ಎಐಡಿಎಸ್‌ಒ ಸಂಘಟನೆಯಿಂದ ಪ್ರತಿಭಟನೆ

5
Published on

ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿ ಸಂಬಂಧಿತ ಗೊಂದಲ ಬಗೆಹರಿಯದೆ ತರಗತಿಗಳು ನಡೆಯುತ್ತಿಲ್ಲ. ತರಗತಿಗಳು ನಡೆದು ಪಾಠಗಳು ಸಂಪೂರ್ಣ ಗೊಳ್ಳುವವರೆಗೂ ಪರೀಕ್ಷೆ ನಡೆಸದೆ ಇರುವಂತೆ ಆಗ್ರಹಿಸಿ ಸಾವಿರಾರು ವಿದ್ಯಾರ್ಥಿಗಳು ಎಐಡಿಎಸ್‌ಒ ಸಂಘಟನೆ ನೇತೃತ್ವದಲ್ಲಿ ಹಳೇ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಹೋರಾಟಗಾರ ಉಗ್ರನರಸಿಂಹೇಗೌಡ ಮಾತನಾಡಿ, ರಾಜ್ಯ ಸರಕಾರ, ಶೈಕ್ಷಣಿಕ ವಿಷಯಗಳಲ್ಲಿ ಕೇಂದ್ರದ ನಿರ್ಧಾರಗಳನ್ನು ಪಾಲಿಸವುದು ಕಡ್ಡಾಯವಲ್ಲ ಎಂದು ಸರ್ವೋಚ್ಚ ನ್ಯಾಯಾಲಯದ ನಿರ್ದೇಶನವಿದೆ. ಇದಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಗೆ ಪೂರಕವಾದ ಸ್ಪಷ್ಟ ನಿಲುವು ತಾಳಿ, ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಕಾಲೇಜು ಪ್ರಾರಂಭವಾಗಿ ತಿಂಗಳುಗಳೇ ಉರುಳಿದರೂ, ತರಗತಿಗಳು ಸರಿಯಾಗಿ ನಡೆದಿಲ್ಲ. ಈ ನಡುವೆ ಸೆಮಿಸ್ಟರ್ ಪರೀಕ್ಷೆ ವೇಳಾಪಟ್ಟಿ ಮತ್ತು ಪರೀಕ್ಷಾ ಶುಲ್ಕದ ಸುತ್ತೋಲೆ ಹೊರಡಿಸಿರುವ ವಿವಿಗಳ ಧೋರಣೆ ಖಂಡನೀಯವಾಗಿದೆ. ವಿವಿಗಳು ಮೊದಲು ತರಗತಿಗಳ ಪಠ್ಯ ಮುಗಿಸಿ, ನಂತರ ಪರೀಕ್ಷೆಯ ವೇಳಾಪಟ್ಟಿ ಪ್ರಕಟಿಸಬೇಕು ಎಂದು ಆಗ್ರಹಿಸಿದರು.

ಅತಿಥಿ ಉಪನ್ಯಾಸಕರಿಲ್ಲದೆ, ಒಂದೂ ತರಗತಿ ನಡೆಯದಿದ್ದರೂ ಸೆಮಿಸ್ಟರ್ ಪರೀಕ್ಷೆ ವೇಳಾಪಟ್ಟಿ ಮತ್ತು ಪರೀಕ್ಷಾ ಶುಲ್ಕದ ಸುತ್ತೋಲೆ ಹೊರಡಿಸಿದ್ದಾರೆ. ತರಗತಿಗಳನ್ನು ನಡೆಯದೆ ಪರೀಕ್ಷೆಗಳನ್ನು ಎದುರಿಸಲು ಸಾಧ್ಯವಿಲ್ಲ. ಹೀಗಾಗಿ ಈ ಕೂಡಲೇ ಪರೀಕ್ಷೆಗಳನ್ನು ಮುಂದೂಡಬೇಕು ಎಂದು ಒತ್ತಾಯಿದರು.

ಎಐಡಿಎಸ್‌ಓ ಜಿಲ್ಲಾಧ್ಯಕ್ಷೆ ಚಂದ್ರಕಲಾ ಮಾತನಾಡಿ, ರಾಜ್ಯದ ಎಲ್ಲ ಸರ್ಕಾರಿ ಪದವಿ ಕಾಲೇಜುಗಳು ಅತಿಥಿ ಉಪನ್ಯಾಸಕರ ಮೇಲೆ ಅವಲಂಬಿತವಾಗಿದ್ದು, ಇಲ್ಲಿಯವರೆಗೂ ತರಗತಿಗಳು ಸರಿಯಾಗಿ ನಡೆಯದೆ ಇರುವುದರಿಂದ ವಿದ್ಯಾರ್ಥಿಗಳು ಸಾಕಷ್ಟು ಆತಂಕದಲ್ಲಿದ್ದಾರೆ ಎಂದು ಹೇಳಿದರು.

ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನು ಅತಂತ್ರವನ್ನಾಗಿಸಿದೆ. ಮುಂದಿನ ತಿಂಗಳು ಪದವಿ ವಿದ್ಯಾರ್ಥಿಗಳ ಮೊದಲ ಆಂತರಿಕ ಪರೀಕ್ಷೆಗಳು ನಡೆಯಬೇಕಿದ್ದು ಪಾಠಗಳು ಇನ್ನೂ ಆರಂಭವಾಗಿಲ್ಲ. ಯುಜಿಸಿಯ ಹೊಸ ನಿರ್ದೇಶನಗಳು ಹಾಗೂ ಕೋರ್ಟ್‌ನಲ್ಲಿ ನಡೆಯುತ್ತಿರುವ ಪ್ರಕರಣದಿಂದ ಅತಿಥಿ ಉಪನ್ಯಾಸಕರ ನೇಮಕಾತಿಯು ನೆನೆಗುದಿಗೆ ಬಿದ್ದಿದೆ ಎಂದರು.

ವಿಶ್ವವಿದ್ಯಾಲಯದದಿಂದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ ಅವರಿಗೆ ಪರಿಹಾರ ನೀಡುವ ಬದಲು, ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ. ಒಂದುಕಡೆ ಸಾವಿರಾರು ವಿದ್ಯಾರ್ಥಿಗಳು ಅವರ ಭವಿಷ್ಯದ ಬಗ್ಗೆ ಚಿಂತೆಗೀಡಾಗಿದ್ದರೆ ಅತ್ಯಂತ ಉದಾಸೀನಾವಾಗಿ ಚರ್ಚೆ ಮಾಡುತ್ತೇವೆ ಎಂದು ಉತ್ತರಿಸಿರುವುದು ಬೇಸರ ತಂದಿದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ನಿತಿನ್, ಪದಾಧಿಕಾರಿ ಸ್ವಾತಿ, ಚಂದ್ರಿಕಾ, ಅಂಜಲಿ, ಅಭಿಷೇಕ್, ಮಮತಾ ಮತ್ತು ಮಹಾರಾಣಿ ಹಾಗೂ ಸಿದ್ದಾರ್ಥ ನಗರದ ಪದವಿ ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net