

ಗೋಣಿಕೊಪ್ಪ: ಪೊನ್ನಂಪೇಟೆ ನಿನಾದ ವಿದ್ಯಾಸಂಸ್ಥೆಯಲ್ಲಿ ಕ್‌ಗ್ಗಟ್ಟ್‌ನಾಡ್ ಹಿರಿಯ ನಾಗರಿಕ ವೇದಿಕೆ ಮತ್ತು ನಿನಾದ ವಿದ್ಯಾಸಂಸ್ಥೆ ಸಹಯೋಗದಲ್ಲಿ ಕೊಡವ ಭಾಷಿಕ ಜನಾಂಗಗಳಿಗೆ ಆಯೋಜಿಸಿದ್ದ ಉಮ್ಮತ್ ಬೊಳಕ್ ಸಾಂಸ್ಕೃತಿಕ ಸ್ಪರ್ಧೆಯ ಮಹಿಳೆಯರ ಉಮ್ಮತ್ತಾಟ್‌ನಲ್ಲಿ ಚಂಗುಲಂಡ, ಪುರುಷರ ಬೊಳಕಾಟ್‌ನಲ್ಲಿ ಬೇಗೂರು ತಂಡ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿತು. ಮೂಕಳೇರ ಉಮ್ಮತ್ತಾಟ್ ತಂಡ ಹಾಗೂ ಮೂವತೊಕ್ಲು ಬೊಳಕಾಟ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡವು.
ಉಮ್ಮತ್ತಾಟ್‌ನಲ್ಲಿ ಅಜ್ಜಿಕುಟ್ಟೀರ, ನಾಗಂಡ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಮಹಿಳೆಯರು ಕೊಡವ ಸೀರೆ, ಪತ್ತಾಕ್, ಜೋಮಾಲೆ, ಪುರುಷರು ಕುಪ್ಯಚೇಲೆ, ಪೀಚೆಕತ್ತಿ ತೊಟ್ಟು ಸಾಂಸ್ಕೃತಿಕ ಮೆರಗು ನೀಡಿದರು.
ಶ್ರೀಮಂಗಲ ವಿದ್ಯಾಸಂಸ್ಥೆ ನಿವೃತ್ತ ಪ್ರಾಂಶುಪಾಲ ಬಾಚೀರ ಎಸ್.ಕಾರ್ಯಪ್ಪ ಮಾತನಾಡಿ, ಕೊಡವರು ಜನ್ಮ್ಮಭೂಮಿ ರಕ್ಷಣೆಗೆ ಮುಂದಾಗಬೇಕಿದೆ. ಕಲೆ, ಸಂಸ್ಕೃತಿಯ ಪೋಷಣೆಗೆ ಉಮ್ಮತ್ತಾಟ್, ಬೊಳಕಾಟ್ ಸ್ಪರ್ಧೆ ಸಹಕಾರಿಯಾಗುತ್ತಿದೆ ಎಂದರು. ಸಾರ್ವಜನಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಅಜ್ಜಮಾಡ ಕಟ್ಟಿ ಮಂದಯ್ಯ ಮಾತನಾಡಿ, ಸಂಸ್ಕೃತಿ ಪೋಷಣೆಗೆ ಕಾಳಜಿ ವಹಿಸಬೇಕಿದೆ ಎಂದರು.
ಸನ್ಮಾನ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೋಮೇಂಗಡ ಗಣೇಶ್ ತಿಮ್ಮಯ್ಯ, ಡಾ.ತೀತರಮಾಡ ದೇವಕ್ಕಿ ರಾಜ, ರಾಜ್ಯ ರಸ್ತೆ ಸಾರಿಗೆಯಲ್ಲಿ ಅಪಘಾತ ರಹಿತ ಚಾಲಕ ಪ್ರಶಸ್ತಿ ಪಡೆದ ಮಲ್ಲಂಗಡ ರಾಜಾ ಸುಬ್ಬಯ್ಯ ಅವರನ್ನು ಸನ್ಮಾನಿಸಲಾಯಿತು.
ಪೊನ್ನಂಪೇಟೆ ಕೊಡವ ಸಮಾಜ ಅಧ್ಯಕ್ಷ ಕಾಳಿಮಾಡ ಎಂ.ಮೋಟಯ್ಯ, ನಿನಾದ ವಿದ್ಯಾಸಂಸ್ಥೆ ಅಧ್ಯಕ್ಷೆ ಚೇಂದೀರ ನಿರ್ಮಲಾ ಬೋಪಣ್ಣ, ವೇದಿಕೆ ಸ್ಥಾಪಕ ಅಧ್ಯಕ್ಷ ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಹಿರಿಯರಾದ ಚೆಕ್ಕೇರ ಸನ್ನಿ ಸುಬ್ಬಯ್ಯ, ಅಧ್ಯಕ್ಷ ಕೊಟ್ಟ್‌ಕತ್ತಿರ ಪಿ. ಸೋಮಣ್ಣ, ಉಪಾಧ್ಯಕ್ಷ ಮಂಡೇಚಂಡ ಪಿ. ಗಣಪತಿ, ಕಾರ್ಯದರ್ಶಿ ಚೇಂದೀರ ಎಂ. ಬೋಪಣ್ಣ, ಖಜಾಂಚಿ ಐನಂಡ ಕೆ.ಮಂದಣ್ಣ, ಜಂಟಿ ಕಾರ್ಯದರ್ಶಿ ದೇಯಂಡ ಎಂ ಕಾವೇರಮ್ಮ ಇದ್ದರು.