

ನಂಜನಗೂಡು: ನಿಗದಿತ ಅವಧಿಯಲ್ಲಿ ಕಡತ ವಿಲೇವಾರಿ ಮಾಡಿ ಸಾರ್ವಜನಿಕರಿಗೆ ಸೂಕ್ತ ಸೇವೆ ನೀಡುವ ಜತೆಗೆ ಪಾರದರ್ಶಕ ಆಡಳಿತ ನೀಡುವ ನಿಟ್ಟಿನಲ್ಲಿ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಶಾಸಕ ದರ್ಶನ್ ಧ್ರುವನಾರಾಯಣ ಅಧಿಕಾರಿಗಳಿಗೆ ಸೂಚಿಸಿದರು.
ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ನಗರಸಭೆ ಅಧಿಕಾರಿಗಳ ಸಭೆ ನಡೆಸಿದ ಅವರು, ಜನರ ಆಶೋತ್ತರಗಳಿಗೆ ತಕ್ಕಂತೆ ಕೆಲಸ ನಿರ್ವಹಿಸುವುದು ನಮ್ಮ ಕರ್ತವ್ಯ. ವಿನಾಕಾರಣ ಜನರಿಗೆ ತೊಂದರೆ ಕೊಡದೆ ನಿಗದಿತ ಸಮಯಕ್ಕೆ ಕಡತ ವಿಲೇವಾರಿ ಮಾಡಬೇಕು. ಒಂದು ವೇಳೆ ಭ್ರಷ್ಟಾಚಾರದ ಬಗ್ಗೆ ದೂರು ಕೇಳಿ ಬಂದಲ್ಲಿ ಅಂತಹವರ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಸಿದರು. ನಗರಸಭೆಯಲ್ಲಿ ಮಧ್ಯವರ್ತಿಗಳ ಹಾವಳಿ ಬಗ್ಗೆಯೂ ದೂರುಗಳು ಕೇಳಿಬರುತ್ತಿದ್ದು, ಈ ಕೂಡಲೇ ಎಲ್ಲಕ್ಕೂ ಕಡಿವಾಣ ಹಾಕಬೇಕು. ಅಧಿಕಾರಿಗಳು ಸಾರ್ವಜನಿಕರೊಂದಿಗೆ ನೇರವಾಗಿ ಸಂಪರ್ಕ ಇಟ್ಟುಕೊಂಡು ಅವರನ್ನು ವಿನಾಕಾರಣ ಅಲೆಸದೆ ಕೆಲಸ ಮಾಡಿಕೊಡಬೇಕು ಎಂದು ಸೂಚಿಸಿದರು.
ಪಟ್ಟಣದಲ್ಲಿ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ಪಡೆಯಲು ಸಾರ್ವಜನಿಕರು ಮೈಸೂರಿನ ಮುಡಾ ಕಚೇರಿಗೆ ಅಲೆಯಬೇಕಾದ ಪರಿಸ್ಥಿತಿಯಿದೆ. ಸಾರ್ವಜನಿಕರನ್ನು ಮೈಸೂರಿಗೆ ಅಲೆಸುವ ಬದಲು ಮುಡಾ ಅಧಿಕಾರಿ ವಾರದಲ್ಲಿ ಮೂರು ದಿನ ನಗರಸಭೆ ಕಚೇರಿಯಲ್ಲೇ ಲಭ್ಯವಿರುವಂತೆ ಕ್ರಮವಹಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಪೌರಾಯುಕ್ತರಿಗೆ ಸೂಚಿಸಿದರು. ಸುಮಾರು ಎಂಟು ವರ್ಷಗಳಿಂದ ನೀರುಗಂಟಿಗಳು, 42 ಪೌರಕಾರ್ಮಿಕರ ಹುದ್ದೆ, ಬಿಲ್ ಕಲೆಕ್ಟರ್ ಹುದ್ದೆಗಳು ಖಾಲಿಯಿದ್ದು, ಈ ಹುದ್ದೆಗಳ ಭರ್ತಿಗೆ ಶೀಘ್ರ ಕ್ರಮವಹಿಸಬೇಕು ಎಂದರು.
ನಗರಸಭೆಯನ್ನು ಅತ್ಯಂತ ಸುಂದರ ಸ್ವಚ್ಛ ನಗರವನ್ನಾಗಿ ರೂಪಿಸುವ ಸಲುವಾಗಿ ಹಸಿ ಮತ್ತು ಒಣ ಕಸವನ್ನು ಮನೆಯಿಂದಲೇ ಬೇರ್ಪಡಿಸುವಂತೆ ಸೂಚನೆ ನೀಡಬೇಕು. ಒಣಕಸ ಸಂಗ್ರಹಿಸಲು ಒಂದು ದಿನ, ಹಸಿ ಕಸ ಸಂಗ್ರಹಿಸಲು ಮತ್ತೊಂದು ದಿನ ನಿಗದಿಪಡಿಸಿ ಕಸ ಸಂಗ್ರಹಣೆ ಮಾಡಿದ್ದಲ್ಲಿ ಸುಲಭವಾಗಿ ವಿಲೇವಾರಿ ಮಾಡಿ ಸ್ವಚ್ಛ ನಗರವನ್ನಾಗಿ ರೂಪಿಸಬಹುದು ಎಂದು ಸಲಹೆ ನೀಡಿದರು.
