

ಹಾಸನ: ನಗರದ ಸಾಲಗಾಮೆ ರಸ್ತೆ ಬಳಿ ಇರುವ ಎಂ.ಕೃಷ್ಣ ಅಂಧ ಮಕ್ಕಳ ಶಾಲೆಯಲ್ಲಿ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಲಾಯಿತು.
ಎಂ. ಕೃಷ್ಣ ಅಂಧ ಮಕ್ಕಳ ಶಾಲೆಯ ಅಧ್ಯಕ್ಷ ಬಿ.ಕೆ. ಮಂಜುನಾಥ್ ಮಾತನಾಡಿ, ಹಿಂದಿನ ದಿನಗಳಲ್ಲಿ ಈ ದೇಶ ತುಂಬಾ ಸಂಪತ್ಭರಿತವಾಗಿತ್ತು. ಬೇರೆ ದೇಶದವರು ಆಕ್ರಮಣ ಮಾಡಿ ಇಲ್ಲಿನ ಸಂಪತ್ತನ್ನು ದೋಚಿದರು. ಆನಂತರ ಹೋರಾಟಗಾರರ ಫಲವಾಗಿ ದೇಶ ಸ್ವತಂತ್ರವಾಯಿತು. ಈಗ ನಮ್ಮ ದೇಶ ಎಲ್ಲಾ ಕ್ಷೇತ್ರದಲ್ಲೂ ಮುಂದೆ ಇದ್ದೇವೆ. ಇವತ್ತು ಅಂಧ ಮಕ್ಕಳು ಕೂಡ ಐಎಎಸ್ ಅಧಿಕಾರಿಗಳಾಗಿದ್ದಾರೆ ಹಾಗೂ ಅನೇಕ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.
ಈ ಅಂಧ ಮಕ್ಕಳ ಶಾಲಾ ಕಟ್ಟಡ ಕಟ್ಟಿ 40 ವರ್ಷಗಳು ಆಗಿರಬಹುದು. ಈಗ ಬಹಳ ಶಿಥಿಲವಾಗಿದೆ. ಇಂತಹ ಶಿಥಿಲವಾದ ಕಟ್ಟಡದಲ್ಲಿ ಯಾರೂ ಕೂಡ ಮಕ್ಕಳನ್ನು ಸೇರಿಸಲು ಮುಂದೆ ಬರುವುದಿಲ್ಲ. ಎಂ.ಕೃಷ್ಣ ಅಂಧ ಮಕ್ಕಳ ಶಾಲೆ ಕಟ್ಟಡವನ್ನು ನವೀಕರಿಸಬೇಕು. ಈ ಜಿಲ್ಲೆಯಲ್ಲಿ ಅನೇಕ ದಾನಿಗಳಿದ್ದು, ಅನೇಕರು ಕೈ ಜೋಡಿಸಲಿದ್ದಾರೆ. ಹೊಸ ಕಟ್ಟಡ ನಿರ್ಮಾಣಕ್ಕಾಗಿ ಜಿಲ್ಲಾಡಳಿತ ಮತ್ತು ಶಾಸಕರಿಗೆ ಕೊಡುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ದಾನಿಗಳಾದ ಶ್ರೀನಿವಾಸ್, ಜಾನೆಕೆರೆ ಹೇಮಂತ್, ವಿದ್ವಾನ್ ನಂಜುಂಡಯ್ಯ, ತಮ್ಮಯ್ಯ, ಗೋಪಾಲ್ ಇತರರು ಉಪಸ್ಥಿತರಿದ್ದರು.