ವಿಜಯವಾಣಿ ಸುದ್ದಿಜಾಲ ಕೋಲಾರ
ಎನ್.ಮುನಿವೆಂಕಟೇಗೌಡ
ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆಂದೇ ರೂಪಿಸಿರುವ ಎತ್ತಿನಹೊಳೆ ಯೋಜನೆಯ ಬಗ್ಗೆ ಸಾರ್ವಜನಿಕರು ಆಸಕ್ತಿಯನ್ನು ಕಳೆದುಕೊಂಡಿದ್ದಾರೆ. ಜಿಲ್ಲೆಯ ಗಡಿ ಭಾಗದಲ್ಲಿ ಆಂಧ್ರಪ್ರದೇಶಕ್ಕೆ ಹರಿಯುತ್ತಿರುವ ಕೃಷ್ಣಾ ನದಿಯ ನೀರಿನ ಬಗ್ಗೆ ಜಿಲ್ಲೆಯ ಜನರಲ್ಲಿ ಆಸೆ ಚಿಗುರುತ್ತಿದೆ. ಅದಕ್ಕೆ ತಕ್ಕಹಾಗೆ ಸಂಸದರು ಕೃಷ್ಣಾ ನದಿಯ ನೀರು ತರುತ್ತೇವೆಂದು ಆಶ್ವಾಸನೆ ನೀಡಿದ್ದಾರೆ. ಇದು ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತದೆಯೋ ಕಾದು ನೊಡಬೇಕಾಗಿದೆ.
ಎತ್ತಿಹೊಳೆ ಯೋಜನೆಯ ಮೂಲಕ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರನ್ನು ನೀಡುತ್ತೇವೆಂದು ಎರಡೂ ಜಿಲ್ಲೆಯ ಜನಪ್ರತಿನಿಧಿಗಳು ಆಶ್ವಾಸನೆ ನೀಡಿ ೧೦ ವರ್ಷಗಳ ಹಿಂದೆ ಯೋಜನೆಗೆ ಅಡಿಗಲ್ಲು ಹಾಕಿ ಯೋಜನೆ ಪ್ರಗತಿಯಲ್ಲೂ ಇದ್ದು, ಈಗಾಗಲೇ ಹಾಸನ ಜಿಲ್ಲೆಯ ತನಕ ನೀರು ಹರಿದಿದೆ. ಕೋಲಾರ ಚಿಕ್ಕಬಳ್ಳಾಪುರಕ್ಕೆಂದೇ ರೂಪಿಸಿರುವ ಈ ಯೋಜನೆ ನಂತರದ ಜನಪ್ರತಿನಿಧಿಗಳ ಇಚ್ಛಾಶಕ್ತಿ ಇಲ್ಲದ ಕಾರಣ ಆ ಯೋಜನೆ ಕೇವಲ ಹಾಸನ ಜಿಲ್ಲೆಗೆ ಮಾತ್ರ ಸೀಮಿತವಾಗಿದೆ.
ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗೆ ಹರಿಸಬೇಕಾದರೆ ಇನ್ನೂ ಎಷ್ಟು ವರ್ಷಗಳು ಕಾಯಬೇಕೋ. ಅಷ್ಟರೊಳಗಾಗಿ ಯೋಜನೆಯಲ್ಲಿ ನೀರು ಲಭ್ಯವಿರುತ್ತದೆಯೋ ಇಲ್ಲವೋ ಎಂಬ ಅನುಮಾನ ಎರಡೂ ಜಿಲ್ಲೆಯ ಜನರನ್ನು ಕಾಡುತ್ತಿದೆ. ಆದರೆ ಜನಪ್ರತಿನಿಧಿಗಳ ಮಾತ್ರ ಬಂದೇ ಬರುತ್ತವೆ ಎಂದು ಆಶ್ವಾಸನೆ ನೀಡುತ್ತಲೇ ಇದ್ದಾರೆ. ಸಾರ್ವಜನಿಕರು ಮಾತ್ರ ಆಸಕ್ತಿಯನ್ನು ಕಳೆದುಕೊಂಡು ಎರಡೂ ಜಿಲ್ಲೆಗಳ ಗಡಿಯಲ್ಲಿರುವ ಕೃಷ್ಣಾ ನದಿಯ ನೀರು ಆಂಧ್ರಪ್ರದೇಶಕ್ಕೆ ಹರಿಯುತ್ತಿರುವುದರಿಂದ ಆಂಧ್ರ ಪ್ರದೇಶದ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕರ್ನಾಟಕದ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳ ಜನಪ್ರತಿನಿಧಿಗಳಿಗೆ ಇಲ್ಲದೆ ಆಗಿದೆಯಲ್ಲಾ ಎಂಬ ಪ್ರಶ್ನೆ ಕಾಡುತ್ತಿದೆ.
