

ಗುರುಗುಂಟಾ/ಹಟ್ಟಿ: ಮನೆ ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ಖದೀಮನನ್ನು ಎಂಟು ತಿಂಗಳ ಬಳಿಕ ಹಟ್ಟಿಚಿನ್ನದಗಣಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ದೇವದುರ್ಗ ತಾಲೂಕಿನ ಹೇರೂರು ಗ್ರಾಮದ ಹನುಮಂತ ಈಶ್ವರಪ್ಪ ಸಿಂಗ್ ಬಂಧಿತ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಗುರುಗುಂಟಾ ಬಳಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ವಿರೂಪಾಕ್ಷಪ್ಪ ಸಜ್ಜನ್ ಮನೆಯಲ್ಲಿ ಕಳ್ಳತನವಾಗಿತ್ತು. ಮನೆ ಮಾಲೀಕ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು.
ಎಸ್ಪಿ ಪುಟ್ಟಮಾದಯ್ಯ, ಹೆಚ್ಚುವರಿ ಎಸ್ಪಿ ಹರೀಶ್ ಹಾಗೂ ಲಿಂಗಸುಗೂರು ಡಿವೈಎಸ್ಪಿ ದತ್ತಾತ್ರೇಯ ಕಾರ್ನಾಡ್ ಮಾರ್ಗದರ್ಶನದಲ್ಲಿ ಹಟ್ಟಿಚಿನ್ನದಗಣಿ ಸಿಪಿಐ ಹೊಸಕೇರಪ್ಪ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.
ನಂತರ ಕಾರ್ಯಾಚರಣೆಗಿಳಿದ ತಂಡಕ್ಕೆ ಶನಿವಾರ ಹಟ್ಟಿ ಪಟ್ಟಣದ ಪಾಮನಕಲ್ಲೂರ್ ಕ್ರಾಸ್ ಬಳಿ ಕಳ್ಳ ಸೆರೆ ಸಿಕ್ಕಿದ್ದಾನೆ. ತೀವ್ರ ತನಿಖೆಗೆ ಒಳಪಡಿಸಿದಾಗ ಬಾಗಲಕೋಟೆ ಜಿಲ್ಲೆಯ ಇಳಕಲ್‌ನಲ್ಲಿ ಕಳ್ಳತನ ಮಾಡಿರುವುದು ಬಯಲಾಗಿದ್ದು, ಈತನಿಂದ ಒಟ್ಟು 8 ಲಕ್ಷ ರೂ. ಬೆಲೆ ಬಾಳುವ 80.32 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಪ್ರಕರಣ ಭೇದಿಸಿದ ಹಟ್ಟಿಚಿನ್ನದಗಣಿ ಸಿಪಿಐ ಹೊಸಕೇರಪ್ಪ ತಂಡದ ಕಾರ್ಯಕ್ಕೆ ಎಸ್ಪಿ ಶ್ಲಾಘಿಸಿದ್ದಾರೆ. ಪಿಎಸ್‌ಐ ಧರ್ಮಣ್ಣ, ಸಿಬ್ಬಂದಿ ಶೇಖ್ ರೆಹಮಾನ್, ವಿಜಯ, ನಾರಾಯಣ, ಬಸವರಾಜ, ವಿಶ್ವನಾಥ, ಬಸವರಾಜ, ಅಮರೇಶ, ಶರಣಬಸವ, ನಾಗಾರ್ಜುನ, ಬಸವರಾಜ, ಅಜೀಂಪಾಷಾ ಕಾರ್ಯಾಚರಣೆಯಲ್ಲಿದ್ದರು.