ಉದ್ಯೋಗಕ್ಕಾಗಿ ಬೇಕಾದ ಕೌಶಲ್ಯಗಳನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು : ಪ್ರೀತಂಜೆ ಗೌಡ

ಉದ್ಯೋಗಕ್ಕಾಗಿ ಬೇಕಾದ ಕೌಶಲ್ಯಗಳನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು :  ಪ್ರೀತಂಜೆ ಗೌಡ
Published on

ಹಾಸನ : ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ವಿಷಾದಪಡಿಸುವ ಮೊದಲು ಉದ್ಯೋಗಕ್ಕಾಗಿ ಬೇಕಾದ ಕೌಶಲ್ಯಗಳನ್ನು ವಿದ್ಯಾರ್ಥಿಗಳು ಮೊದಲು ರೂಢಿಸಿಕೊಳ್ಳಬೇಕು ಎಂದು ಶಾಸಕ ಪ್ರೀತಂಜೆ ಗೌಡ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು- ಸ್ವಾಯತ್ತ ಕಾಲೇಜಿನ ಸಭಾಂಗಣದಲ್ಲಿ ಕಾಲೇಜಿನ ಉದ್ಯೋಗ ಮಾಹಿತಿ ಕೋಶ ಮತ್ತು ಇಂಡಿಯಾ 4 ಐಎಎಸ್ ಅಕಾಡೆಮಿ ಬೆಂಗಳೂರು ಇವರ ಸಂಯಕ್ತಾಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಒಂದು ದಿನದ ಸ್ಪರ್ಧಾತ್ಮ ಪರೀಕ್ಷೆಗಳ ಕಾರ್ಯಾಗಾರ ಮತ್ತು ಉದ್ಯೋಗ ಮಾಹಿತಿಕೋಶದ ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ವ್ಯಕ್ತಿತ್ವ ರೂಪಿಸಿಕೊಳ್ಳಲು ಇಂತಹ ಕಾರ್ಯಾಗಾರಗಳು ಅವಶ್ಯವಾಗಿದೆ ಎಂದರು.

ಸಾಧನೆ ಮಾಡಲೂ ಒಂದು ನಿರ್ದಿಷ್ಟವಾದ ಗುರಿ ಇಟ್ಟುಕೊಳ್ಳಬೇಕು. ಗುರಿ ಹೇಗಿರಬೇಕು ಎಂದರೆ ಗುರಿ ನಿದ್ದೆ ಕೆಡಿಸುವಂತಿರಬೇಕು. ಯುವ ಸಮೂಹದ ಶ್ರಮದ ಮೇಲೆ ದೇಶದ ಅಭಿವೃದ್ಧಿ ನಿಂತಿದೆ. ಸ್ವಾಮಿ ವಿವೇಕಾನಂದರ ಕೆಲ ಮಾತುಗಳನ್ನು ಈ ಸಂದರ್ಭದಲ್ಲಿ ಸ್ಮರಿಸಿದರು. ಯುವ ಸಮೂಹ ದೇಶದ ಆಸ್ತಿ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕಾದರೆ ಮೊದಲು ಆತ್ಮವಿಶ್ವಾಸ ಮುಖ್ಯ ಎಂದು ಸಲಹೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಮಾತನಾಡಿ, ಜೀವನದಲ್ಲಿ ಸೋಲನ್ನು ಅನುಭವಿಸಬೇಕು, ಅದನ್ನು ಎದುರಿಸಿದರೆ ಮಾತ್ರ ಗೆಲುವನ್ನು ಸಾಧಿಸಲು ಸಾಧ್ಯ ಎಂದರು.

ಗೆಲುವಿಗೆ ಮೂಲಮಂತ್ರ ಶ್ರಮ ಮತ್ತು ಕಷ್ಟ ಜೀವನ ಇರಬೇಕು ಸ್ಪರ್ಧಾತ್ಮಕ ಪರೀಕ್ಷೆಗಳ ನೇಮಕಾತಿ ಪಟ್ಟಿ ನೋಡಿದಾಗ ಉದ್ಯೋಗಗಳ ಸಂಖ್ಯೆಯನ್ನು ನೋಡಿ ಕಡಿಮೆ ಉದ್ಯೋಗಗಳಿದೆ ಎಂದು ನಿರಾಸೆ ಪಡಬಾರದು. ಅವರಲ್ಲಿ ನನ್ನದೂ ಒಂದು ಎಂದು ಓದಬೇಕು ಎಂದು ಕಿವಿ ಮಾತು ಹೇಳಿದರು.
ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಕೇಳಿದ ಕೆಲ ಪ್ರಶ್ನೆಗಳಿಗೆ ಎಸ್.ಪಿ. ಹರಿರಾಂ ಶಂಕರ್ ಅವರು ಉತ್ತರಿಸಿದರು.

