

ತಿ.ನರಸೀಪುರ: ಕುರಿ ಸಾಕಣೆದಾರರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಸಾಕಣೆದಾರರು ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಪಶುಸಂಗೋಪನಾ ಇಲಾಖೆಯ ಅಧಿಕಾರಿ ಡಾ.ಲಿಂಗರಾಜು ತಿಳಿಸಿದರು.
ಕುರಿ ಮತ್ತು ಮೇಕೆ ಸಾಕಣೆ ಮತ್ತು ಮೇವು ನಿರ್ವಹಣೆ ಕುರಿತು, ಗಂಗಾ ಚಾರಿಟಬಲ್ ಟ್ರಸ್ಟ್ ಹಾಗೂ ಪಶು ಸಂಗೋಪನಾ ಇಲಾಖೆ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಪಟ್ಟಣದ ಮರಿಗೌಡ ಸ್ಮಾರಕ ಭವನದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ಉಚಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವರ್ಷಕ್ಕೆ ಮೂರ್ನಾಲ್ಕು ಬಾರಿ ಸರ್ಕಾರದಿಂದಲೇ ಕುರಿಗಳಿಗೆ ಜಂತುಹುಳು ನಿವಾರಣೆ ಔಷಧ ಹಾಕಿಸಲಾಗುತ್ತದೆ. ಕುರಿ ಸಾಕುವವರು ಇಂತಹ ಯೋಜನೆಗಳ ಪ್ರಯೋಜನ ಪಡೆಯಬೇಕು. ಗ್ರಾಮೀಣ ರೈತರು ವ್ಯವಸಾಯದ ಜತೆಗೆ ಉಪ ಕಸುಬಾಗಿ ಕುರಿ, ಮೇಕೆ ಮತ್ತು ಹೈನುಗಾರಿಕೆಯಲ್ಲಿ ತೊಡಗಿಕೊಳ್ಳಬೇಕು. ಕೃಷಿ ನಷ್ಟವನ್ನು ಸರಿದೂಗಿಸಲು ಉಪ ಕಸಬುಗಳು ಅಗತ್ಯ ಎಂದರು.
ಕುರಿಯ ಮಾಂಸ ಮಾತ್ರವಲ್ಲದೇ ಅದರ ಉಣ್ಣೆ, ಚರ್ಮ, ಹಾಲಿಗೆ ಕೂಡ ಬೇಡಿಕೆ ಇದೆ. ಒಂದು ಲೀಟರ್ ಕುರಿಯ ಹಾಲಿಗೆ 1,000 ರೂ. ಇದೆ. ಉಣ್ಣೆ ಕೆ.ಜಿ.ಗೆ 500 ರೂ.ಗೆ ಮಾರಾಟವಾಗುತ್ತದೆ. ಹಾಗಾಗಿ, ರೈತರಿಗೆ ವೈಜ್ಞಾನಿಕ ಪದ್ಧತಿಯಲ್ಲಿ ಕುರಿ ಸಾಕುವ ಬಗ್ಗೆ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕುರಿ ಮತ್ತು ಉಣ್ಣೆ ಅಭಿವದ್ಧಿ ನಿಗಮ ಸ್ಥಾಪನೆಗೊಂಡು 40 ವರ್ಷಗಳಾದರೂ, ಕುರಿಗಾರರಿಗೆ ಸರಿಯಾದ ಮಾಹಿತಿ ಇರಲಿಲ್ಲ. ಬಜೆಟ್‌ನಲ್ಲಿ ಕೇವಲ 5-6 ಕೋಟಿ ರೂ. ನೀಡಲಾಗುತ್ತಿತ್ತು. ಆದರೆ ಈಗ ನಿಗಮಕ್ಕೆ 100 ಕೋಟಿ ರೂ. ಅನುದಾನ ನೀಡಿದ್ದು, ಕುರಿ ಸಾಕುವವರಿಗೆ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. ಬೆಳೆನಷ್ಟ, ನೀರಾವರಿಯ ಸಮಸ್ಯೆ ಇರುವ ರೈತರು ಕುರಿ ಸಾಕಣೆಯಲ್ಲಿ ತೊಡಗಿಕೊಳ್ಳುವುದರಿಂದ ಹೆಚ್ಚಿನ ಲಾಭ ಗಳಿಸಬಹುದು ಎಂದು ಹೇಳಿದರು.
ಗಂಗಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ರಾಜ್ ಕಾಮಯ್ಯ ಮಾತನಾಡಿ, ಸಂಸ್ಥೆಯು ಪ್ರತಿ ವರ್ಷ ಕೃಷಿ ವಿಭಾಗದಲ್ಲಿ ಸಾಧನೆ ಗೈದ ಕೃಷಿಕರನ್ನು ಗುರುತಿಸಿ ಕೃಷಿ ರತ್ನ ಪ್ರಶಸ್ತಿ ನೀಡುತ್ತಿದೆ. ಈ ಬಾರಿ 50 ರೈತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಸಂಸ್ಥೆಯು ಆಯೋಜಿಸಿರುವ ತರಬೇತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರೈಸಿದವರಿಗೆ ಪ್ರಮಾಣ ಪತ್ರ ನೀಡಲಾಗುತ್ತದೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಎಂ.ದಿವ್ಯಾಶ್ರಿ ಮಾತನಾಡಿ, ರೈತರು ಸ್ವಾವಲಂಬಿಗಳಾಗಿ ಬದುಕಬೇಕೆಂಬ ಉದ್ದೇಶದೊಂದಿಗೆ ಪ್ರತಿ ವರ್ಷ ಸಂಸ್ಥೆ ತರಬೇತಿ ಕಾರ್ಯಾಗಾರ ಆಯೋಜನೆ ಮಾಡುತ್ತಿದೆ ಎಂದರು.
ತರಬೇತಿ ಕಾರ್ಯಕ್ರಮದಲ್ಲಿ ಕುರಿ ಮತ್ತು ಮೇಕೆ ವೈಜ್ಞಾನಿಕ ಸಾಗಣೆ, ಇವುಗಳಿಗೆ ಬರುವ ರೋಗಗಳ ಬಗ್ಗೆ ಮಾಹಿತಿ, ಮುಂಜಾಗ್ರತಾ ಕ್ರಮ, ಬ್ಯಾಂಕ್ ಸಾಲ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಸಿಗುವ ಸೌಲಭ್ಯಗಳು, ವಿವಿಧ ರೀತಿಯ ತಳಿಯ ಪರಿಚಯ ಹಾಗೂ ಮೇವುಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಯಿತು.
ವರಹಾ ಅಭಿವೃದ್ಧಿ ಯೋಜನೆಯ ಉಪ ನಿರ್ದೇಶಕ ಶಿವಲಿಂಗಯ್ಯ, ಡಾ.ನಾಗರಾಜು, ಸಂಸ್ಥೆಯ ಸಿಇಒ ಶಿವಲಿಂಗಯ್ಯ, ವ್ಯವಸ್ಥಾಪಕರಾದ ಶಶಾಂಕ್, ರಚನಾ, ಚಾಂದಿನಿ, ನವ್ಯಾ ಇತರರು ಇದ್ದರು.