶ್‌ಗೌಡ, ಉಪಾಧ್ಯಕ್ಷ ಶಿವರಾಜ್ ಸೇರಿ 15 ಸದಸ್ಯರ ನಾಮ ನಿರ್ದೇಶನ

18Tmk_APMC_Nominee_office
Published on

ತುಮಕೂರು: ಪ್ರತ್ಯೇಕಗೊಂಡಿದ್ದ ಕೊರಟಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯನ್ನು ಮತ್ತೆ ತುಮಕೂರು ಎಪಿಎಂಸಿಯಲ್ಲಿ ವಿಲೀನಗೊಳಿಸಲಾಗಿದೆ. ಹಾಗಾಗಿ, ಮತ್ತೊಮ್ಮೆ ಅಧ್ಯಕ್ಷ, ಉಪಾಧ್ಯಕ್ಷ ಸೇರಿ 15 ಸದಸ್ಯರ ಹೊಸ ನಿರ್ದೇಶಕ ಮಂಡಳಿಯನ್ನು ರಾಜ್ಯ ಸರ್ಕಾರವು ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಿದೆ.

ಸಮ್ಮಿಶ್ರ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ 2020ರ ಜು.22ರಂದು ಅಧ್ಯಕ್ಷರಾಗಿ ಪಕ್ಷದ ಉಮೇಶ್‌ಗೌಡ, ಉಪಾಧ್ಯಕ್ಷರಾಗಿ ಶಿವರಾಜ್ ಸೇರಿ 15 ಸದಸ್ಯರನ್ನು ಎಪಿಎಂಸಿಗೆ ನಾಮನಿರ್ದೇಶನ ಮಾಡಲಾಗಿತ್ತು. ಮೊದಲ ಬಾರಿ ಅಸ್ತಿತ್ವಕ್ಕೆ ಬಂದ ಎಪಿಎಂಸಿಗೆ ಹೊಸ ಸಮಿತಿಯನ್ನು 4 ವರ್ಷಗಳ ಅವಧಿಗೆ ನಾಮನಿರ್ದೇಶನ ಮಾಡುವ ಅವಕಾಶವಿದ್ದು, ಈ ನಾಮಿನಿ ಅವಧಿ ಪೂರ್ಣಗೊಳ್ಳುವ ಮುನ್ನವೇ ಪ್ರತ್ಯೇಕಗೊಂಡಿದ್ದ ಕೊರಟಗೆರೆ ಎಪಿಎಂಸಿಯನ್ನು ಮತ್ತೆ ತುಮಕೂರು ಎಪಿಎಂಸಿಯಲ್ಲಿ ವಿಲೀನಗೊಳಿಸಿ ಮತ್ತೊಂದು ಅವಧಿಗೆ ನಾಮನಿರ್ದೇಶನ ಮಾಡುವ ಅವಕಾಶವನ್ನು ಬಿಜೆಪಿ ಸೃಷ್ಟಿಸಿಕೊಂಡಿದೆ. ಇದರಿಂದ ಎಪಿಎಂಸಿ ಚುನಾವಣೆ ತಪ್ಪಿದಂತಾಗಿದೆ.

ಸ್ವಾಮಿನಿಷ್ಠೆಗೆ ಮತ್ತೆ ಒಲಿದ ಅದೃಷ್ಟ: ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸುರೇಶ್‌ಗೌಡ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಹೆಬ್ಬೂರು ಹೋಬಳಿ ಕುಂಟರಾಯನಪಾಳ್ಯದ ಉಮೇಶ್‌ಗೌಡ ಸ್ವಾಮಿನಿಷ್ಠೆಗೆ ಮತ್ತೊಮ್ಮೆ ಜಿಲ್ಲೆಯಲ್ಲಿಯೇ ಅತಿ ದೊಡ್ಡ ವಹಿವಾಟು ನಡೆಸುವ ತುಮಕೂರು ಎಪಿಎಂಸಿ ಅಧ್ಯಕ್ಷ ಪಟ್ಟ ಒಲಿದಿದೆ. ಮಲ್ಲಸಂದ್ರದ ಕೊಟ್ಟನಹಳ್ಳಿ ಗೊಲ್ಲರಹಟ್ಟಿಯ ಶಿವರಾಜ್ ಅವರನ್ನು ಉಪಾಧ್ಯಕ್ಷರನ್ನಾಗಿ ಮತ್ತೆ ನಾಮ ನಿರ್ದೇಶನ ಮಾಡಲಾಗಿದೆ.

