ಎಚ್.ಡಿ.ಕೋಟೆ ಜೂನಿಯರ್ ಕಾಲೇಜಿಗೆ ಬೇಕಿದೆ ಕಾಯಕಲ್ಪ

17HDK 02 (1)
ಎಚ್.ಡಿ.ಕೋಟೆ ಪಟ್ಟಣದ ಪಿಯು ಕಾಲೇಜು ಹಿಂಭಾಗದಲ್ಲಿನ ಪ್ರೌಢಶಾಲೆಗೆ ಸೇರಿದ ಶೌಚಗೃಹದ ದುಸ್ಥಿತಿ.
Published on

ಎಚ್.ಡಿ.ಕೋಟೆ: ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ತಾಲೂಕಿನ ಪ್ರಥಮ ಜೂನಿಯರ್ ಕಾಲೇಜು ಕಾಯಕಲ್ಪದ ನಿರೀಕ್ಷೆಯಲ್ಲಿದೆ.

ಪಟ್ಟಣದ ಹೃದಯ ಭಾಗದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು 1973 ರಲ್ಲಿ ಪ್ರಾರಂಭವಾಗಿದ್ದು, ಇದೀಗ 50 ವರ್ಷ ಪೂರೈಸಿದೆ. 50 ವರ್ಷಗಳ ಹಿಂದೆ ತಾಲೂಕಿನಲ್ಲಿ ಪ್ರೌಢಶಾಲೆ ಹಾಗೂ ಪಿಯುಸಿ ಕಾಲೇಜು ಮಾತ್ರ ಇತ್ತು. ಇಲ್ಲಿ ವಿದ್ಯಾಭ್ಯಾಸ ಮಾಡಿದ ಹಲವಾರು ವಿದ್ಯಾರ್ಥಿಗಳು ಭಾರತೀಯ ಸೇವೆ (ಐಎಎಸ್), ರಾಜ್ಯ ಸೇವೆ ಸೇರಿದಂತೆ ಹಲವಾರು ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಕೆಲವರು ನಿವೃತ್ತಿ ಹೊಂದಿದ್ದರೆ ಇನ್ನೂ ಕೆಲವರು ಸೇವೆಯಲ್ಲಿದ್ದಾರೆ.

ಮಾಜಿ ಸಚಿವ ಎಂ.ಶಿವಣ್ಣ, ಮಾಜಿ ಶಾಸಕರಾದ ಎಚ್.ಬಿ.ಚಲುವಯ್ಯ, ಎನ್.ನಾಗರಾಜು, ಬೀಚನಹಳ್ಳಿ ಚಿಕ್ಕಣ್ಣ ಸೇರಿದಂತೆ ಹಲವಾರು ರಾಜಕಾರಣಿಗಳು ಇಲ್ಲಿ ಓದಿದ್ದು, ತಮ್ಮ ರಾಜಕೀಯ ಭವಿಷ್ಯವನ್ನು ಇಲ್ಲಿ ಕಂಡುಕೊಂಡಿದ್ದಾರೆ. ಇಂತಹ ಕಾಲೇಜು ಇಂದು ಸಮರ್ಪಕ ಕೊಠಡಿ, ಶೌಚಗೃಹ, ಲ್ಯಾಬ್, ಲೈಬ್ರರಿ, ಉದ್ಯಾನ ಇಲ್ಲದೇ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಹೆಂಚಿನ ಛಾವಣಿ ಕಟ್ಟಡದ ಹಳೇ ಕೊಠಡಿಗಳಲ್ಲಿ ಪಾಠ ನಡೆಯುತ್ತಿದ್ದು, ಇಂದಿನ ತಂತ್ರಜ್ಞಾನಕ್ಕೆ ತಕ್ಕಂತೆ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂಬುದು ಇಲ್ಲಿನ ಹಳೇ ವಿದ್ಯಾರ್ಥಿಗಳ ಬೇಡಿಕೆ.

ಪ್ರಸ್ತುತ ಕಾಲೇಜಿನಲ್ಲಿ 420 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, 6 ವಿಭಾಗಗಳಿವೆ. ವಿಷಯವಾರು ತರಗತಿಗಳಿಗೆ ಅವಶ್ಯಕತೆಗೆ ತಕ್ಕಂತೆ ಕೊಠಡಿಗಳು ಇಲ್ಲದಿರುವ ಕಾರಣ ಇರುವ ಕೊಠಡಿಗಳಲ್ಲೇ ಉಪನ್ಯಾಸಕರು ಪಾಠ-ಪ್ರವಚನ ಮಾಡಬೇಕಾಗಿದೆ.

