ಎನ್‌ಸಿಪಿಸಿಆರ್‌ಗೆ ಪತ್ರ ಬರೆದ ಶಶಿಕುಮಾರ್

9CBPcrimeletter
Published on

ಬೆಂಗಳೂರು: ರಾಜ್ಯ ಮಕ್ಕಳ ಹಕ್ಕುಗಳ ಆಯೋಗವು ಕಾನೂನು ಬಾಹಿರವಾಗಿ ವರ್ತಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಮಕ್ಕಳ ಹಕ್ಕುಗಳ ಅರೆ ನ್ಯಾಯಿಕ ಅಧಿಕಾರವು ಖಾಸಗಿ ಶಾಲೆಗಳಿಗೆ ಭೀತಿ ಹುಟ್ಟಿಸಲು, ಕಿರುಕುಳ ನೀಡಲು ಬಳಕೆಯಾಗುತ್ತಿದ್ದು ತಕ್ಷಣವೇ ಮಧ್ಯ ಪ್ರವೇಶಿಸಿ ಆಯೋಗದ ಅಧ್ಯಕ್ಷರು ಮತ್ತು ಇತರ ಸದಸ್ಯರನ್ನು ಅಮಾನತುಗೊಳಿಸಿ ವಿಚಾರಣೆ ನಡೆಸುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ (ಎನ್‌ಸಿಪಿಸಿಆರ್)ಗೆ ಖಾಸಗಿ ಶಾಲೆಗಳ ಒಕ್ಕೂಟ (ಕ್ಯಾಮ್ಸ್)ನ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಪತ್ರ ಬರೆದು ಮನವಿ ಮಾಡಿದ್ದಾರೆ.

ನಗರದ ಖಾಸಗಿ ಶಾಲೆಯೊಂದರಲ್ಲಿ ೯ನೇ ತರಗತಿಯಲ್ಲಿ ಅನುತ್ತೀರ್ಣನಾಗಿದ್ದ ವಿದ್ಯಾರ್ಥಿಯೊಬ್ಬನನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ನಿಯಮದಂತೆ ಹತ್ತನೇ ತರಗತಿಗೆ ಖಾಸಗಿ ಅಭ್ಯರ್ಥಿಯಾಗಿ ನೋಂದಾಯಿಸಲಾಗಿತ್ತು. ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡ ಬಳಿಕ ವಿದ್ಯಾರ್ಥಿಯ ಪಾಲಕರು ಶಾಲೆಯಿಂದ ಕಾನೂನು ಬಾಹಿರವಾಗಿ ಎರಡು ಲಕ್ಷ ರೂ.ಗಳಿಗೆ ಬೇಡಿಕೆ ಸಲ್ಲಿಸಿದ್ದಾರೆ. ಪ್ರಕರಣ ಗಮನಕ್ಕೆ ಬರುತ್ತಿದ್ದಂತೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಇಬ್ಬರು ಸದಸ್ಯರು ಶಾಲೆಯ ಮುಖ್ಯ ಶಿಕ್ಷಕಿಯನ್ನು ಅವಹೇಳನ ಮಾಡಿದ್ದಾರೆ. ನೈಸರ್ಗಿಕ ಕಾನೂನನ್ನು ಪಾಲನೆ ಮಾಡಿಲ್ಲ. ಆಯೋಗದ ಸದಸ್ಯರ ಈ ನಡೆ ಕಾನೂನು ಬಾಹಿರವಾಗಿದೆ. ಆಯೋಗದ ಸದಸ್ಯರು ಪದೇ ಪದೇ ಈ ರೀತಿ ವರ್ತಿಸುತ್ತಿದ್ದಾರೆ. ಅನಾಮಧೇಯ ದೂರುಗಳನ್ನು ಆಧಾರಿಸಿ ಶಾಲೆಯ ಆವರಣದೊಳಗೆ ಅತಿಕ್ರಮ ಪ್ರವೇಶ ಮಾಡುತ್ತಿದ್ದಾರೆ. ಶಾಲೆಯ ಶಿಕ್ಷಕರ ವಿರುದ್ದ ದೂರು ಬರೆಯುವಂತೆ ಮಕ್ಕಳಿಗೆ ಪ್ರಚೋದನೆ ಮಾಡುತ್ತಿದ್ದಾರೆ. ಕಾನೂನು ಬಾಹಿರವಾಗಿ ಶಾಲೆಯ ದಾಖಲೆಗಳನ್ನು ಕೇಳುತ್ತಿದ್ದಾರೆ. ಲೀಗಲ್ ನೋಟಿಸ್ ನೀಡುವ ನಿಯಮ ಪಾಲನೆ ಮಾಡುತ್ತಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಆದ್ದರಿಂದ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯರ ನಡವಳಿಕೆಯ ಬಗ್ಗೆ ತಕ್ಷಣ ವಿಚಾರಣೆ ನಡೆಸಬೇಕು. ಮುಂಚಿತವಾಗಿ ನೋಟಿಸ್ ನೀಡದೆ, ಲಿಖಿತ ದೂರುಗಳಿಲ್ಲದೆ ಮತ್ತು ಶಾಲೆಯ ಮ್ಯಾನೇಜ್‌ಮೆಂಟ್‌ನವರು ಇಲ್ಲದ ಸಂದರ್ಭದಲ್ಲಿ ಶಾಲೆಯ ಆವರಣಕ್ಕೆ ಆಯೋಗದ ಸದಸ್ಯರ ಭೇಟಿಯನ್ನು ನಿಷೇಧಿಸಿ ಮಾರ್ಗಸೂಚಿ ಹೊರಡಿಸಬೇಕು. ಉಭಯ ಪಕ್ಷಗಳಿಗೂ ತಮ್ಮ ವಾದ ಮಂಡಿಸಲು ಅವಕಾಶ ನೀಡಬೇಕು ಮುಂತಾದ ಕ್ರಮಗಳನ್ನು ಕೈಗೊಳ್ಳುವಂತೆ ಶಶಿಕುಮಾರ್ ತಮ್ಮ ಪತ್ರದಲ್ಲಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net