ಇನ್ನು 1 ವರ್ಷ ಅವಧಿ ಪೂರೈಸಿದ್ದ ಎಪಿಎಂಸಿ ಸಮಿತಿಯ 15 ಸದಸ್ಯರಲ್ಲಿ ನಾಲ್ವರಿಗೆ ಕೊಕ್ ನೀಡಿ ಹೊಸಬರಿಗೆ ಮಣೆ ಹಾಕಲಾಗಿದೆ. ಕೆ.ಜಿ.ಸುಮಿತ್ರಾ, ಸಿದ್ದಗಂಗಯ್ಯ, ಟಿ.ಆರ್.ರಾಮಸ್ವಾಮಿಗೌಡ ಹಾಗೂ ತಾಂತ್ರಿಕ ಕಾರಣದಿಂದ ಸದಸ್ಯತ್ವ ಕಳೆದುಕೊಂಡಿದ್ದ ಸಿ.ಎಸ್.ಪ್ರತಾಪ್‌ಕುಮಾರ್ ಬದಲಿಗೆ ಚಿಕ್ಕಸಾರಂಗಿಯ ಸಿ.ಡಿ.ಪ್ರಕಾಶ್, ರಾಮಕೃಷ್ಣಾಪುರದ ಆರ್.ಸಿ.ಶಿವಕುಮಾರ್, ರಂಗನಾಥಪುರದ ಪಾರ್ವತಮ್ಮ ಹಾಗೂ ಹುಳ್ಳೇನಹಳ್ಳಿಯ ನೀಲಕಂಠಯ್ಯಗೆ ಅವಕಾಶ ಒದಗಿಬಂದಿದೆ. ಸೋಮವಾರ ಹೊಸ ಸಮಿತಿ ಅಧಿಕಾರ ಸ್ವೀಕರಿಸಲಿದೆ.

ಮತ್ತೆ ವಿಲೀನ

ಸಿದ್ದರಾಮಯ್ಯ ಸರ್ಕಾರದಲ್ಲಿ (2017) ಗೃಹ ಸಚಿವರಾಗಿದ್ದ ಡಾ.ಜಿ.ಪರಮೇಶ್ವರ್ ಒತ್ತಾಸೆಯಂತೆ ತುಮಕೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಕೊರಟಗೆರೆಯನ್ನು ಪ್ರತ್ಯೇಕಗೊಳಿಸಲಾಗಿತ್ತು. ಯಾವುದೇ ಆರ್ಥಿಕ ವಹಿವಾಟು ಕಾಣದ ಕೊರಟಗೆರೆ ಎಪಿಎಂಸಿಯನ್ನು ಮತ್ತೆ ತುಮಕೂರಿನಲ್ಲೇ ವಿಲೀನಗೊಳಿಸಲಾಗಿದೆ. ಪರಂ ಸಚಿವರಾಗಿದ್ದ ಅವಧಿಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ತುಮಕೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಅಧ್ಯಕ್ಷ, ಉಪಾಧ್ಯಕ್ಷ ಸೇರಿ 15 ಸದಸ್ಯರ ನಾಮನಿರ್ದೇಶನ ಮಾಡಲಾಗಿತ್ತು. 2018ರಲ್ಲಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕೇವಲ 40 ದಿನದ ಅಧಿಕಾರವನ್ನು ಜೆಡಿಎಸ್-ಕಾಂಗ್ರೆಸ್ ಸದಸ್ಯರು ಅನುಭವಿಸಿದ್ದರು. 2020ರ ಜುಲೈನಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಎಪಿಎಂಸಿ ನೇಮಕ ಭಾಗ್ಯ ಸಿಕ್ಕಿತ್ತು. ಈಗ 2ನೇ ಅವಧಿಗೆ ನಾಲ್ವರನ್ನು ಕೈಬಿಟ್ಟು ಮತ್ತೊಮ್ಮೆ ಬಹುತೇಕ ಹಳೆಯ ಸಮಿತಿಯನ್ನೇ ಬಿಜೆಪಿ ಸರ್ಕಾರ ಮುಂದುವರಿಸಿದೆ

