

ಬೆಂಗಳೂರು: ಸಿಂದಗಿ ಹಾಗೂ ಹಾನಗಲ್ ಉಪ ಚುನಾವಣೆ ಕೊನೇ ಘಟ್ಟ ತಲುಪಿದ್ದು, ಮತದಾನಕ್ಕೆ ಇನ್ನೊಂದೇ ದಿನ ಬಾಕಿ ಇದೆ. ಮೂರೂ ಪಕ್ಷಗಳು ತಮ್ಮ ಅಭ್ಯರ್ಥಿ ಗೆಲುವಿಗೆ ನಿರೀಕ್ಷೆ ಮೀರಿದ ಶ್ರಮಹಾಕಿದ್ದು, ಹಿಂದೆಂದೂ ಮಾಡದಂತ ಮಾತಿನ ಸಮರಕ್ಕೂ ಈ ಉಪಸಮರ ಸಾಕ್ಷಿಯಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಜೆಡಿಎಸ್ನ ಎಚ್.ಡಿ.ಕುಮಾರಸ್ವಾಮಿ ಪ್ರತಿಷ್ಠೆಯಾಗಿ ತೆಗೆದುಕೊಂಡ ಈ ಉಪಚುನಾವಣೆಯಲ್ಲಿ ತಮ್ಮ ಹೇಳಿಕೆಗಳ ಮೂಲಕವೇ ಮತದಾರರನ್ನು ಸೆಳೆಯುವ ತಂತ್ರಗಾರಿಕೆ ನಡೆಸಿದರು.
2018ರ ವಿಧಾನಸಭೆ ಚುನಾವಣೆಯಲ್ಲಿ ಹಾನಗಲ್ನಲ್ಲಿ ಬಿಜೆಪಿಯ ಸಿ.ಎಂ.ಉದಾಸಿ ಹಾಗೂ ಸಿಂದಗಿಯಲ್ಲಿ ಜೆಡಿಎಸ್ನ ಎಂ.ಸಿ.ಮನಗೂಳಿ ಗೆಲುವು ಸಾಧಿಸಿದ್ದರು. ಈ ಬಾರಿ ಮನಗೂಳಿ ಅವರ ಮಗ ಅಶೋಕ್ ಅವರನ್ನು ಸೆಳೆದ ಕಾಂಗ್ರೆಸ್, ಅವರಿಗೆ ಟಿಕೆಟ್ ನೀಡಿ ಕ್ಷೇತ್ರ ಗೆಲ್ಲಲು ಪ್ರಯತ್ನಿಸಿದೆ. ಹಾನಗಲ್ನಲ್ಲಿ ಉದಾಸಿ ಕುಟುಂಬದ ಬದಲು ಶಿವರಾಜ್ ಸಜ್ಜನರರಿಗೆ ಬಿಜೆಪಿ ಟಿಕೆಟ್ ನೀಡಿತು. ಎರಡೂ ಕಡೆ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿದ ಜೆಡಿಎಸ್ ಕಾಂಗ್ರೆಸ್ಗೆ ತಲೆನೋವಾಗಿ ಕಾಡಿದೆ.
ಇನ್ನು ಪ್ರಚಾರದಲ್ಲಿ ವಾಕ್ಸಮರಗಳ ಬಳಿಕ ಕೊನೇ ಹಂತದಲ್ಲಿ ನಡೆಸಬೇಕಾದ ತಂತ್ರಗಾರಿಕೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಪ್ರಯತ್ನ ನಡೆಸಿದ್ದು, ಈ ಭಾಗವಾಗಿ ಹಾನಗಲ್ ಬಿಜೆಪಿ ಅಭ್ಯರ್ಥಿಯ ಸಹೋದರನನ್ನು ಪಕ್ಷದ ವೇದಿಕೆಗೆ ಕರೆಸಿಕೊಂಡ ಕಾಂಗ್ರೆಸ್ ಅವರ ಬಾಯಲ್ಲಿ ಸಹೋದರನನ್ನು ಬೈಯ್ಯಿಸಿದೆ. ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ಎರಡೂ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಕಾಣಿಸಿದ್ದು, ನಾಯಕತ್ವ ಬದಲಾವಣೆಯಿಂದ ವೈಮನಸ್ಯವಿಲ್ಲ ಎಂಬ ಸಂದೇಶ ಕಳಿಸಲು ಬಿಜೆಪಿ ಪ್ರಯತ್ನಿಸಿ ಸಫಲವಾಯಿತು.