ಇಪ್ಪತ್ತು ವರ್ಷದ ಹಿಂದೆ ಭೂಸೇನಾ ನಿಗಮಕ್ಕೆ ನಾಲ್ಕು ಕೊಠಡಿಗಳನ್ನು ಹೊಸದಾಗಿ ನಿರ್ಮಿಸಲು ಸರ್ಕಾರ ಟೆಂಡರ್ ನೀಡಿತ್ತು. ಆದರೆ ಗುಣಮಟ್ಟ ಇಲ್ಲದ ಕಾರಣ ಕೊಠಡಿಗಳ ಛಾವಣಿ ಕುಸಿದು, ಶಿಥಿಲಾವಸ್ಥೆಗೆ ತಲುಪಿದೆ. ಹಾಗಾಗಿ ಮಕ್ಕಳ ಹಿತದೃಷ್ಟಿಯಿಂದ ಕೊಠಡಿಗಳನ್ನು ಬಂದ್ ಮಾಡಿ ಪ್ರೌಢಶಾಲೆ ವಿಭಾಗಕ್ಕೆ ಸೇರಿದ ಎರಡು ಕೊಠಡಿಗಳಲ್ಲಿ ತರಗತಿ ನಡೆಸಲಾಗುತ್ತಿದೆ. ಕೊಠಡಿಗಳ ಸಂಖ್ಯೆ ಕಡಿಮೆ ಇದ್ದು ಹೆಚ್ಚುವರಿ ಕಟ್ಟಡಗಳು ಆಗಬೇಕಿದೆ. ನೂತನ ತಂತ್ರಜ್ಞಾನದ ಲ್ಯಾಬ್, ಲೈಬ್ರರಿ, ಕಂಪ್ಯೂಟರ್ ಸೆಂಟರ್ ಹಾಗೂ ಆಡಿಟೋರಿಯಂ ಹೊಸದಾಗಿ ಆಗಬೇಕಾಗಿದೆ.

ಆರು ತಿಂಗಳ ಹಿಂದೆ ಕಾಲೇಜಿಗೆ ಪ್ರಾಂಶುಪಾಲರಾಗಿ ಬಂದ ಪ್ರೊ.ಹನುಮಂತ ರಾವ್ ತಾಲೂಕಿನ ಎಲ್ಲ ಪ್ರೌಢಶಾಲೆಗಳಿಗೆ ಭೇಟಿ ನೀಡಿ ಕಾಲೇಜಿಗೆ ಹೆಚ್ಚು ಮಕ್ಕಳು ದಾಖಲಾತಿ ಆಗುವಂತೆ ನೋಡಿಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಇರುವ ಕೊಠಡಿಗಳನ್ನು ಬಳಸಿಕೊಂಡು ಶಿಕ್ಷಣ ನೀಡಲು ಶ್ರಮಿಸುತ್ತಿದ್ದಾರೆ. ಇದರೊಂದಿಗೆ ಎನ್ನೆಸ್ಸೆಸ್ಸ್, ಸೇವಾದಳ, ರೆಡ್‌ಕ್ರಾಸ್, ರೋವರ್ ಮತ್ತು ರೇಂಜರ್ಸ್ ಘಟಕ ತೆರೆದು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ ಬೆಳೆಸುತ್ತಿದ್ದಾರೆ.

