ಉನ್ನತ ಶಿಕ್ಷಣ ಕರಡು ವರದಿ ತಿರಸ್ಕರಿಸುವಂತೆ ಒತ್ತಾಯ

Protest
Published on

ವಿಶ್ವವಿದ್ಯಾಲಯಗಳ ಅನುದಾನ ಆಯೋಗದ (ಯುಜಿಸಿ) 2025ರ ಉನ್ನತ ಶಿಕ್ಷಣ ಕರಡು ವರದಿ ತಿರಸ್ಕರಿಸುವಂತೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ವತಿಯಿಂದ ಸೋಮವಾರ ಪ್ರತಿಭಟನೆ ನಡೆಯಿತು.

ಮಾನಸ ಗಂಗೋತ್ರಿಯ ಕ್ಲಾಕ್ ಟವರ್ ಬಳಿ ಜಮಾವಣೆಗೊಂಡ ಪ್ರತಿಭಟನಾಕಾರರು, ನಾನಾ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ವಿಶ್ವವಿದ್ಯಾಲಯ ಅನುದಾನ ಆಯೋಗ 2025ರ ಕರಡನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರದಾನ್ ಬಿಡುಗಡೆ ಮಾಡಿದ್ದಾರೆ. ಇದು ಕ್ಯಾಂಪಸ್‌ಗಳಲ್ಲಿ ಉನ್ನತ ಶಿಕ್ಷಣದ ಕೇಂದ್ರೀಕರಣ ಮತ್ತು ಕಾರ್ಪೊರೇಟ್ ಶಿಕ್ಷಣ ವ್ಯವಸ್ಥೆಗೆ ಸಂಪೂರ್ಣವಾಗಿ ಅವಕಾಶ ಮಾಡಿಕೊಡುವ ಕೇಂದ್ರ ಸರ್ಕಾರದ ಮತ್ತೊಂದು ಹುನ್ನಾರವಾಗಿದೆ. ವಿರೋಧ ಪಕ್ಷದ ಆಡಳಿತವಿರುವ ತಮಿಳುನಾಡು, ಕೇರಳದಂತಹ ಹಲವು ರಾಜ್ಯಗಳು ಉಪಕುಲಪತಿ ನೇಮಕಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು, ವಿಶ್ವವಿದ್ಯಾಲಯಗಳ ಕುಲಪತಿಗಳೊಂದಿಗೆ ಸಂಘರ್ಷ ನಡೆಸುತ್ತಿವೆ. ಪರಿಷ್ಕೃತ ನಿಯಮಗಳು ಉಪಕುಲಪತಿಗಳ ಆಯ್ಕೆಯಲ್ಲಿ ರಾಜ್ಯ ರಾಜ್ಯಪಾಲರಿಗೆ ಹೆಚ್ಚಿನ ಅಧಿಕಾರ ನೀಡುತ್ತದೆ. ಉಪ ಕುಲವತಿಗಳ ಆಯ್ಕೆಯಲ್ಲಿಯೂ ಕನಿಷ್ಠ ಅರ್ಹತೆ ನಿಗದಿಪಡಿಸಲಾಗಿದೆ. ಉದ್ಯಮ ರಂಗದ ಪರಿಣಿತರು, ಸಾರ್ವಜನಿಕ ಆಡಳಿತ ನೀತಿ ನಿರೂಪಣೆಯಲ್ಲಿ ಕೆಲಸ ಮಾಡಿದವರು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಹಿರಿಯ ಅಧಿಕಾರಿಗಳಿಗೆ ವಿಶ್ವವಿದ್ಯಾಲಯಗಳ ಉಪ ಕುಲಪತಿಗಳಾಗುವ ಅವಕಾಶ ನೀಡಲಾಗಿದೆ.

ಉಪ ಕುಲಪತಿಗಳ ಆಯ್ಕೆಯ ಸಮಿತಿಯಲ್ಲಿಯೂ ಸಹ ಬದಲಾವಣೆ ಮಾಡಲಾಗಿದೆ. ಇದು ದೇಶದ ಶಿಕ್ಷಣ ವ್ಯವಸ್ಥೆಗೆ ಅಪಾಯಕಾರಿ ಎಂದು ಕಿಡಿ ಕಾರಿದರು.

ಈ ಕರಡು ವರದಿಯಲ್ಲಿ ಬೋಧಕ ಹುದ್ದೆಗಳ ಮೀಸಲಾತಿಯ ಬಗ್ಗೆಯೂ ಮೌನ ವಹಿಸಿದೆ. ಉನ್ನತ ಶಿಕ್ಷಣ ಉಳ್ಳವರಿಗೆ ಮಾತ್ರ ಸೀಮಿತವಾಗಲಿದ್ದು, ಕೇಂದ್ರೀಕರಣ, ಖಾಸಗೀಕರಣ, ಕಾರ್ಪೊರೇಟರಿಕರಣ ಮಾಡಲು ಮುಂದಾಗಿದೆ. ಹೀಗಾಗಿ ಕೂಡಲೇ ಕರಡು ವರದಿ ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net