

ಹುಣಸೂರು: ಅರಣ್ಯ ಮತ್ತು ವನ್ಯಜೀವಿ ಸಂಪತ್ತನ್ನು ರಕ್ಷಿಸದಿದ್ದರೆ ಮುಂದಿನ ಪೀಳಿಗೆಗೆ ಮರುಭೂಮಿಯನ್ನೇ ಬಿಟ್ಟುಹೋಗಬೇಕಾಗುತ್ತೆ ಎಂದು 8ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮೋಹನ್‌ಕುಮಾರ್.ಬಿ.ಪಾಟೀಲ್ ಆತಂಕ ವ್ಯಕ್ತಪಡಿಸಿದರು.
ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಅಂಗವಾಗಿ ಭಾನುವಾರ ಅರಣ್ಯ ಇಲಾಖೆಯ ಹುತಾತ್ಮರ ಸ್ಮಾರಕದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶ ಕಾಯುವ ಸೈನಿಕರಿಗಿಂತ ಅರಣ್ಯ ಇಲಾಖೆ ಸಿಬ್ಬಂದಿ ಕರ್ತವ್ಯ ನಿರ್ವಹಣೆ ಕಡಿಮೆಯೇನಲ್ಲ. ಎಂಥ ಕಠಿಣ ಪರಿಸ್ಥಿತಿಯಲ್ಲೂ ಜೀವದ ಹಂಗು ತೊರೆದು ಪ್ರಕೃತಿ ಸಂಪತ್ತು ಮತ್ತು ವನ್ಯಸಂಕುಲ ರಕ್ಷಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇತ್ತೀಚಿಗೆ ದೇಶದ ಸರ್ವೋಚ್ಚ ನ್ಯಾಯಾಲಯ ಅರಣ್ಯ ಸಂರಕ್ಷಣೆಯ ಕುರಿತು ಕಠಿಣ ಎಚ್ಚರಿಕೆ ನೀಡಿದೆ. ಪರಿಸರ ಅಸಮತೋಲನದಿಂದ ಮಳೆ ಕೊರತೆ ಅಥವಾ ಅತಿವೃಷ್ಟಿಯಂತಹ ಹವಾಮಾನ ವೈಪರೀತ್ಯಗಳು ಸಂಭವಿಸುತ್ತಿವೆ. ಇದು ಹೀಗೆ ಮುಂದುವರಿದಲ್ಲಿ ಮುಂದಿನ ಪೀಳಿಗೆಗೆ ನಾವು ಕೇವಲ ಬಂಜರು ಭೂಮಿಯನ್ನು ಬಿಟ್ಟು ಹೋಗಬೇಕಾದೀತು. ಈಗಲಾದರೂ ಎಚ್ಚೆತ್ತುಕೊಂಡು ಅರಣ್ಯ ಸಂಪತ್ತು ಉಳಿಸಬೇಕು ಎಂದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ(ಡಿಸಿಎಫ್) ಡಾ.ವಿ.ಕರಿಕಾಳನ್ ಅಧ್ಯಕ್ಷತೆ ವಹಿಸಿದ್ದರು. ಉಪವಿಭಾಗಾಧಿಕಾರಿ ವರ್ಣಿತ್ ನೇಗಿ, ಹುಣಸೂರು ಪ್ರಾದೇಶಿಕ ವಿಭಾಗದ ಡಿಸಿಎಫ್ ಅನುಷಾ(ಪ್ರಭಾರ), ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಿ.ಎಸ್.ದಯಾನಂದ್, ಆರ್‌ಎಫ್‌ಒ, ಡಿಆರ್‌ಎಫ್‌ಒ ಮತ್ತು ಸಿಬ್ಬಂದಿ ಹಾಜರಿದ್ದರು.
ಅರ್ಥಪೂರ್ಣ ಕಾರ್ಯಕ್ರಮ: ಅರಣ್ಯ ಇಲಾಖೆ ಹುತಾತ್ಮರಿಗಾಗಿ ಆಯೋಜಿಸಿದ್ದ ಕಾರ್ಯಕ್ರಮ ಅರ್ಥಪೂರ್ಣವಾಗಿತ್ತು. ಪರೇಡ್ ಕಮಾಂಡರ್‌ರಿಂದ ಕವಾಯಿತು ಆರಂಭಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನ್ಯಾಯಾಧೀಶರಾದ ಮೋಹನ್ ಕುಮಾರ್.ಬಿ.ಪಾಟೀಲ್ ಸೇರಿ ಹಿರಿಯ ಅಧಿಕಾರಿಗಳು, ವಲಯ ಅರಣ್ಯಾಧಿಕಾರಿಗಳು, ಕಚೇರಿ ಸಿಬ್ಬಂದಿ, ಅರಣ್ಯ ರಕ್ಷಕರು, ದ್ವಿತೀಯ ದರ್ಜೆ ಆಕೃತಿ ರಚನಕಾರರು, ಅರಣ್ಯ ವೀಕ್ಷಕರು, ವಾಹನ ಚಾಲಕರು, ಅಧಿಸೂಚಿತ ನೌಕರರು, ಗ್ರೂಪ್ ಡಿ ನೌಕರರು, ಆನೆ ಜಮೇದಾರ, ಮಾವುತ, ಕಾವಾಡಿಗಳು, ಹೊರಗುತ್ತಿಗೆ ನೌಕರರು ಹೀಗೆ ಎಲ್ಲ ವಿಭಾಗದಿಂದ ಒಬ್ಬೊಬ್ಬರು ಹುತಾತ್ಮರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಲು ಅವಕಾಶ ಕಲ್ಪಸಲಾಯಿತು
ಕವಾಯತು ತಂಡದಿಂದ ಗಾಳಿಯಲ್ಲಿ 3 ಸುತ್ತು ಗುಂಡು ಹಾರಿಸುವ ಮೂಲಕ ಹುತಾತ್ಮರಿಗೆ ಗೌರವ ಸಲ್ಲಿಸಲಾಯಿತು. ಎಸಿಎಫ್ ಡಿ.ಎಸ್.ದಯಾನಂದ ಹುತಾತ್ಮರ ದಿನಾಚರಣೆ ಕುರಿತು ಕಿರು ವಿವರಣೆ ನೀಡಿದರು. ಆರ್‌ಎಫ್‌ಒ ಕೆ.ಎನ್.ರಂಗಸ್ವಾಮಿ ಈವರೆಗೆ ಹುತಾತ್ಮಕರಾದ ಸಿಬ್ಬಂದಿ ಹೆಸರುಗಳನ್ನು ಸ್ಮರಿಸಿದರು. ಕವಾಯತು ತಂಡದಿಂದ ಅಬಾಡ್ ವಿತ್ ಮಿ ಗೀತೆ ನುಡಿಸುವ ಮೂಲಕ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.