ಒಳಚರಂಡಿಗೆ ಕ್ರಮವಹಿಸಿ 2006ರಿಂದಲೂ ಒಳಚರಂಡಿ ವ್ಯವಸ್ಥೆ ಪೂರ್ಣಗೊಳ್ಳದೆ ತೊಂದರೆಯಾಗಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿದ್ದು, ಕಾಮಗಾರಿಯ ವರದಿ ನೀಡುವಂತೆ ಎಇಇ ಶ್ರೀನಿವಾಸ್ ಅವರಿಗೆ ದರ್ಶನ್ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶ್ರೀನಿವಾಸ್, ನೂತನ ಬಡಾವಣೆಗಳಿಗೆ ಹೊಸ ಸಂಪರ್ಕ ಮತ್ತು ನಿರ್ವಹಣಾ ಘಟಕ ತೆರೆಯಲು ಸುಮಾರು 37.5 ಕೋಟಿ ರೂ.ವೆಚ್ಚದಲ್ಲಿ ಕಾಮಗಾರಿ ಆರಂಭವಾಗಿದೆ. ಆದರೆ ಕಾಮಗಾರಿ ಕಳೆದ ಮೂರು ತಿಂಗಳಿಂದ ಸ್ಥಗಿತಗೊಂಡಿದ್ದು, ಶೀಘ್ರ ಕಾಮಗಾರಿ ಆರಂಭಿಸುವಂತೆ ಒಳಚರಂಡಿ ಆಡಳಿತ ಮಂಡಳಿಗೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ಇನ್ನು 247 ಕುಡಿಯುವ ನೀರಿನ ಬಿಲ್ ಯಥೇಚ್ಛವಾಗಿ ಬರುತ್ತಿದೆ ಎಂಬ ದೂರುಗಳಿವೆ. ಸರ್ಕಾರದ ನಿಯಮಾವಳಿಗಳನ್ನು ಸರಿಪಡಿಸಿ ಬಡವರಿಗೆ ಅನುಕೂಲವಾಗುವಂತೆ ದರ ನಿಗದಿಗೊಳಿಸಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡಬೇಕು. ಜತೆಗೆ ಬೀದಿ ದೀಪಗಳ ನಿರ್ವಹಣೆ ಕೈಗೊಳ್ಳಬೇಕು. ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಸರಿಯಾಗಿ ನಿರ್ವಹಣೆ ಮಾಡಿ ಅನುಕೂಲ ಮಾಡಿಕೊಡಬೇಕು ಎಂದು ಪೌರಾಯುಕ್ತರಿಗೆ ಸೂಚನೆ ನೀಡಿದರು.
ನಗರಸಭಾ ಪೌರಾಯುಕ್ತ ನಂಜುಂಡಸ್ವಾಮಿ, ನಗರಸಭಾ ಸದಸ್ಯರಾದ ಗಂಗಾಧರ್, ಗಾಯತ್ರಿ, ಪ್ರದೀಪ್, ಶ್ರೀಕಂಠಸ್ವಾಮಿ, ಶ್ವೇತಾಲಕ್ಷ್ಮೀ, ಮಹದೇವಪ್ರಸಾದ್, ಎನ್.ಎಸ್.ಯೋಗೀಶ್, ಎಸ್.ಪಿ.ಮಹೇಶ್ ಉಪಸ್ಥಿತರಿದ್ದರು.
ಮಾರುಕಟ್ಟೆಗೆ ಭೇಟಿ: 3 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಿರುವ ತರಕಾರಿ ಮಾರುಕಟ್ಟೆಗೆ ಶಾಸಕ ದರ್ಶನ್ ಧ್ರುವನಾರಾಯಣ ಭೇಟಿ ನೀಡಿ ಪರಿಶೀಲಿಸಿದರು. ಮಾರುಕಟ್ಟೆ ನಿರ್ಮಾಣ ಮಾಡಿರುವ ಉದ್ದೇಶ ಪೂರ್ಣಪ್ರಮಾಣದಲ್ಲಿ ಈಡೇರಿಕೆಯಾಗಿಲ್ಲ. ಮಾರುಕಟ್ಟೆಯಲ್ಲಿನ ಅವ್ಯವಸ್ಥೆ ಹಾಗೂ ಅಗತ್ಯ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಭೇಟಿ ನೀಡಿದ್ದೇನೆ ಎಂದು ತಿಳಿಸಿದರು. ಮಾಜಿ ಶಾಸಕ ಕಳಲೆ ಎನ್.ಕೇಶವಮೂರ್ತಿ ಸೇರಿದಂತೆ ಇತರರಿದ್ದರು.