

ಬೆಳಗಾವಿ: ಲೋಕಸಭಾ ಉಪ ಚುನಾವಣೆ ಬಳಿಕ, ಬೆಳಗಾವಿಯ ಬಿಜೆಪಿ-ಕಾಂಗ್ರೆಸ್ ಮುಖಂಡರ ಚಿತ್ತ ವಿಧಾನ ಪರಿಷತ್ ಚುನಾವಣೆಯತ್ತ ನೆಟ್ಟಿದೆ. ಪ್ರತಿಸಲ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗುವ 25 ಎಂಎಲ್‌ಸಿಗಳ 6 ವರ್ಷದ ಅವಧಿ ಜನವರಿ 5, 2021ಕ್ಕೆ ಪೂರ್ಣಗೊಳ್ಳಲಿದೆ. ಹಾಗಾಗಿ, ಎರಡೂ ರಾಜಕೀಯ ಪಕ್ಷಗಳಲ್ಲಿ ಟಿಕೆಟ್ ಪಡೆಯುವುದಕ್ಕಾಗಿ ತೆರೆಮರೆಯಲ್ಲಿ ಬಿರುಸಿನ ಕಸರತ್ತು ನಡೆಯುತ್ತಿದೆ.
ಕಾಂಗ್ರೆಸ್‌ನಿಂದ ಲಿಂಗಾಯತ ಸಮುದಾಯದ, ಮಾಜಿ ಸಚಿವ ಪ್ರಕಾಶ ಹುಕ್ಕೇರಿ, ಬೆಳಗಾವಿಯ ಯುವ ಮುಖಂಡ ಚನ್ನರಾಜ ಹಟ್ಟಿಹೊಳಿ, ಜೈನ ಸಮುದಾಯದ ಅಂಕಲಿ ವೈದ್ಯ ಎನ್.ಎ.ಮಗದುಮ್ಮ ಮುಂತಾದವರು ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ. ಜಾರಕಿಹೊಳಿ ಕುಟುಂಬದಿಂದ ಲಖನ್ ಜಾರಕಿಹೊಳಿ ಅವರು ಪಕ್ಷೇತರರಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದ್ದು, ಕೊನೆ ಗಳಿಗೆಯಲ್ಲಿ ಅದಲು-ಬದಲು ಆಗುವ ನಿರೀಕ್ಷೆ ಇದೆ. ಆದರೆ, ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಗೆದ್ದು ಪ್ರಸ್ತುತ ಎಂಎಲ್‌ಸಿಯಾಗಿರುವ ವಿವೇಕರಾವ್ ಪಾಟೀಲ ಅವರ ನಡೆ ಇನ್ನೂ ನಿಗೂಢವಾಗಿದೆ.
ಬೆಳಗಾವಿ ಜಿಲ್ಲೆಯಿಂದ ಜಿಪಂ, ತಾಪಂ, ಪಟ್ಟಣ ಪಂಚಾಯಿತಿ, ಪುರಸಭೆ, ಗ್ರಾಮ ಪಂಚಾಯಿತಿ 10 ಸಾವಿರಕ್ಕೂ ಅಧಿಕ ಚುನಾಯಿತ ಪ್ರತಿನಿಧಿಗಳು ಇಬ್ಬರು ಎಂಎಲ್‌ಸಿಗಳನ್ನು ವಿಧಾನ ಪರಿಷತ್‌ಗೆ ಆಯ್ಕೆ ಮಾಡಿ ಕಳುಹಿಸುವ ಹಕ್ಕು ಹೊಂದಿದ್ದಾರೆ. ಬಿಜೆಪಿಯಿಂದ ಲಿಂಗಾಯತ ಸಮುದಾಯದ ಮುಖಂಡ, ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ ಕವಟಗಿಮಠ 3ನೇ ಬಾರಿಗೆ ಪುನರಾಯ್ಕೆ ಬಯಸಿ, ಚುನಾವಣೆಗೆ ಸ್ಪರ್ಧಿಸಲಿದ್ದಾರೆ.
