

ಬೆಂಗಳೂರು: ನಟ ಧ್ರುವ ಸರ್ಜಾ ಅಭಿನಯದ ’ಮಾರ್ಟಿನ್’ ಚಿತ್ರದ ಪೋಸ್ಟರ್, ಮತ್ತಿತರ ಪ್ರಚಾರ ದಾಖಲೆಗಳಲ್ಲಿ ನಿರ್ದೇಶಕ ಎ.ಪಿ. ಅರ್ಜುನ್ ಫಿಲ್ಮ್ ಎಂಬ ಟ್ಯಾಗ್‌ಲೈನ್ ಬಳಕೆ ಮಾಡಬೇಕು ಎಂದು ಹೈಕೋರ್ಟ್ ಶುಕ್ರವಾರ ಆದೇಶಿಸಿದೆ. ಅಲ್ಲದೆ, ನಿರ್ದೇಶಕರನ್ನು ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅನುಮತಿಸುವಂತೆ ಚಿತ್ರ ನಿರ್ಮಾಪಕರಿಗೆ ನ್ಯಾಯಪೀಠ ನಿರ್ದೇಶಿಸಿದೆ.
ಚಿತ್ರದ ನಿರ್ದೇಶಕ ಎ.ಪಿ. ಅರ್ಜುನ್ ಸಲ್ಲಿಸಿದ್ದ ವಾಣಿಜ್ಯ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್.ಆರ್. ಕೃಷ್ಣಕುಮಾರ್ ಮತ್ತು ಎಂ.ಜಿ. ಉಮಾ ಅವರ ರಜಾಕಾಲೀನ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಈಗಾಗಲೇ ಮುದ್ರಿಸಿರುವುದನ್ನು ಹೊರತುಪಡಿಸಿ ಮುಂದೆ ಮುದ್ರಿಸುವ ಮಾರ್ಟಿನ್ ಚಿತ್ರದ ಪೋಸ್ಟರ್ ಮತ್ತು ಪ್ರಚಾರ ದಾಖಲೆಗಳಲ್ಲಿ ‘ಎ.ಪಿ. ಅರ್ಜುನ್ ಫಿಲ್ಮ್‘ ಟ್ಯಾಗ್‌ಲೈನ್ ಹಾಕಬೇಕು. ಸಿನಿಮಾ ಪ್ರಚಾರ ಚಟುವಟಿಕೆಗೂ ಅರ್ಜಿದಾರರಿಗೆ ಅವಕಾಶ ನೀಡಬೇಕು. ಪ್ರಚಾರ ಚಟುವಟಿಕೆ ವೇಳೆ ಅರ್ಜುನ್ ಚಿತ್ರ ಮತ್ತು ತಂಡದ ವಿರುದ್ಧ ಯಾವುದೇ ಕೆಟ್ಟ ಅಭಿಪ್ರಾಯ ವ್ಯಕ್ತಪಡಿಸಬಾರದು ಎಂದು ನ್ಯಾಯಾಲಯ ಆದೇಶಿಸಿದೆ.
ಪ್ರತಿವಾದಿಗಳಾದ ಚಿತ್ರ ನಿರ್ಮಾಣ ಸಂಸ್ಥೆಗಳಾದ ವಾಸವಿ ಎಂಟರ್‌ಪ್ರೈಸಸ್, ಅದರ ಪಾಲುದಾರರಾದ ಉದಯ್ ಮತ್ತು ವಾಸವಿ ಮೆಹ್ತಾ ಅವರಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಅ.14ಕ್ಕೆ ವಿಚಾರಣೆ ಮುಂದೂಡಲಾಗಿದೆ.
ಅರ್ಜಿದಾರರ ಮನವಿ ಏನು?
ಚಿತ್ರ ನಿರ್ದೇಶಕನನ್ನು ಪ್ರಮೋಷನ್‌ಗೆ ಕರೆಯಬೇಕು. ಒಪ್ಪಂದದ ಪ್ರಕಾರ, ಸಿನಿಮಾ ಬಿಡುಗಡೆಗೂ ಮುನ್ನ ವೇತನ ಪಾವತಿಸಬೇಕು. ಅಲ್ಲದೇ ಪೋಸ್ಟರ್ ಮತ್ತು ಪ್ರಚಾರದ ದಾಖಲೆಗಳಲ್ಲಿ ಎ.ಪಿ. ಅರ್ಜುನ್ ಫಿಲ್ಮ್ ಎಂದು ಬರೆಯಬೇಕು ಎಂದು ಅರ್ಜಿದಾರರು ಕೋರಿದ್ದರು.
ಬದಲಾವಣೆ ಮಾಡಲಾಗದು..
ಪ್ರತಿವಾದಿ ಪರ ವಕೀಲರು, 3,800 ಚಿತ್ರಮಂದಿರಗಳಲ್ಲಿ ಮುಂದಿನ ಶುಕ್ರವಾರ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ಹಂತದಲ್ಲಿ ಯಾವುದೇ ಬದಲಾವಣೆ ಮಾಡಲಾಗದು. ಈ ವಿವಾದ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಬಂದಿದ್ದು, ಅವರು ನಿರ್ದೇಶನ ನೀಡಿದ್ದಾರೆ. ಅರ್ಜುನ್ ಅದರಂತೆ ನಡೆದುಕೊಂಡಿಲ್ಲ. ಅ.1ರಂದು ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದ್ದು, ಈಗ ಏನೂ ಬದಲಾವಣೆ ಮಾಡಲಾಗದು ಎಂದು ಆಕ್ಷೇಪಿಸಿದರು.