

ಕೋಲಾರ: ಅರಣ್ಯ ಭೂಮಿ ಒತ್ತುವರಿ ಮಾಡಿರುವುದಾಗಿ ನನ್ನ ವಿರುದ್ಧ ಆರೋಪ ಮಾಡಿರುವ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್‌ಗೆ ತಲೆ ಕೆಟ್ಟಿರಬೇಕು, ಹುಚ್ಚನ ಮಾತಿಗೆ ಬೆಲೆ ಇಲ್ಲ ಎಂದು ಮಾಜಿ ಸ್ಪೀಕರ್ ಹಾಗೂ ಶ್ರೀನಿವಾಸಪುರ ಶಾಸಕ ಕೆ.ಆರ್.ರಮೇಶ್ ಕುಮಾರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಶ್ರೀನಿವಾಸಪುರ ಕ್ಷೇತ್ರದಲ್ಲಿ ಶಾಸಕ ಕೆ.ಆರ್.ರಮೇಶ್‌ಕುಮಾರ್ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿದ್ದು ಸರ್ಕಾರ ತನಿಖೆ ನಡೆಸಬೇಕೆಂದು ಮೈಸೂರಿನಲ್ಲಿ ಸೋಮವಾರ ಎಚ್.ವಿಶ್ವನಾಥ್ ಆಗ್ರಹಿಸಿದ್ದರು. ಇದಕ್ಕೆ ಕೋಲಾರದಲ್ಲಿ ಪ್ರತಿಕ್ರಿಯೆ ನೀಡಿದ ರಮೇಶ್‌ಕುಮಾರ್, ಅರಣ್ಯ ಭೂಮಿ ವಿವಾದಕ್ಕೆ ಸಂಬಂಧಿಸಿದ ದೂರು ಹೈಕೋರ್ಟ್‌ನಲ್ಲಿ ಇತ್ಯರ್ಥವಾಗಿದೆ. ಹೀಗಿದ್ದರೂ ವಿಶ್ವನಾಥ್ ಮತ್ಸರದಿಂದ ಮಾತನಾಡುತ್ತಿದ್ದಾರೆ, ಬೇಕಿದ್ದರೆ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿ ಮರು ತನಿಖೆ ಮಾಡಿಸಲಿ ಎಂದು ಸವಾಲು ಹಾಕಿದರು.
ವಿಶ್ವನಾಥ್ ಒಂದು ಪಕ್ಷದ ಅಧ್ಯಕ್ಷರಾಗಿದ್ದವರು, ಜವಾಬ್ದಾರಿಯಿಂದ ನಡೆದುಕೊಳ್ಳಬೇಕು, ಜ್ಞಾಪಕ ಶಕ್ತಿ ಇಲ್ಲದೆ ಮತ್ಸರದಿಂದ ಸಾಯ್ತ ಇದ್ದರೆ ನಾನೇನು ಮಾಡ್ಲಿ, ಬುದ್ಧಿ ಹಾಳಾಗಿದೆ, ಹೊಟ್ಟೆಗೆ ಏನ್ ತಿಂತಾ ಇದ್ದೇವೆ ಎಂದು ಗೊತ್ತಿಲ್ಲದೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಕಾಲವೇ ಅವರಿಗೆ ಬುದ್ಧಿ ಕಲಿಸುತ್ತೆ ಎಂದರು.