ಇತ್ತೀಚೆಗೆ ಗಾಂಧಿ ನಗರದ ಬಳಿ ಇರುವ ಖಾಸಗಿ ಹೋಟೆಲ್‌ನಲ್ಲಿ ನಡೆದ ಬಿಜೆಪಿ ಮುಖಂಡರ ಸಭೆಯಲ್ಲಿ ಬೆಳಗಾವಿಯ ಕುರುಬ ಸಮುದಾಯದ ಮುಖಂಡ ಲೋಕಸಭಾ ಮಾಜಿ ಸದಸ್ಯ ಅಮರಸಿಂಹ ಪಾಟೀಲ, ಲಿಂಗಾಯತ ಸಮುದಾಯದ ಮತ್ತೋರ್ವ ಮುಖಂಡ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಅವರು, ಎಂಎಲ್‌ಸಿಯ ಮತ್ತೊಂದು ಸ್ಥಾನಕ್ಕೆ ತಮಗೆ ಟಿಕೆಟ್ ನೀಡಬೇಕು ಎಂದು ಬಿಜೆಪಿ ವರಿಷ್ಠರಿಗೆ ಹಿರಿಯ ಮುಖಂಡರ ಮೂಲಕ ಸಂದೇಶ ರವಾನಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಒಟ್ಟಿನಲ್ಲಿ ಚುನಾವಣೆ ೋಷಣೆಯಾಗುವುದಕ್ಕಿಂತ ಮೊದಲೇ ಬಿ.ಾರ್ಮ್ ಪಡೆಯುವುದಕ್ಕಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಲ್ಲಿ ಲಾಬಿ ಜೋರಾಗಿ ನಡೆಯುತ್ತಿರುವುದಂತೂ ಸತ್ಯ. ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ವಿಧಾನ ಪರಿಷತ್ ಚುನಾವಣೆ ಉಸ್ತುವಾರಿಯನ್ನು ಬಿಜೆಪಿ ವರಿಷ್ಠರು ಸಚಿವ ಉಮೇಶ ಕತ್ತಿ ಅವರಿಗೆ ವಹಿಸುವ ಸಾಧ್ಯತೆಗಳಿವೆ.
2023ರ ವಿಧಾನಸಭೆ ಚುನಾವಣೆಗೆ ಸವದತ್ತಿ ವಿಧಾನಸಭೆ ಕ್ಷೇತ್ರದಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಒಂದು ವೇಳೆ ಸತೀಶ, ಸವದತ್ತಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿದರೆ ಸವದತ್ತಿಯ ಬಿಜೆಪಿ ಶಾಸಕ ಆನಂದ ಮಾಮನಿ ಅವರ ಮಧ್ಯೆ ನೇರ-ಹಣಾಹಣಿ ನಡೆಯುವುದು ಖಚಿತ. ಮತ್ತೊಂದೆಡೆ ಕಾಂಗ್ರೆಸ್ ಹೈಕಮಾಂಡ್ ಒಪ್ಪಿದರೆ ಮತ್ತೊಮ್ಮೆ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಾನು ರೇಡಿಯಾಗಿದ್ದೇನೆ ಎಂದು ಸತೀಶ ಜಾರಕಿಹೊಳಿ ಹೇಳಿದ್ದಾರೆ. ಯಮಕನಮರಡಿ ವಿಧಾನಸಭೆ (ಮೀಸಲು)ಕ್ಷೇತ್ರದಿಂದ ತಮ್ಮ ಪುತ್ರ ರಾಹುಲ್ ಜಾರಕಿಹೊಳಿ ಅವರನ್ನು ಸತೀಶ ಜಾರಕಿಹೊಳಿ ಅವರು ಕಣಕ್ಕಿಳಿಸಲಿದ್ದಾರೆ ಎಂಬ ಗುಸುಗುಸು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
| ರಾಯಣ್ಣ ಆರ್.ಸಿ.