

ಚಿಕ್ಕಬಳ್ಳಾಪುರ : ಚುನಾವಣಾ ಆಯೋಗವು ಜಿಪಂ ಮತ್ತು ತಾಪಂ ಕ್ಷೇತ್ರಗಳಿಗೆ ನಿರ್ದಿಷ್ಟ ಮೀಸಲಾತಿ ನಿಗದಿ ಮಾಡಿರುವುದರಿಂದ ಘಟಾನುಘಟಿ ನಾಯಕರಿಗೆ ಪ್ರಾಬಲ್ಯ ಪ್ರದೇಶಗಳು ಕೈ ತಪ್ಪಿವೆ.
ಚುನಾವಣೆ ನಿರೀಕ್ಷೆಯಲ್ಲಿದ್ದ ಜಿಪಂ ಮತ್ತು ತಾಪಂ ಮಾಜಿ ಸದಸ್ಯರು, ರಾಜಕೀಯ ಪಕ್ಷಗಳ ಪ್ರಭಾವಿ ನಾಯಕರು, ಆಕಾಂಕ್ಷಿಗಳ ಲೆಕ್ಕಾಚಾರವು ಉಲ್ಟಾ ಪಲ್ಟಾ ಆಗಿದೆ. ಹೆಚ್ಚಿನ ವೋಟ್ ಬ್ಯಾಂಕ್, ಪ್ರಾಬಲ್ಯ ಹೊಂದಿರುವ ಕ್ಷೇತ್ರಗಳಲ್ಲಿ ನೇರ ಸ್ಪರ್ಧೆಯ ಅವಕಾಶ ತಪ್ಪಿಸಿವೆ. ಇದೀಗ ಪರ್ಯಾಯವಾಗಿ ತಮ್ಮ ಬದಲಿಗೆ ಸಂಬಂಧಿಕರನ್ನು ಕಣಕ್ಕಿಳಿಸಬೇಕಾದ, ಇಲ್ಲವೇ ಕ್ಷೇತ್ರವನ್ನು ಬೇರೆಯವರಿಗೆ ಬಿಟ್ಟು ಕೊಡಬೇಕಾದ ಪರಿಸ್ಥಿತಿ ಬಂದಿದೆ.
ಮೊದಲು ಜಿಲ್ಲೆಯಲ್ಲಿ 108 ತಾಪಂ ಕ್ಷೇತ್ರಗಳಿದ್ದವು. ಆದರೆ, ಮರು ವಿಂಗಡಣೆಯ ಬಳಿಕ 20 ಕ್ಷೇತ್ರಗಳು ಕಡಿತಗೊಂಡು 88 ಕ್ಕೆ ಇಳಿದಿದೆ. ಅದರಂತೆ ಜಿಪಂ ಕ್ಷೇತ್ರ 28 ರಿಂದ 31 ಕ್ಕೆ ಏರಿಕೆಯಾಗಿದೆ.
ಮೀಸಲಾತಿ ವಂಚಿತರು : ಕಳೆದ ಬಾರಿ ಮಂಡಿಕಲ್ ಜಿಪಂ ಕ್ಷೇತ್ರದಿಂದ ಸಚಿವ ಡಾ ಕೆ.ಸುಧಾಕರ್ ತಂದೆ ಪಿ.ಎನ್.ಕೇಶವರೆಡ್ಡಿ ಆಯ್ಕೆಯಾಗಿದ್ದರು. ಇದೀಗ ಆ ಕ್ಷೇತ್ರವೇ ಇಲ್ಲ. ವ್ಯಾಪ್ತಿ ವಿಸ್ತರಿಸಿ ಪೆರೇಸಂದ್ರ ಜಿಪಂ ಕ್ಷೇತ್ರವನ್ನು ರಚಿಸಿದ್ದು ಅದರಲ್ಲೂ ಸಾಮಾನ್ಯ ಮಹಿಳೆ ಮೀಸಲಾತಿ ನಿಗದಿಯಾಗಿದೆ.
ಜಿಪಂ ಮಾಜಿ ಅಧ್ಯಕ್ಷ ಎಚ್.ವಿ.ಮಂಜುನಾಥ್ ಪ್ರತಿನಿಧಿಸುತ್ತಿದ್ದ ಹೊಸೂರು ಕ್ಷೇತ್ರವು ಎಸ್.ಟಿ.ಮಹಿಳೆಗೆ, ಜಿಪಂ ಮಾಜಿ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ಪ್ರತಿನಿಧಿಸುತ್ತಿದ್ದ ಮಿಟ್ಟೇಮರಿ ಕ್ಷೇತ್ರವು ಎಸ್‌ಸಿ ಮಹಿಳೆಗೆ, ಜಿಪಂ ಮಾಜಿ ಉಪಾಧ್ಯಕ್ಷೆ ನಿರ್ಮಲ ಮುನಿರಾಜು ಪ್ರತಿನಿಧಿಸುತ್ತಿದ್ದ ಜಂಗಮಕೋಟೆ ಜಿಪಂ ಕ್ಷೇತ್ರವು ಎಸ್.ಸಿ.ಮಹಿಳೆಗೆ ಮೀಸಲಾಗಿದೆ. ಬಹುತೇಕ ಕಡೆ ಹಳೇ ಮೀಸಲಾತಿಗಳು ಬದಲಾವಣೆ ಕಂಡಿವೆ. ಇದಕ್ಕೆ ರಾಜಕೀಯ ಪಕ್ಷಗಳು ಹಳೇ ಹುಲಿಗಳ ಬದಲಿಗೆ ಹೊಸ ಮುಖಗಳನ್ನು ಚುನಾವಣೆಗೆ ಪರಿಚಯಿಸಬೇಕಾಗಿದೆ.