ಬೆಂಗಳೂರು ಇಂಡಿಯಾ 4 ಐಎಎಸ್‌ಅಕಾಡೆಮಿಯ ಸಿ.ಇ. ಓ ಶ್ರೀನಿವಾಸ್ ಪಿ.ಸಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿ, ಕೇಂದ್ರ ಎಲ್ಲಾ ಇಲಾಖೆಗಳು ನೇಮಕಾತಿ ಮಾಡುತ್ತವೆ ಆ ಸಂದರ್ಭದಲ್ಲಿ ಆಯ್ಕೆ ಮಾಡುವವರಲ್ಲಿ ವಿವಿಧ ರಾಜ್ಯಗಳವರಾಗಿರುತ್ತಾರೆ. ಆದರೆ ನಮ್ಮ ಕನ್ನಡಿಗರು ಮತ್ತು ಕರ್ನಾಟಕದವರ ಸಂಖ್ಯೆ ಕಡಿಮೆ ಬೇಸರವಾಗುತ್ತದೆ. ಏಕೆ ಈ ರೀತಿಯ ಸಮಸ್ಯೆ ಎದುರಾಗುತ್ತಿದೆ ಎಂಬುದರ ಬಗ್ಗೆ ಗಮನ ಹರಿಸಬೇಕಾಗುತ್ತದೆ ಎಂದು ಬೇಸರ ವ್ಯಕ್ತ ಪಡಿಸಿದರು.

ಹರೆಯ ಎಂಬುದು ಬಹಳ ಕಠಿಣವಾದ ಸಮಯ ಇದನ್ನು ಹಾಳುಮಾಡಿಕೊಳ್ಳಬೇಡಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇಂದು ಆನ್‌ಲೈನ್‌ನಲ್ಲಿ ಅಧಿಕವಾದ ಸೌಲಭ್ಯಗಳಿವೆ. ಹೊಸತಲೆ ಮಾರಿನ ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ಪ್ರಾಂಶುಪಾಲ ಪ್ರೊ. ಟಿ.ಪಿ. ಪುಟ್ಟರಾಜು ಮಾತನಾಡಿ, ಮಕ್ಕಳಿಗೆ ಒಳ್ಳೆಯ ಶಿಕ್ಷಣದ ಜೊತೆಗೆ ವ್ಯಕ್ತಿತ್ವವನ್ನು ರೂಪಿಸಿ, ಬದುಕನ್ನು ಕಟ್ಟಿಕೊಡಬೇಕು ಎಂಬುದಾಗಿರುತ್ತದೆ. ಪ್ರತಿಯೊಂದು ಕುಟುಂಬದಲ್ಲಿಯೂ ಮಕ್ಕಳನ್ನು ಸಾವಿರಾರು ರೂ. ಗಳನ್ನು ಕಟ್ಟಿವಿದ್ಯಾಭ್ಯಾಸಕ್ಕೆ ಕಳುಹಿಸಿ ಕೊಡುತ್ತಿರುತ್ತಾರೆ ಇದರ ಮೂಲ ಉದ್ದೇಶ ಉದ್ಯೋಗ ಪಡೆಯುವುದಾಗಿದೆ. ಉದ್ಯೋಗ ಮಾಹಿತಿಕೋಶದ ಮುಖ್ಯಉದ್ದೇಶ ವಿದ್ಯಾರ್ಥಿಗಳು ಉದ್ಯೋಗ ಪಡೆದುಕೊಳ್ಳಲು ಬೇಕಾಗುವ ಸಿದ್ಧತೆಗಳನ್ನು ಮಾಡುವುದೇ ಆಗಿದೆ.ಎಂದರು.

ಕಾರ್ಯಾಗಾರದಲ್ಲಿ ಶೈಕ್ಷಣಿಕ ಡೀನ್ ಡಾ. ಎಂ.ಬಿ. ಇರ್ಷಾದ್ , ಪರೀಕ್ಷಾ ನಿಯಂತ್ರಕ ಪ್ರೊ. ಕೆ.ಡಿ. ಮುರುಳೀಧರ್, ಸ್ವಾಯತ್ತತೆ ಸಯೋಜಕ ಪ್ರೊ. ರಾಜು ಡಿ.ಎಸ್. ಪತ್ರಾಂಕಿತ ವ್ಯವಸ್ಥಾಪಕ ಕೆ.ಟಿ. ಸತ್ಯಮೂರ್ತಿ, ಸ್ಟೆನ್ಸಿಲ್ ಕನ್ಸಲ್‌ಟೆಂಟ್‌ನ ನಿರ್ದೇಶಕ ಕುನಾಲ್ ಷಾ, ಪ್ರಶಾಂತ್ ಮತ್ತು ರಮೇಶ್, ಉದ್ಯೋಗ ಮಾಹಿತಿ ಕೇಂದ್ರದ ಸದಸ್ಯ ಶ್ರೀನಿವಾಸ್ ಬಿ. ಹೆಚ್, ರಮೇಶ್, ಬಿ.ಆರ್, ಸವಿತ, ಪದ್ಮಾವತಿ, ಡಾ. ಲಿಂಗಮೂರ್ತಿ, ವಿವಿಧ ವಿಭಾಗದ ಪ್ರಾಧ್ಯಾಪಕರು, ಉಪನ್ಯಾಸಕರು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net