

ಲಖನೌ: ಉತ್ತರ ಪ್ರದೇಶದ 10 ಜಿಲ್ಲೆಗಳ 57 ಕ್ಷೇತ್ರದಲ್ಲಿ ಗುರುವಾರ ಆರನೇ ಹಂತದ ಚುನಾವಣೆ ನಡೆದಿದ್ದು, ಸಂಜೆ 6ರ ಹೊತ್ತಿಗೆ ಶೇ. 55.79 ಮತದಾನ ದಾಖಲಾಗಿದೆ. 2.15 ಕೋಟಿ ಜನರು ಮತದಾನದ ಹಕ್ಕು ಹೊಂದಿದ್ದರು. 676 ಅಭ್ಯರ್ಥಿಗಳ ಭವಿಷ್ಯ ಭದ್ರವಾಯಿತು. ಹಿಂದಿನ ಚುನಾವಣೆಯಲ್ಲಿ ಈ ಭಾಗದಲ್ಲಿ ಬಿಜೆಪಿ 46 ಸ್ಥಾನಗಳಿಸಿತ್ತು.
ಕಣದಲ್ಲಿರುವ ಪ್ರಮುಖರ ಪೈಕಿ ಸಿಎಂ ಯೋಗಿ ಆದಿತ್ಯನಾಥ ತಮ್ಮ ತವರು ಗೋರಖಪುರದ ನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ವಿಧಾನಸಭೆ ಚುನಾವಣೆಯನ್ನು ಅವರು ಇದೇ ಮೊದಲ ಬಾರಿಗೆ ಎದುರಿಸಿದ್ದಾರೆ. ತಮ್ಕುಕಿ ರಾಜ್ ಕ್ಷೇತ್ರದಿಂದ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು ಅದೃಷ್ಟ ಪರೀಕ್ಷಿಸಿದ್ದಾರೆ.
328 ಕೋಟಿ ರೂ. ವಶ: ಉತ್ತರ ಪ್ರದೇಶದಲ್ಲಿ ಗುರುವಾರ 328 ಕೋಟಿ ರೂಪಾಯಿ ನಗದು, 571.34 ಕೋಟಿ ಮೌಲ್ಯದ ಮಾದಕದ್ರವ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಚುನಾವಣೆ ನಡೆಯುತ್ತಿರುವ ಐದು ರಾಜ್ಯಗಳಲ್ಲಿ ಜನವರಿ 8ರಿಂದೀಚೆಗೆ ವಶಪಡಿಸಿಕೊಂಡ ನಗದು, ಸಾಮಗ್ರಿಗಳ ಮೌಲ್ಯ 1,039.50 ಕೋಟಿರ ರೂಪಾಯಿ ಎಂದು ಚುನಾವಣಾ ಆಯೋಗ ತಿಳಿಸಿದೆ. ಉತ್ತರ ಪ್ರದೇಶದಲ್ಲಿ 2017ರ ಚುನಾವಣೆಯಲ್ಲಿ ವಶ ಪಡಿಸಿಕೊಂಡಿದ್ದಕ್ಕಿಂತ (193.29 ಕೋಟಿ ರೂ.) 1.70 ಪಟ್ಟು ಅಧಿಕ ನಗದು ಈ ಸಾರಿ ಚುನಾವಣೆಯ ವೇಳೆಯಲ್ಲಿ ವಶಕ್ಕೆ ಪಡೆಯಲಾಗಿದೆ.
