ಎಕ್ಸ್‌ಪೈರ್ ಹಂತದಲ್ಲಿ ಸಿದ್ದರಾಮಯ್ಯ ಸರ್ಕಾರ

R Ashok
Published on

ಚಿತ್ರದುರ್ಗ: ಸಿಎಂ ಸಿದ್ದರಾಮಯ್ಯ ಸರ್ಕಾರದ ಆಯಸ್ಸು ಎಕ್ಸ್‌ಪೈರ್ ಹಂತದಲ್ಲಿದ್ದು, ಪತನ ಗ್ಯಾರಂಟಿ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಭವಿಷ್ಯ ನುಡಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ 16 ತಿಂಗಳಲ್ಲಿ 16 ಭ್ರಷ್ಟಾಚಾರದ ಅವತಾರ ತಾಳಿದೆ. ತಿಂಗಳಿಗೊಂದು ಹಗರಣ ಕೈ ಗ್ಯಾರಂಟಿಯಾಗಿದೆ. ಇರುವಷ್ಟು ದಿನ ಸಿದ್ದರಾಮಯ್ಯ ಕಾಸು ಮಾಡಿಕೊಂಡು ಹೋಗಲಿದ್ದಾರೆ ಎಂದು ಆರೋಪಿಸಿದರು.

900 ಕೋಟಿ ರೂ. ಹಣವನ್ನು ಅಬಕಾರಿ ಮೂಲಕ ಕಾಂಗ್ರೆಸ್ ಸಂಗ್ರಹ ಮಾಡಿದೆ. ಕರ್ನಾಟಕವನ್ನು ಎಟಿಎಂ ಮಾಡಿಕೊಂಡು ಮಹಾರಾಷ್ಟ್ರ ಸೇರಿ ಅನ್ಯ ರಾಜ್ಯದ ಚುನಾವಣೆಗೆ ಬಳಸುತ್ತಿರುವುದು ಹೊಸತೇನಲ್ಲ. ಇಂಥ ಪ್ರಳಯಾಂತಕರಿಂದ ರಾಜ್ಯ ಲೂಟಿಯಾಗುತ್ತಿದೆ ಎಂದು ದೂರಿದರು.

ಉಪ ಚುನಾವಣೆ ವೇದಿಕೆ ಮೇಲೆ ಸಚಿವ ಜಮೀರ್ ರಾಜಾರೋಷವಾಗಿ ಹಣ ಹಂಚಿದರು. ಕಾಂಗ್ರೆಸ್ ಸರ್ಕಾರಕ್ಕೆ ಮಾನ, ಮರ್ಯಾದೆ ಇಲ್ಲ. ಇಷ್ಟೆಲ್ಲ ಆದರೂ ಸಿಎಂ ಜೀವನ ತೆರೆದ ಪುಸ್ತಕ, ವೈಟ್ ಪೇಪರ್ ಎನ್ನುತ್ತಾರೆ. ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಛೇಡಿಸಿದರು.

ಸಿದ್ದರಾಮಯ್ಯ, ಡಿಕೆಶಿ ಫೋಟೋ ಇರುವ ಅಕ್ಕಿಯನ್ನು ಕೇರಳದಲ್ಲಿ ಹಂಚುತ್ತಿದ್ದಾರೆ. ವಯನಾಡಿನಲ್ಲಿ ಸಾವು-ನೋವು ಸಂಭವಿಸಿದಾಗ ಕರ್ನಾಟಕದ ದುಡ್ಡು ಕೊಟ್ಟರು. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಮಾಡುತ್ತಿದ್ದು, ರಾಜ್ಯದ ಜನತೆಗೆ ಮೋಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net