ಸೆ.30ರಂದು ಮತದಾನ ನಡೆಯುತ್ತಿದ್ದು, ಅ.2ರಂದು ಮತ ಎಣಿಕೆ ನಡೆಯುವುದು. 224 ಸದಸ್ಯ ಬಲದ ವಿಧಾನಸಭೆಯಲ್ಲಿ ಈ ಚುನಾವಣೆ ಫಲಿತಾಂಶದಿಂದ ಯಾವುದೇ ಗಾಢ ಪರಿಣಾಮ ಬೀರದೆ ಇದ್ದರೂ ರಾಜಕೀಯ ಪಕ್ಷಗಳ ಒಳಾಂಗಣದಲ್ಲಿ ತಿಕ್ಕಾಟಕ್ಕೆ ಕಾರಣವಾಗಬಹುದು ಎಂಬ ಚರ್ಚೆ ಇದೆ.
ಸಿಎಂ ಪ್ರವಾಸ ದಿಢೀರ್ ರದ್ದು: ರಾಜ್ಯದಲ್ಲಿ ನಡೆಯುತ್ತಿರುವ ಸಿಂದಗಿ ಹಾಗೂ ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು, ಶತಾಯಗತಾಯ ಗೆಲ್ಲಬೇಕೆಂದು ಪಣ ತೊಟ್ಟಿದ್ದಾರೆ. ಅದರಲ್ಲೂ ಸ್ವಂತ ಜಿಲ್ಲೆ ಹಾವೇರಿಯ ಹಾನಗಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆಯಾಗಬಹುದು ಎಂಬ ಗುಪ್ತಚರ ಇಲಾಖೆ ಮಾಹಿತಿ ಪಡೆದಿರುವ ಮುಖ್ಯಮಂತ್ರಿ ಅವರು, ಗುರುವಾರ ಬೆಂಗಳೂರು ಪ್ರವಾಸವನ್ನೂ ರದ್ದು ಪಡಿಸಿ ಹುಬ್ಬಳ್ಳಿಯಲ್ಲೇ ಉಳಿದುಕೊಂಡಿದ್ದಾರೆ ಎನ್ನಲಾಗಿದೆ.
ಪ್ರಚಾರಕ್ಕೆ ತೆರೆ ವಿಶ್ರಾಂತಿ ಮೊರೆ: ಸಿಂದಗಿ ವಿಧಾನಸಭೆ ಉಪಚುನಾವಣೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳುತ್ತಿದ್ದಂತೆ ರಾಜಕೀಯ ನಾಯಕರೆಲ್ಲ ವಿಶ್ರಾಂತಿಗೆ ಮೊರೆ ಹೋಗಿದ್ದಾರೆ. 19 ದಿನ ನಡೆದ ಪ್ರಚಾರದಲ್ಲಿ 17 ದಿನ ಬಿಡುವಿಲ್ಲದೆ ಭಾಗವಹಿಸಿದ್ದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಗುರುವಾರ ಚಿಕಿತ್ಸೆ ಮೊರೆ ಹೋದರು. ರೆಸಾರ್ಟ್ವೊಂದರಲ್ಲಿ ಉಳಿದುಕೊಂಡಿರುವ ಗೌಡರು ತೀವ್ರ ಸುಸ್ತಾಗಿರುವ ಹಿನ್ನೆಲೆಯಲ್ಲಿ ಪಿಜಿಯೋಥೆರಪಿ, ಮಸಾಜ್ಗೆ ಮೊರೆ ಹೋಗಿದ್ದಾರೆ. ಸಚಿವ ವಿ.ಸೋಮಣ್ಣ ಹಾಗೂ ಸಿ.ಸಿ. ಪಾಟೀಲ ಗುರುವಾರ ಬೆಳಗ್ಗೆ ಜ್ಞಾನಯೋಗಾಶ್ರಮಕ್ಕೆ ಭೇಟಿ ನೀಡಿ ಸಿದ್ಧೇಶ್ವರ ಶ್ರೀಗಳ ಆಶೀರ್ವಾದ ಪಡೆದರು. ಇನ್ನುಳಿದಂತೆ ಲಕ್ಷ್ಮಣ ಸವದಿ ಸೇರಿ ಹಲವು ನಾಯಕರು ವಿಶ್ರಾಂತಿಯಲ್ಲಿರುವುದು ಕಂಡು ಬಂತು.
