

ದೊಡ್ಡಬಳ್ಳಾಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜತೆ ಸಭೆ ನಡೆಸಿ ಅಂತಿಮ ನಿರ್ಧಾರ ಆಗುವವರೆಗೂ ಎಂಎಸ್‌ಜಿಪಿ ಘಟಕಕ್ಕೆ ಕಸದ ಲಾರಿಗಳನ್ನು ಕಳುಹಿಸುವುದಿಲ್ಲ ಎಂಬ ಅಧಿಕಾರಿಗಳ ಭರವಸೆ ಹುಸಿ ಆಗಿದೆ. ಕಣ್ತಪ್ಪಿಸಿ ಘಟಕಕ್ಕೆ ಬಂದ ಕಸದ ಲಾರಿಯನ್ನು ಗುರುವಾರ ತಡೆದ 50ಕ್ಕೂ ಹೆಚ್ಚು ರೈತರು, ಚಾಲಕನಿಗೆ ಎಚ್ಚರಿಕೆ ನೀಡಿ ಹಿಂದಕ್ಕೆ ಕಳುಹಿಸಿದರು.
ಎಂಎಸ್‌ಜಿಪಿ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ರೈತರು ಇತ್ತೀಚೆಗೆ ಪ್ರತಿಭಟನೆ ಆರಂಭಿಸಿದ್ದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದಿದ್ದ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್, ಘಟಕ ಸ್ಥಗಿತಗೊಳಿಸುವ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸುವುದಾಗಿಯೂ, ಅಲ್ಲಿಯವರೆಗೆ ಘಟಕಕ್ಕೆ ಕಸದ ಲಾರಿ ಕಳುಹಿಸುವುದಿಲ್ಲ ಎಂದು ಭರವಸೆ ನೀಡಿದ್ದರು. ಇದನ್ನು ನಂಬಿದ ರೈತರು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರು.
ಪಾಳಿಯಲ್ಲಿ ಕಣ್ಗಾವಲು: ಕಣ್ತಪ್ಪಿಸಿ ಕಸದ ಲಾರಿ ಕಳುಹಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ರೈತರು ಎಚ್ಚರಿಕೆ ವಹಿಸಿದ್ದಾರೆ. ರಾತ್ರಿ ವೇಳೆ ಘಟಕಕ್ಕೆ ಲಾರಿಗಳು ಬರಬಹುದು ಎಂಬ ಕಾರಣಕ್ಕಾಗಿ ಪಾಳಿ ಆಧಾರದಲ್ಲಿ ಕಣ್ಗಾವಲು ಇರಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಸೇರಿ ಘಟಕಕ್ಕೆ ಸಂಪರ್ಕ ಒದಗಿಸುವ ಎಲ್ಲ ಮಾರ್ಗದಲ್ಲೂ ರಾತ್ರಿ-ಹಗಲು ಎನ್ನದೆ ರೈತರು ಕಾವಲು ನಿಂತಿದ್ದಾರೆ. ಅದರೂ ಗುರುವಾರ ರಾತ್ರಿ ಲಾರಿಯೊಂದು ಘಟಕಕ್ಕೆ ಹೋಗಲೆಂದು ಮೂಗೇನಹಳ್ಳಿ ಕ್ರಾಸ್ ಬಳಿ ಬಂದಾಗ ಅಲ್ಲಿ ಕಾವಲಿದ್ದ ರೈತರು ಅದನ್ನು ತಡೆದರು. ಇನ್ನೂ ಹಲವು ಲಾರಿಗಳು ಬರುತ್ತಿರುವ ಸೂಚನೆ ಸಿಕ್ಕಿದ್ದರಿಂದ, ಸ್ಥಳಕ್ಕೆ 50ಕ್ಕೂ ಹೆಚ್ಚು ರೈತರನ್ನು ಕರೆಸಿಕೊಂಡರು. ಲಾರಿಗೆ ಬೆಂಕಿ ಹಚ್ಚುವುದಾಗಿ ರೈತರು ಬೆದರಿಕೆ ಹಾಕಿ, ತಡೆದಿದ್ದರು. ಸ್ಥಳಕ್ಕೆ ಬಂದ ನವ ಬೆಂಗಳೂರು ಹೋರಾಟ ಸಮಿತಿ ಗೌರವಾಧ್ಯಕ್ಷ ಸಾರಥಿ ಸತ್ಯಪ್ರಕಾಶ್ ಅವರು ಲಾರಿಯ ಚಾಲಕನಿಗೆ ಎಚ್ಚರಿಕೆ ನೀಡಿ, ವಾಪಸ್ ಕಳುಹಿಸಿದರು.