ಎತ್ತಿನಹೊಳೆ ಮೂಲ ಪ್ರದೇಶದ ಅಭಿವೃದ್ದಿಗೆ ಸರ್ಕಾರ ಹೆಚ್ಚಿನ ಅನುದಾನ ನೀಡಲು ಮುಂದಾಗದಿರುವುದು ಖಂಡನೀಯ: ಎಚ್.ಎಂ ವಿಶ್ವನಾಥ್

ಎತ್ತಿನಹೊಳೆ ಮೂಲ ಪ್ರದೇಶದ ಅಭಿವೃದ್ದಿಗೆ ಸರ್ಕಾರ ಹೆಚ್ಚಿನ ಅನುದಾನ ನೀಡಲು ಮುಂದಾಗದಿರುವುದು ಖಂಡನೀಯ: ಎಚ್.ಎಂ ವಿಶ್ವನಾಥ್
Published on


ಸಕಲೇಶಪುರ : ಎತ್ತಿನಹೊಳೆ ಮೂಲ ಪ್ರದೇಶದ ಅಭಿವೃದ್ದಿಗೆ ಸರ್ಕಾರ ಹೆಚ್ಚಿನ ಅನುದಾನ ನೀಡಲು ಮುಂದಾಗದಿರುವುದು ಖಂಡನೀಯವೆಂದು ಮಾಜಿ ಶಾಸಕ ಎಚ್.ಎಂ ವಿಶ್ವನಾಥ್ ಹೇಳಿದರು.


ಪಟ್ಟಣದ ಎತ್ತಿನಹೊಳೆ ಕಚೇರಿ ಮುಂಭಾಗ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ಕುಳಿತ ಹೆತ್ತೂರು ಹಾಗೂ ಹೆಬ್ಬಸಾಲೆ ಗ್ರಾ.ಪಂ ವ್ಯಾಪ್ತಿಯ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಮಲೆನಾಡಿಗರು ತ್ಯಾಗ ಮಾಡಿದ್ದರಿಂದ ಎತ್ತಿನಹೊಳೆ ಯೋಜನೆ ಅನುಷ್ಠಾನಗೊಂಡಿದೆ. ಆದರೆ ಎತ್ತಿನಹೊಳೆ ಯೋಜನೆಯ ಮೂಲ ಪ್ರದೇಶಗಳ ಅಭಿವೃದ್ದಿಗೆ ಸರ್ಕಾರ ಹೆಚ್ಚಿನ ಅನುದಾನ ಕೊಡುತ್ತಿಲ್ಲ. ಎತ್ತಿನಹೊಳೆ ಯೋಜನೆ ವ್ಯಾಪ್ತಿಯ ಪ್ರದೇಶಗಳ ಅಭಿವೃದ್ದಿಗೆ ಬರುತ್ತಿದ್ದ ಹಣ ಈ ಹಿಂದೆ ಹೊಳೆನರಸೀಪುರಕ್ಕೆ ಹೋಗುತ್ತಿತ್ತು ಇದೀಗ ಹಾಸನಕ್ಕೂ ಸಹ ಹೋಗುತ್ತಿದೆ. ಎತ್ತಿನಹೊಳೆ ಯೋಜನೆ ಹೆಸರಿನಲ್ಲಿ ಸುಮಾರು 1.25ಲಕ್ಷ ಮರಗಳನ್ನು ಕಡಿಯಲಾಗಿದೆ. ಆದರೆ ಪುನ: ಗಿಡಗಳನ್ನು ನೆಡಲು ಅರಣ್ಯ ಇಲಾಖೆ ಕ್ರಮ ಕೈಗೊಂಡಿರುವುದಿಲ್ಲ. 11500 ಸಾವಿರ ರೂ ಅಂದಾಜು ವೆಚ್ಚದಲ್ಲಿ ಆರಂ‘ಗೊಂಡ ಎತ್ತಿನಹೊಳೆ ಯೋಜನೆ 30000 ಕೋಟಿಗೆ ಏರಿದರು ಸಹ ಇನ್ನು ಬಯಲು ಪ್ರದೇಶಗಳಿಗೆ ಹನಿ ನೀರು ಕೊಡಲು ಸಾಧ್ಯವಾಗಿಲ್ಲ. ಕೂಡಲೆ ಎತ್ತಿನಹೊಳೆ ಮೂಲಪ್ರದೇಶಗಳ ಅಭಿವೃದ್ದಿಗೆ ಸರ್ಕಾರ ಹಣ ಬಿಡುಗಡೆ ಮಾಡಬೇಕು ಎಂದರು.


ಪ್ರತಿಭಟನಕಾರ ಹೆತ್ತೂರು ದೇವರಾಜ್ ಮಾತನಾಡಿ ಮಲೆನಾಡು ಭಾಗದಿಂದ ಬಯಲು ಸೀಮೆಗೆ ಸಾವಿರಾರು ಕೋಟಿ ವೆಚ್ಚದ ಯೋಜನೆಯ ಎತ್ತಿನಹೊಳೆ ಕಾಮಗಾರಿಯಿಂದ ಮಲೆನಾಡು ಭಾಗದಲ್ಲಿ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ರಸ್ತೆಗಳು ಸಂಪೂರ್ಣ ಹದಗೆಟ್ಟಿದೆ. ಈ ಕುರಿತು ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ ಮುಖ್ಯ ಕಚೇರಿಗೆ ರಸ್ತೆಗಳನ್ನು ನಿರ್ಮಿಸುವಂತೆ ಮನವಿ ಮಾಡಿದ್ದೆವು. ಆದರೆ ಸರ್ಕಾರದಲ್ಲಿ ಹಣವಿಲ್ಲ ಎಂಬ ಕಾರಣಕ್ಕೆ ನಮ್ಮ ಮನವಿಯನ್ನು ತಿರಸ್ಕರಿಸಿದ್ದಾರೆ. ಈ ಭಾಗದಲ್ಲಿ ಯಾವ ಪಕ್ಷಕ್ಕೆ ಜನರು ಮತ ಹಾಕುತ್ತಾರೆ ಎಂಬ ಅಂಕಿ ಅಂಶದ ಮೇಲೆ ರಸ್ತೆಗಳನ್ನು ಮಾಡಿಕೊಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದಾರೆ ಆದರಿಂದ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳಿಗೆ ಘೆರಾವ್ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.


ಎತ್ತಿನಹೊಳೆ ಯೋಜನೆಯ ಅಭಿಯಂತರಿಗೆ ಮನವಿ ಸಲ್ಲಿಸಿ ಪ್ರತಿಭಟನೆ ಕೈಬಿಡಲಾಯಿತು.
ಪ್ರತಿಭಟನೆಯ ನೇತೃತ್ವವನ್ನು ಮಾಜಿ ಜಿ.ಪಂ ಸದಸ್ಯ ಪರ್ವತಯ್ಯ, ಹೆಬ್ಬಸಾಲೆ ಗ್ರಾ.ಪಂ ಅಧ್ಯಕ್ಷ ಮಹೇಶ್ , ಬಿಜೆಪಿ ಹಿರಿಯ ಮುಖಂಡ ಹೆತ್ತೂರು ದೇವರಾಜ್, ಮೇಘರಾಜ್, ಎಚ್ ಎಂ ರಾಜು, ಡಿಲಾಕ್ಷ, ,ಹಳ್ಳಿಬೈಲು ನಾಗರಾಜ್, ನೇತ್ರಾವತಿ ನಾಗರಾಜ್, ಸತೀಶ್ , ರಾಧಾಕೃಷ್ಣ ಮುಂತಾದವರು ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net