

ಹುಬ್ಬಳ್ಳಿ : ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಪಡಿಸದೆ ಮುಂದುವರೆಸುವಂತೆ ಆಗ್ರಹಿಸಿ ರಾಜ್ಯದಾದ್ಯಂತ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಪೀಪಲ್ಸ್ ಫೋರಂ ಕರ್ನಾಟಕ ಎಜ್ಯುಕೇಶನ್ ಸಂಘಟನೆ ಧಾರವಾಡ ಸಂಚಾಲಕ ಸುಧೀಂದ್ರ ದೇಶಪಾಂಡೆ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ರಾಜಕೀಯ ವಿರೋಧಕ್ಕಾಗಿ ಉತ್ತಮವಾದ ಶಿಕ್ಷಣ ನೀತಿ ಬದಲಿಸಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಲ್ಲ ವರ್ಗದ ಜನರೊಂದಿಗೆ ರ್ಚಚಿಸಿ, ಶಿಕ್ಷಣ ತಜ್ಞರ ಸಭೆ ನಡೆಸಿಯೇ ಎನ್ಇಪಿ ಸಿದ್ಧಪಡಿಸಲಾಗಿದೆ. ಮಕ್ಕಳ ಉನ್ನತ ಶಿಕ್ಷಣಕ್ಕೆ ಇದು ಪೂರಕವಾಗಿದೆ. ಆದರೆ, ರಾಜ್ಯ ಸರ್ಕಾರ ಇದನ್ನು ವಿರೋಧಿಸಿ, ಎಸ್ಇಪಿ ಜಾರಿಗೆ ತಂದಿದೆ. ಇದು ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶಿಕ್ಷಣಕ್ಕೆ ತೊಡಕಾಗಲಿದೆ ಎಂದು ಹೇಳಿದರು.
ರಾಜ್ಯ ಸಂಯೋಜಕ ವೀರೇಶ ಬಾಳಿಕಾಯಿ ಮಾತನಾಡಿ, ಇದುವರೆಗೆ ರಾಜ್ಯಾದ್ಯಂತ 10.16 ಲಕ್ಷ ಜನರ ಸಹಿ ಸಂಗ್ರಹಿಸಲಾಗಿದೆ. 168 ತಾಲೂಕು, 34 ಶೈಕ್ಷಣಿಕ ಜಿಲ್ಲೆ 2,630 ಶಾಲಾ-ಕಾಲೇಜುಗಳು, 83,600 ಶಿಕ್ಷಕರು ಮತ್ತು ಆಡಳಿತ ಮಂಡಳಿ ಸದಸ್ಯರು, 26 ಸಾವಿರ ಪಾಲಕರು, 8.88 ಲಕ್ಷ ವಿದ್ಯಾರ್ಥಿಗಳು ಎನ್ಇಪಿ ಪರವಾಗಿ ಸಹಿ ಮಾಡಿದ್ದಾರೆ. ಮುಂದಿನ ವಾರ ರಾಜ್ಯಪಾಲರಿಗೆ ವರದಿ ಸಲ್ಲಿಸುತ್ತೇವೆ ಎಂದು ತಿಳಿಸಿದರು.
ಶಶಿಧರ ದಿಂಡೂರ, ಮುಕುಂದ ಜಠಾರ, ವಿನಾಯಕ ಜೋಶಿ, ಮಣಿಕಂಠ ಕಳಸ ಸುದ್ದಿಗೋಷ್ಠಿಯಲ್ಲಿ ಇದ್ದರು.