ಕಲಾ, ವಿಜ್ಞಾನ, ವಾಣಿಜ್ಯ ವಿಭಾಗಗಳಿದ್ದು, ಬೋಧಕರು ಗುಣಮಟ್ಟ ಶಿಕ್ಷಣ ನೀಡುತ್ತಿದ್ದಾರೆ. ವಿಜ್ಞಾನ ವಿದ್ಯಾರ್ಥಿಗಳಿಗೆ ಉಚಿತ ನೀಟ್ ಮತ್ತು ಸಿಇಟಿ ತರಗತಿಗಳನ್ನೂ ನಡೆಸಲಾಗುತ್ತಿದೆ. ಜತೆಗೆ ಪಠ್ಯೇತರ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳನ್ನೂ ಮಾಡಲಾಗುತ್ತಿದೆ. ಐವತ್ತರ ಸಂಭ್ರಮದಲ್ಲಿರುವ ಕಾಲೇಜಿಗೆ ಮೂಲಸೌಕರ್ಯಗಳು ಅಗತ್ಯವಿದ್ದು, ಆ ನಿಟ್ಟಿನಲ್ಲಿ ಶಿಕ್ಷಣ ಮಂತ್ರಿಗಳು, ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು ಒದಗಿಸುವುದರ ಮೂಲಕ ಪುರಾತನ ಕಟ್ಟಡವನ್ನು ಉಳಿಸಿ ಉತ್ತಮ ವಾತಾವರಣ ನಿರ್ಮಾಣಕ್ಕೆ ಕೈ ಜೋಡಿಸಲಿ ಎಂಬುದು ಎಲ್ಲರ ಆಶಯ.
ಇನ್ನು ಇದೇ ಕ್ಯಾಂಪಸ್‌ನಲ್ಲಿರುವ ಪ್ರೌಢಶಾಲಾ ವಿಭಾಗಕ್ಕೆ ಸೇರಿದ ಶಾಲಾ ಕಟ್ಟಡ ಸರಿಯಾದ ನಿರ್ವಹಣೆ ಇಲ್ಲದ ಪರಿಣಾಮ ಬಹುತೇಕ ಕೊಠಡಿಗಳು ಶಿಥಿಲಾವಸ್ಥೆ ತಲುಪಿವೆ. ಶೌಚಗೃಹಗಳು ಗಬ್ಬುನಾರುತ್ತಿವೆ.

ಕಾಲೇಜಿನಲ್ಲಿ ಇರುವಷ್ಟು ಕೊಠಡಿಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಪಾಠ ಪ್ರವಚನ ಮಾಡುವ ಮೂಲಕ ಮಕ್ಕಳ ಉನ್ನತೀಕರಣಕ್ಕೆ ಶ್ರಮಿಸಲಾಗುತ್ತಿದೆ. ಶಾಸಕರು, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು ಸಹಕಾರ ನೀಡುತ್ತಿದ್ದು ಮುಂದಿನ ದಿನಗಳಲ್ಲಿ ಖಾಸಗಿ ಕಾಲೇಜನ್ನು ಮೀರಿಸುವ ನಿಟ್ಟಿನಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶ್ರಮಿಸಲಾಗುವುದು.
ಹನುಮಂತರಾವ್ ಪ್ರಾಂಶುಪಾಲ, ಜೂನಿಯರ್ ಕಾಲೇಜು, ಎಚ್.ಡಿ.ಕೋಟೆ

ತಾಲೂಕಿನ ಪ್ರಪ್ರಥಮ ಪಿಯು ಕಾಲೇಜು ಐವತ್ತು ವರ್ಷದ ಸಂಭ್ರಮದಲ್ಲಿದೆ. ಮುಂದಿನ ದಿನಗಳಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಹಳೇ ವಿದ್ಯಾರ್ಥಿಗಳ ಸಭೆ ಕರೆದು ಕಾಲೇಜು ಸುವರ್ಣ ಮಹೋತ್ಸವವನ್ನು ಎರಡು ದಿನ ನಡೆಸಲು ತಿರ್ಮಾನಿಸಲಾಗಿದೆ. ಕಾಲೇಜು ಇನ್ನೂ ಸಾಕಷ್ಟು ಅಭಿವೃದ್ಧಿ ಹೊಂದಬೇಕಾಗಿದ್ದು, ಅದಕ್ಕೆ ಪೂರಕವಾಗಿ ಸುವರ್ಣ ಮಹೋತ್ಸವಕ್ಕೆ ಶಿಕ್ಷಣ ಮಂತ್ರಿಗಳನ್ನು ಆಹ್ವಾನಿಸಿ ಈ ಬಗ್ಗೆ ಮಾಹಿತಿ ನೀಡಲಾಗುವುದು.
ಎಚ್.ಸಿ.ನರಸಿಂಹಮೂರ್ತಿ ಅಧ್ಯಕ್ಷ, ಕಾಲೇಜು ಅಭಿವೃದ್ಧಿ ಸಮಿತಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net