ಕೋಲಾರ ಸಂಸದ ಎಂ.ಮಲ್ಲೇಶ್‌ಬಾಬು ಕೋಲಾರ ಜಿಲ್ಲೆಗೆ ಕೃಷ್ಣಾನದಿಯ ನೀರನ್ನು ತರಲಾಗುವುದು. ಪ್ರಧಾನಮಂತ್ರಿಗಳ ಬಳಿ ಹಾಗೂ ಕೇಂದ್ರ ನೀರಾವರಿ ಸಚಿವರ ಬಳಿ ಚರ್ಚಿಸಲಾಗಿದೆ. ಹಾಗೂ ಆಂಧ್ರಪ್ರದೇಶದ ಮುಖ್ಯಮಂತ್ರಿಗಳ ಬಳಿ ಚರ್ಚೆ ನಡೆಸಲಾಗಿದೆ. ಕೃಷ್ಣಾನದಿಯ ನೀರನ್ನು ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಹರಿಸಲು ಯೋಜನೆ ರೂಪಿಸಲಾಗುವುದು ಎಂದು ಸಭೆ ಸಮಾರಂಭಗಳಲ್ಲಿ ಆಶ್ವಾಸನೆ ನೀಡುತ್ತಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಿಜೆಪಿಯಿಂದ ಆಯ್ಕೆಯಾಗಿರುವ ಸಂಸದ ಡಾ.ಕೆ.ಸುಧಾಕರ್ ಹಾಗೂ ಕೋಲಾರ ಜಿಲ್ಲೆಯ ಸಂಸದ ಎಂ.ಮಲ್ಲೇಶ್‌ಬಾಬು ಈ ಇಬ್ಬರೂ ಕೇಂದ್ರ ಸರ್ಕಾರದಲ್ಲಿ ಇರುವುದರಿಂದ ನಮ್ಮ ರಾಜ್ಯದವರೇ ಆದ ಕೇಂದ್ರ ಮಂತ್ರಿ ಕುಮಾರಸ್ವಾಮಿಯವರ ಜೊತೆಗೂಡಿ ಕೃಷ್ಣಾನದಿಯ ನೀರನ್ನು ಎರಡೂ ಜಿಲ್ಲೆಗಳಿಗೆ ತರಲು ಪ್ರಯತ್ನಿಸಬೇಕು. ಎರಡೂ ಜಿಲ್ಲೆಗಳ ಶಾಸಕರನ್ನು ಕೇಂದ್ರಕ್ಕೆ ಕರೆದೊಯ್ದು ಪ್ರಧಾನಮಂತ್ರಿಗಳ ಮೇಲೆ ಒತ್ತಡ ತಂದು ಕೃಷ್ಣಾನದಿಯ ಕರ್ನಾಟಕದ ಪಾಲನ್ನು ಪಡೆದುಕೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಪಡಿಸುತ್ತಿದ್ದಾರೆ.
ಎತ್ತಿನಹೊಳೆಗಿಂತ ಕೃಷ್ಣಾನದಿಯ ನೀರು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಮತ್ತು ಕೋಲಾರ ಜಿಲ್ಲೆಯ ಶ್ರೀನಿವಾಸಪುರಕ್ಕೆ ಹೊಂದಿಕೊAಡಿರುವ ಮದನಪಲ್ಲಿ ಹಾಗೂ ಕೆ.ಜಿ.ಎಫ್. ಸಮೀಪದ ಕುಪ್ಪಂ ಬಳಿ ಹರಿಯುತ್ತಿರುವುದರಿಂದ ಆಂಧ್ರದ ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ಕೃಷ್ಣಾ ಬಿ.ಸ್ಕೀಮ್‌ನಿಂದ ಹೆಚ್ಚುವರಿ ನೀರನ್ನು ಎರಡೂ ಜಿಲ್ಲೆಗಳಿಗೆ ಪಡೆಯಬಹುದು ಎಂಬುದು ನೀರಾವರಿ ತಜ್ಞರ ಮಾತಾಗಿದೆ. ಇದಕ್ಕೆ ಜನಪ್ರತಿನಿಧಿಗಳ ಇಚ್ಚಾಶಕ್ತಿ ಅವಶ್ಯಕತೆ ಇದೆ. ಭಾಷಣದಲ್ಲಿ ಹೇಳುವ ಮೊದಲು ಕಾರ್ಯಗತಕ್ಕೆ ಮುಂದಾಗಬೇಕೆAಬುದು ನೀರಾವರಿ ಹೋರಾಟಗಾರರ ಒತ್ತಾಯವಾಗಿದೆ.
ಚಿತ್ರ ೦೫ ಕೆ.ಎಲ್.ಆರ್. ೦೪ : ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಗಡಿಯ ಮದನಪಲ್ಲಿ ಬಳಿ ಹರಿಯುತ್ತಿರುವ ಕೃಷ್ಣಾನದಿಯ ನೀರನ್ನು ವೀಕ್ಷಣೆ ಮಾಡಿದ ಜನಪ್ರತಿನಿಧಿಗಳು