ಎ.ಟಿ. ರಘು ಮುಡಿಗೆ ರಾಜ್ಯೋತ್ಸವ ಗರಿ

28mdko1
Published on

ಮಡಿಕೇರಿ: ಐವತ್ತೈದು ವರ್ಷ ಕನ್ನಡ ಚಲನಚಿತ್ರ ರಂಗದಲ್ಲಿ ಕಲಾಸೇವೆಗೈದಿರುವ ಹಿರಿಯ ಕಲಾವಿದ ಎ.ಟಿ. ರಘು ಅವರಿಗೆ ಕೊನೆಗೂ ರಾಜ್ಯ ಸರ್ಕಾರ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ72 ರ ಪ್ರಾಯದ ಹಿರಿಯ ಚೇತನ ಎ.ಟಿ. ರಘು ಪ್ರಶಸ್ತಿ ಘೋಷಣೆಯಿಂದ ಸಂಕಷ್ಟದ ನಡುವೆಯೂ ಸಂಭ್ರಮಿಸುತ್ತಿದ್ದಾರೆ.

ಎರಡು ಕಿಡ್ನಿ ವೈಫಲ್ಯದಿಂದ ಎರಡು ದಿನಕ್ಕೊಮ್ಮೆ ಡಯಾಲಿಸಿಸ್ ಮಾಡಬೇಕಾಗುತ್ತದೆ. ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟಿಸಿದ ವೇಳೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ನಲ್ಲಿದ್ದರು. ರಾಜ್ಯೋತ್ಸವ ಪ್ರಶಸ್ತಿ ಘೋಷಿಸುವುದರ ಮೂಲಕ ಸರ್ಕಾರ ನನಗೆ ದೊಡ್ಡ ಆಸ್ತಿ ನೀಡಿದೆ ಎಂದು ಸಂತಸ ವ್ಯಕ್ತ ಪಡಿಸಿದ್ದಾರೆ.

ನಟ ಅಂಬರೀಶ್ ನಾಯಕ ನಟನಾಗಿ ಪರಿಚಿಸುವುದರೊಂದಿಗೆ ಅವರ 25 ಚಿತ್ರ ನಿರ್ದೇಶನ ಮಾಡುವುದರ ಮೂಲಕ ದಾಖಲೆ ನಿರ್ಮಿಸಿದ್ದಾರೆ. 6 ಕೊಡವ ಧಾರವಾಹಿ ಸೇರಿದ್ದಂತೆ 40 ಚಿತ್ರ ನಿರ್ದೇಶನ ಮಾಡಿದ್ದಾರೆ. ರಜನಿಕಾಂತ್ ನಾಯಕನಾಗಿ ನಟಿಸಿದ ಮೇರಿ ಅದಾಲತ್ ನಿರ್ದೇಶನ ಮಾಡಿದ್ದಾರೆ. ಮಲಯಾಳಂನಲ್ಲಿ ಕಟ್ಟು ರಾಣಿ ಚಿತ್ರ ನಿರ್ದೇಶನ ಮಾಡಿದ್ದಾರೆ.

10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವೇಳೆ ಮಡಿಕೇರಿಯಲ್ಲಿ ನಡೆಯುತ್ತಿದ್ದ ಎಂ.ಆರ್. ವಿಠಲಾಚಾರ್ಯ ನಿರ್ದೇಶನದ ಮಿಸ್ ಲೀಲಾವತಿ ಚಿತ್ರದಲ್ಲಿ ಸಣ್ಣ ಪಾತ್ರ ನಿರ್ವಹಿಸಿದ್ದರು. ಚಲನಚಿತ್ರ ರಂಗದ ಮೇಲಿನ ಸೆಳೆತದಿಂದ 16ರ ಪ್ರಾಯದಲ್ಲಿಯೇ ವಿಠಲಾಚಾರ್ಯ ಅವರ ಸಹಾಯಕರಾಗಿ ತಮ್ಮನ್ನು ತೊಡಗಿಸಿಕೊಂಡರು. 55 ವರ್ಷಗಳ ಸುದೀರ್ಘ ಅವಧಿಗೆ ಚಿತ್ರ ನಿರ್ದೇಶನ, ನಿರ್ಮಾಣ, ನಟನೆಯಲ್ಲಿ ತೊಡಗಿಸಿಕೊಂಡಿದ್ದರು. ಕೆಲವು ವರ್ಷದಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net