

ಸರಗೂರು: ಎಂಡನೇ ಬಾರಿಗೆ ಶಾಸಕರಾಗಿ ಮಾಡಿರುವ ಎಚ್.ಡಿ.ಕೋಟೆ, ಸರಗೂರು ತಾಲೂಕು ನನಗೆ ಎರಡು ಕಣ್ಣುಗಳದ್ದಂತೆ. ಈ ತಾಲೂಕುಗಳ ಜನತೆಯ ಋಣ ತೀರಿಸುವ ನಿಟ್ಟಿನಲ್ಲಿ ಪಕ್ಷಭೇದ ಮರೆತು ಕ್ಷೇತ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.
ಪಟ್ಟಣದ ಆರ್ಯ ಈಡಿಗ ಸಮುದಾಯ ಭವನದಲ್ಲಿ ಇತ್ತೀಚೆಗೆ ವರ್ತಕರ ಮಂಡಳಿ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ನಮ್ಮ ಕುಟುಂಬಕ್ಕೆ ಮೂರು ಬಾರಿ ಶಾಸಕ ಸ್ಥಾನದ ಅವಕಾಶ ನೀಡಿದ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಮ್ಮ ತಂದೆ ಚಿಕ್ಕಮಾದು ನಿಧನರಾದ ನಂತರ ಈ ಕ್ಷೇತ್ರದ ಜವಾಬ್ದಾರಿಯನ್ನು ನನ್ನ ರಾಜಕೀಯ ಗುರುಗಳಾದ ಮಾಜಿ ಸಂಸದ ದಿ.ಆರ್.ಧ್ರುವನಾರಾಯಣ್ ಅವರು ನನಗೆ ವಹಿಸಿ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ನೀಡಿ ಗೆಲುವು ಸಾಧಿಸಲು ಬೆನ್ನೆಲುಬಾಗಿ ನಿಂತರು. ಆರ್.ಧ್ರುವನಾರಾಯಣ್ ಅವರಿಂದ ನನ್ನ ರಾಜಕೀಯ ಜೀವನ ಆರಂಭವಾಯಿತು ಎಂದು ಸ್ಮರಿಸಿದರು.
ಪ್ರಸ್ತುತ ತಾಲೂಕಿನ ಅಭಿವೃದ್ಧಿ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ನಮ್ಮ ಜಿಲ್ಲೆಯವರೇ ಆದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದು, ಇದರಿಂದ ತಾಲೂಕುಗಳ ಅಭಿವೃದ್ಧಿ ಅನುಕೂಲವಾಗಲಿದೆ. ಸರಗೂರು ಮತ್ತು ಕೋಟೆಯನ್ನು ಮಾದರಿ ಪಟ್ಟಣ ಮಾಡಲಾಗುವುದು. ಈ ನಿಟ್ಟಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರದಿಂದ 8 ಕೋಟಿ ಅನುದಾನ ನೀಡಲಾಗಿದ್ದು, ಮತ್ತಷ್ಟು ಅಭಿವೃದ್ಧಿಗೆ ಕ್ರಮ ವಹಿಲಾಗುವುದು. ಇದಕ್ಕೆ ವರ್ತಕರ ಮಂಡಳಿ ಸಹಕಾರವೂ ಮುಖ್ಯ ಎಂದರು.
ಪಟ್ಟಣದಲ್ಲಿ ಪುರಾತನ ದೇವಾಲಯಗಳಿದ್ದು, ಐದು ವರ್ಷಗಳಿಂದ ನಿಂತಿರುವ ಜಾತ್ರೆಗಳನ್ನು ಮತ್ತೆ ಆರಂಭಿಸುವುದಕ್ಕೆ ಎಲ್ಲ ಜನಾಂಗದ ಮುಖಂಡರ ಸಭೆ ನಡೆಸಲಾಗುವುದು. ಪಟ್ಟಣದ ರಥೋತ್ಸವ ಹಾಗೂ ದೊಡ್ಡಹಬ್ಬಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಮನವಿ ಮಾಡಿದರು.
ವರ್ತಕರ ಮಂಡಳಿ ಅಧ್ಯಕ್ಷ ಎಸ್.ಎಸ್‌ಶ್ರೀನಿವಾಸ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ಪಿ. ರವಿ, ಚಿಕ್ಕವೀರನಾಯಕ, ಪ.ಪಂ. ಸದಸ್ಯ ಶ್ರೀನಿವಾಸ, ಕಾಂಗ್ರೆಸ್ ಮುಖಂಡ ಪ್ರಭುಸ್ವಾಮಿ ಮಾತನಾಡಿದರು. ವರ್ತಕರ ಮಂಡಳಿ ಮುಖಂಡ ಬ್ರಹ್ಮದೇವಯ್ಯ, ಕಾಂಗ್ರೆಸ್‌ನ ಟೌನ್ ಅಧ್ಯಕ್ಷ ನಾಗರಾಜು, ಸತೀಶ್‌ಗೌಡ, ವರ್ತಕರ ಮಂಡಳಿ ಉಪಾಧ್ಯಕ್ಷ ವೇಣುಗೋಪಾಲ್, ಸಬ್‌ಇನ್ಸ್‌ಪೆಕ್ಟರ್ ನಂದೀಶ್ ಕುಮಾರ್, ಮುಖಂಡರಾದ ಎಸ್.ವಿ.ಪ್ರಸಾದ್, ಯೋಗೇಶ್, ನಾಗಯ್ಯ, ಕುಮಾರ್, ವೆಂಕಟೇಶ್, ಪ್ರಸಾದ್, ನಾರಾಯಣ್, ವರುಣ್, ಮೋಹನಕುಮಾರ್ ಇತರರು ಇದ್ದರು.