ಬದಲಾವಣೆ ಮಿಂಚಿನ ಸಂಚಾರ : ಅಂತಿಮ ಮೀಸಲಾತಿ ಪಟ್ಟಿಯು ಕೆಲವರಿಗೆ ಕಹಿ ದ್ರಾಕ್ಷಿಯಾಗಿದ್ದರೆ, ಹಲವರಿಗೆ ಸಿಹಿ ದ್ರಾಕ್ಷಿಯಾಗಿದೆ. ಆಯಾ ಕ್ಷೇತ್ರದ ರಾಜಕೀಯ ಮುಖಂಡರು, ನಾಯಕರು ಸ್ಪರ್ಧೆಗೆ ಮೀಸಲಾತಿ ಅನ್ವಯ ಅವಕಾಶ ಇರುವುದು ಖಾತ್ರಿಯಾಗುತ್ತಿದ್ದಂತೆ ಖುಷಿಯಾಗಿದ್ದಾರೆ. ಮುಂಬರುವ ಚುನಾವಣೆ ದೃಷ್ಟಿಯಿಂದ ಕ್ಷೇತ್ರಗಳಲ್ಲಿ ಹವಾ ಸೃಷ್ಟಿಸಿಕೊಳ್ಳಲು ಮುಂದಾಗಿದ್ದು ಈಗಾಗಲೇ ಮೊದಲ ಹಂತದಲ್ಲಿ ಪಕ್ಷದ ನಾಯಕರ ಮನವೊಲಿಕೆಗೆ ಕಸರತ್ತು ನಡೆಸುತ್ತಿದ್ದಾರೆ. ಕ್ಷೇತ್ರದಲ್ಲಿ ಪ್ರಬಲ ಆಕಾಂಕ್ಷಿ ಎಂಬುದನ್ನು ಮನದಟ್ಟು ಮಾಡುವಲ್ಲಿ ನಿರತರಾಗಿದ್ದಾರೆ.
ಕೈ ತಪ್ಪುತ್ತಿದ್ದಂತೆ ಅಸಮಾಧಾನ : ಹೊಸ ಮೀಸಲಾತಿ ಪಟ್ಟಿ ಪ್ರಕಟಣೆಯಾಗಿ, ಪ್ರಾಬಲ್ಯದ ಕ್ಷೇತ್ರ ಕೈ ತಪ್ಪುತ್ತಿದ್ದಂತೆ ಜಿಪಂ ಮಾಜಿ ಸದಸ್ಯರು ಆಪ್ತ ವಲಯಗಳಲ್ಲಿ ಬೇಸರ ಹೇಳಿಕೊಂಡಿದ್ದಾರೆ.ಮೀಸಲಾತಿ ನಿಗದಿ ಸರಿ ಇಲ್ಲ. ಆಡಳಿತ ಪಕ್ಷದಲ್ಲಿನ ಕೆಲ ಪ್ರಭಾವಿಗಳ ಒತ್ತಡಕ್ಕೆ ಮಣಿದು ಅನುಕೂಲಕರ ಪಟ್ಟಿ ಪ್ರಕಟಿಸಲಾಗಿದೆ. ಕ್ಷೇತ್ರದಲ್ಲಿನ ಸಮುದಾಯ ಪ್ರಮಾಣ ಕಡೆಗಣಿಸಲಾಗಿದೆ. ಇನ್ನು ವಿಪಕ್ಷಗಳ ಬಲಾಬಲ ಕುಗ್ಗಿಸುವ ಹುನ್ನಾರ ಎಂಬುದಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಪ್ರಸ್ತುತ ನಿಯಮಾನುಸಾರ ಆಕ್ಷೇಪಣೆ ಸಲ್ಲಿಸಲು ಸಿದ್ಧತೆ ಕೈಗೊಳ್ಳುತ್ತಿದ್ದಾರೆ.
ರಾಜಕೀಯ ಪಕ್ಷಗಳ ಪೈಪೋಟಿ : ದೊಡ್ಡ ಚುನಾವಣೆಗೆ ತಳಹದಿಯಾಗಿರುವ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಬಹುತೇಕ ಅಧಿಕಾರವನ್ನು ತನ್ನದಾಗಿಸಿಕೊಳ್ಳಬೇಕೆಂಬುದು ರಾಜಕೀಯ ಪಕ್ಷಗಳ ತವಕ. ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಹಿಡಿತ ಸಾಧಿಸಿದೆ. ಇದರ ನಡುವೆ ಆಡಳಿತ ಪಕ್ಷ ಬಿಜೆಪಿಯು ಸರ್ಕಾರದ ಬಲದಲ್ಲಿ ಪ್ರಾಬಲ್ಯ ಹೆಚ್ಚಿಕೊಳ್ಳಲು ಮುಂದಾಗಿದೆ. ಮತ್ತೊಂದೆಡೆ ಆಯಾ ಕ್ಷೇತ್ರಗಳ ಶಾಸಕರು ತಾಪಂ ಮತ್ತು ಜಿಪಂಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಪ್ರಸ್ತುತ ಅಕ್ಟೋಬರ್‌ನಲ್ಲಿ ಚುನಾವಣಾ ಮುಹೂರ್ತ ನಿಗದಿಯಾಗುವ ನಿರೀಕ್ಷೆ ಇದ್ದು ಇದರೊಳಗೆ ರಾಜಕೀಯ ತಂತ್ರಗಾರಿಕೆ ಪ್ರತಿ ತಂತ್ರಗಾರಿಕೆ ಹೆಣಿದು ಪಕ್ಷ ಮತ್ತು ಬೆಂಬಲಿಗರನ್ನು ಸಂಘಟಿಸುವಲ್ಲಿ ಮುಂದಾಗಿದ್ದಾರೆ.