3ನೇ ಬಾರಿಗೆ ಹೊನ್ನೇಶ್

ಸಂಸದ ಜಿ.ಎಸ್.ಬಸವರಾಜು ಬಲಗೈ ಬಂಟ ನೇರಳಾಪುರದ ಎನ್.ಎಸ್.ಹೊನ್ನೇಶ್ ಕುಮಾರ್‌ಗೆ 3ನೇ ಬಾರಿ ಎಪಿಎಂಸಿಗೆ ನಾಮನಿರ್ದೇಶನ ಅದೃಷ್ಟ ಕೂಡಿಬಂದಿದೆ. ಧರ್ಮಸಿಂಗ್ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಎಪಿಎಂಸಿ ಸಮಿತಿಗೆ ನೇಮಕವಾಗಿದ್ದ ಹೊನ್ನೇಶ್ ಕಳೆದ ಅವಧಿಯಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದರು. ಈಗ ಮತ್ತೆ ಸಮಿತಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ತುಮಕೂರು ಕೋಟಾದಡಿ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಕಳೆದ ಬಾರಿಯೇ ಸೂಚಿಸಿದ್ದ ಈಶ್ವರ ಗುಪ್ತರನ್ನು ಮತ್ತೆ ನೇಮಿಸಲಾಗಿದೆ.

15 ಸದಸ್ಯರ ನಾಮನಿರ್ದೇಶನ

ಉಮೇಶ್‌ಗೌಡ- ಅಧ್ಯಕ್ಷ (ಕುಂಟರಾಯನಪಾಳ್ಯ), ಶಿವರಾಜ್-ಉಪಾಧ್ಯಕ್ಷ (ಕೊಟ್ಟನಹಳ್ಳಿ), ಸದಸ್ಯರು: ಸಿ.ಡಿ.ಪ್ರಕಾಶ್ (ಚಿಕ್ಕಸಾರಂಗಿ), ಸಿದ್ದರಾಜು (ಎಕೆ ಕಾಲನಿ ಗೂಳೂರು), ಎನ್.ಎಸ್.ಹೊನ್ನೇಶ್‌ಕುಮಾರ್ (ನೇರಳಾಪುರ), ಆರ್.ಸಿ.ಶಿವಕುಮಾರ್ (ರಾಮಕೃಷ್ಣಪುರ), ನೀಲಕಂಠಯ್ಯ (ಹುಳ್ಳೇನಹಳ್ಳಿ), ಪಾರ್ವತಮ್ಮ (ರಂಗನಾಥಪುರ), ರತ್ನಮ್ಮ (ಯಲ್ಲಾಪುರ), ಪುಟ್ಟಲಕ್ಷ್ಮಮ್ಮ (ಬೆಳಗುಂಬ), ಲೋಕೇಶ್ (ಯಲ್ಲಾಪುರ), ಎನ್.ಟಿ.ನಾಗರಾಜು (ನಾಗವಲ್ಲಿ), ಸುಭಾಷಚಂದ್ರ (ರಂಗಯ್ಯನಪಾಳ್ಯ), ಶಿವರಾಜ್ (ಅರಳಕಟ್ಟೆ) ಹಾಗೂ ಈಶ್ವರಗುಪ್ತ (ತುಮಕೂರು) ಸದಸ್ಯರನ್ನಾಗಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ನೇಮಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net