ವಿಜಯಪುರ/ಹಾವೇರಿ: ಸಿಂದಗಿ ಹಾಗೂ ಹಾನಗಲ್ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಪರ ಸ್ಥಳೀಯ ನಾಯಕರು ಮನೆ ಮನೆ ಭೇಟಿ ನೀಡಿ ಮತಯಾಚಿಸುವ ಪ್ರಕ್ರಿಯೆ ಭರ್ಜರಿಯಾಗಿದ್ದು, ಗ್ರಾಮೀಣ ಭಾಗಗಳಲ್ಲಿ ಹಣ ಹಂಚಿಕೆ ಕಾರ್ಯ ಜೋರಾಗಿದೆ. ಸಿಂದಗಿ ಕ್ಷೇತ್ರದಲ್ಲಿನ ಡಂಬಳ ಗ್ರಾಮದ ಕಬ್ಬಿನ ತೋಟದಲ್ಲಿರುವ ದೇವಸ್ಥಾನದವೊಂದರಲ್ಲಿ ಮತದಾರರಿಗೆ ಹಣ ಹಂಚಿಕೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿರುವವರು ಬಿಜೆಪಿ ಮುಖಂಡರೆಂದು ಸ್ಥಳೀಯರು ತಿಳಿಸಿದ್ದಾರೆ. ಒಂದು ಮತಕ್ಕೆ 1,000 ರೂ.ಗಳಿಂದ ಕಂತೆ ಕಂತೆ ಹಣ ಹಂಚುತ್ತಿರುವುದು ವಿಡಿಯೋದಿಂದ ತಿಳಿದು ಬಂದಿದೆ. ಮುಖಂಡರ ಈ ನಡೆಗೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.ವಿಡಿಯೋದಲ್ಲಿರುವವರ ಮುಖ ಗುರುತಿಸಿ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ಕುಮಾರ್ ತಿಳಿಸಿದ್ದಾರೆ.
ಬಿಜೆಪಿಯವರು 30-40 ಲಕ್ಷ ರೂ.ಹಣ ಹಂಚಿಕೆ ಮಾಡುತ್ತಿದ್ದಾರೆ. ಹಳ್ಳಿ ಹಳ್ಳಿಯಲ್ಲೂ ಬಿಜೆಪಿಯಿಂದ ಹಣ ಹಂಚಿಕೆ ಆಗಿದೆ. ಒಂದೊಂದು ಬೂತ್ಗೆ 5 ಲಕ್ಷ ರೂ.ಹಂಚಿಕೆ ಆಗಿದೆ.| ಎಚ್.ಡಿ. ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿಹಣ ಹಂಚಲು ಕುಮಾರಸ್ವಾಮಿ ನನಗೆ ಹಣ ಕೊಟ್ಟಿಲ್ಲ. ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ಈ ತರಹ ಪ್ರತಿಕ್ರಿಯೆ ನೀಡಬಾರದು.| ವಿ.ಸೋಮಣ್ಣ ಸಚಿವಒಂದು ವೋಟು, 3 ಸಾವಿರ ರೇಟು!: ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಮತವೊಂದಕ್ಕೆ ಒಂದು ಸಾವಿರ ರೂ.ನಿಂದ 3 ಸಾವಿರ ರೂ.ಗಳವರೆಗೂ ಹಂಚುತ್ತಿವೆ ಎಂಬ ಮಾತು ಕ್ಷೇತ್ರದ ಜನರಿಂದ ಕೇಳಿಬರುತ್ತಿದೆ. ಕೆಲ ಗ್ರಾಮಗಳಲ್ಲಿ ಬುಧವಾರ ರಾತ್ರಿಯೇ ಹಣ ಹಂಚಿಕೆ ನಡೆದ ಸುದ್ದಿಯೂ ಇದೆ. ಇನ್ನು ಕೆಲವೆಡೆ ಗುರುವಾರ ಹಾಗೂ ಶುಕ್ರವಾರ ರಾತ್ರಿ ಮನೆಮನೆ ಮತಯಾಚನೆ ಮೂಲಕ ಹಣ ಹಂಚುವ ಸಾಧ್ಯತೆ ದಟ್ಟವಾಗಿದೆ.
ಜಿಲ್ಲಾ ಕೇಂದ್ರದಿಂದ ನಿರ್ವಹಣೆ: ಬಹಿರಂಗ ಪ್ರಚಾರಕ್ಕೆ ತೆರೆ ಬೀಳುತ್ತಿದ್ದಂತೆ ಹೊರಗಿನಿಂದ ಪ್ರಚಾರಕ್ಕೆ ಬಂದ ವಿವಿಧ ಪಕ್ಷಗಳ ನಾಯಕರು ಕ್ಷೇತ್ರದಿಂದ ಹೊರ ನಡೆದಿದ್ದಾರೆ. ಆದರೆ, ಜಿಲ್ಲೆ ಹಾಗೂ ಪಕ್ಕದ ತಾಲೂಕಿನಿಂದ ಕ್ಷೇತ್ರದಲ್ಲಿ ಹಿಡಿತ ಸಾಧಿಸಲು ಯತ್ನಿಸುತ್ತಿದ್ದಾರೆ. ಮುಖಂಡರನ್ನು ಕರೆಯಿಸಿ ಕೊಂಡು ರಹಸ್ಯ ಸಭೆ ನಡೆಸುತ್ತಿರುವುದು ಕಂಡು ಬಂದಿದೆ.