|ನರೇಂದ್ರ ಮೋದಿ ಪ್ರಧಾನಿ
ಬಿಜೆಪಿಗೆ ಸೋಲು ನಿಶ್ಚಿತ: ಉತ್ತರ ಪ್ರದೇಶದಲ್ಲಿ 7ನೇ ಹಂತದಲ್ಲಿ ಚುನಾವಣೆ ನಡೆಯುವ ವಾರಾಣಸಿಯಲ್ಲಿ ಸಮಾಜವಾದಿ ಪಕ್ಷದ ಪರ ರ್ಯಾಲಿಯಲ್ಲಿ ಮಾತನಾಡಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಈ ಸಾರಿ ಬಿಜೆಪಿಗೆ ಸೋಲು ಕಟ್ಟಿಟ್ಟಬುತ್ತಿ ಎಂದು ಹೇಳಿದ್ದಾರೆ. ಬಿಜೆಪಿಯವರ ತಲೆಯಲ್ಲಿ ಹಿಂಸೆ ಬಿಟ್ಟರೆ ಬೇರೇನೂ ಇಲ್ಲ. ಇಂಥವರನ್ನು ಮನೆಗೆ ಕಳುಹಿಸುವುದು ಒಳಿತು ಎಂದು ಗುಡುಗಿದ್ದಾರೆ. ಇಂದು ದಶಾಶ್ವಮೇಧ ಘಾಟ್ಗೆ ಹೋಗುತ್ತಿದ್ದಾಗ ಬಿಜೆಪಿ ಗುಂಡಾಗಳು ನನ್ನ ಹಿಂದೆ ಬಿದ್ದಿದ್ದರು ಎಂದಿದ್ದಾರೆ.
ನಾನು ಭ್ರಷ್ಟ, ಆದರೂ ನನಗೆ ಮತಹಾಕಿ!: ಉತ್ತರ ಪ್ರದೇಶದ ಗೋರಖಪುರ ಜಿಲ್ಲೆಯ ಪಿಪ್ರೖೆಚ್ ಕ್ಷೇತ್ರದಿಂದ ಪಕ್ಷೇತರ ರಾಗಿ ಸ್ಪರ್ಧಿರಿಸಿರುವ ಅರುಣ್ ಕುಮಾರ್, ಮತಗಟ್ಟೆಯೊಂದರ ಹೊರ ವಲಯದಲ್ಲಿ ‘ನಾನು ಭ್ರಷ್ಟ, ಆದರೂ ನನಗೆ ಮತ ನೀಡಿ. ಮುಂದೆಯೂ ಭ್ರಷ್ಟನಾಗಿಯೇ ಇರುವೆ’ ಎಂದು ಮತಯಾಚನೆ ಮಾಡುತ್ತಿದ್ದರು. ‘ಹಿಂದಿನ ಚುನಾವಣೆಯಲ್ಲಿ ಪ್ರಾಮಾಣಿಕ ಅಭ್ಯರ್ಥಿಗೆ ಮತನೀಡಿದ್ದೀರಿ. ಈ ಸಾರಿ ಭ್ರಷ್ಟಾಚಾರಿಗೂ ಒಂದು ಅವಕಾಶ ನೀಡಿ’ ಎಂದು ಬೇಡಿಕೊಳ್ಳುತ್ತಿದ್ದರು.
ವಾರಾಣಸಿ ಕೇಂದ್ರ ಬಿಂದು: ಉತ್ತರ ಪ್ರದೇಶ ಚುನಾವಣೆಯ ಕೊನೆಯ ಮತ್ತು ಏಳನೇ ಹಂತದ ಚುನಾವಣೆ ಮಾರ್ಚ್ 7ರಂದು ಎಂಟು ಜಿಲ್ಲೆಗಳ 54 ಕ್ಷೇತ್ರಗಳಲ್ಲಿ ನಡೆಯಲಿದ್ದು, ಪೂರ್ವಾಂಚಲದ ಕೇಂದ್ರ ಸ್ಥಳ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಮತ ಕ್ಷೇತ್ರ ವಾರಾಣಸಿಯೂ ಸೇರಿದೆ. ಈ ಕ್ಷೇತ್ರಗಳಲ್ಲಿ ಶನಿವಾರ ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳುವ ಕಾರಣ ಎಲ್ಲ ನಾಯಕರು ಬಿರುಸಿನಿಂದ ರ‍್ಯಾಲಿ ನಡೆಸುತ್ತಿದ್ದಾರೆ.