ಉದ್ಘಾಟನೆ ಭಾಗ್ಯಕಾಣದ ಪೊಲೀಸ್‌ಠಾಣೆಗಳು

Published on

ಚಾಮರಾಜನಗರ: ನೂತನ ಪೊಲೀಸ್ ಠಾಣೆಗಳನ್ನು ನಿರ್ಮಾಣ ಮಾಡಿ ಸಾಕಷ್ಟು ತಿಂಗಳುಗಳೇ ಕಳೆದಿದ್ದು, ಉದ್ಘಾಟನೆ ಭಾಗ್ಯ ಕಾಣದೆ ನಿಂತಿದೆ.

ನಗರದ ಗುಂಡ್ಲುಪೇಟೆ ರಸ್ತೆಯ ಉತ್ತುವಳ್ಳಿ ಗ್ರಾಮದ ಸಮೀಪ ನಿರ್ಮಿಸಿರುವ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಸಂತೇಮರಹಳ್ಳಿ ವೃತ್ತದ ಹಳೇ ರೇಷ್ಮೆ ಮಾರುಕಟ್ಟೆ ಬಳಿ ನಿರ್ಮಾಣ ಮಾಡಿರುವ ಹೊಸ ಪಟ್ಟಣ ಪೊಲೀಸ್ ಠಾಣೆ ನಿರ್ಮಾಣ ಕಾಮಗಾರಿ ಮುಗಿದು ಸಾಕಷ್ಟು ತಿಂಗಳು ಕಳೆದು ಉದ್ಘಾಟನೆಗೆ ಸಿದ್ಧವಾಗಿದ್ದರೂ, ಈವರೆಗೂ ಉದ್ಘಾಟನಾ ಭಾಗ್ಯ ದೊರಕಿಲ್ಲ. ಈ ಹಿಂದೆ ಪಟ್ಟಣ ಪೊಲೀಸ್ ಠಾಣೆ ತಾಲೂಕು ಪಂಚಾಯಿತಿ ಅಧೀನದ ತಾಲೂಕು ಬೋರ್ಡ್ ವಸತಿಗೃಹ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಈ ಕಟ್ಟಡ ಶಿಥಿಲಗೊಂಡ ಕಾರಣ ಸತ್ತಿ ರಸ್ತೆಯಲ್ಲಿರುವ ಪಿಡಬ್ಲ್ಯುಡಿ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು. ಇನ್ನೂ ಪಟ್ಟಣ ಪೊಲೀಸ್ ಠಾಣೆಗೆ ಈವರೆಗೂ ಸ್ವಂತ ಕಟ್ಟಡವೇ ಇಲ್ಲದೇ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುವ ಪರಿಸ್ಥಿತಿ ಇದೆ.

ಉಳಿದಂತೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದ ಬಳಿ ಗ್ರಾಮಾಂತರ ಪೊಲೀಸ್ ಠಾಣೆ ಕಾರ್ಯ ನಿರ್ವಹಣೆ ಮಾಡುತ್ತಿತ್ತು. ಈ ಕಟ್ಟಡ ಪೊಲೀಸ್ ಇಲಾಖೆಗೆ ಸೇರಿದ ಸ್ವಂತ ಕಟ್ಟಡವಾದರೂ ಗ್ರಾಮಾಂತರ ಠಾಣೆಗೆ ಹೊಸ ಕಟ್ಟಡದ ಅಗತ್ಯವಿತ್ತು. ಈಗಾಗಲೇ ಎರಡು ಪೊಲೀಸ್ ಠಾಣೆಗಳನ್ನು ಸುಸಜ್ಜಿತವಾಗಿ ನಿರ್ಮಾಣ ಮಾಡಲಾಗಿದ್ದು, ಈ ಮೂಲಕ ಸಾರ್ವಜನಿಕರಿಗೆ ಪೊಲೀಸ್ ಸೇವೆಯನ್ನು ಮತ್ತಷ್ಟು ಪರಿಣಾಮಕಾರಿಗೊಳಿಸಲು ಸಹಕಾರಿಯಾಗಲಿದೆ. ಆದರೆ ಉದ್ಘಾಟನೆ ಭಾಗ್ಯ ಕಾಣದೇ ಇಲಾಖೆ ಮತ್ತು ಸಾರ್ವಜನಿಕರ ಅನುಕೂಲಕ್ಕೆ ಬಾರದೇ ಈಗಲೇ ಧೂಳು ತುಂಬಿಕೊಂಡು ನಿಂತಿದೆ.

2 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ:
ನಗರದಲ್ಲಿ ಪಟ್ಟಣ ಪೊಲೀಸ್ ಠಾಣೆ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆ ನೂತನ ಕಟ್ಟಡಗಳನ್ನು ಅಂದಾಜು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ನೂತನವಾಗಿ ನಿರ್ಮಾಣವಾಗಿರುವ ಎರಡು ಪೊಲೀಸ್ ಠಾಣೆಗಳು ಪೊಲೀಸ್ ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್‌ಗಳಿಗೆ ಸುಸಜ್ಜಿತವಾದ ಪ್ರತ್ಯೇಕ ಕೊಠಡಿ, ವಿಶಾಲವಾದ ವೀಕ್ಷಕರ ಹಾಲ್ ಹಾಗೂ 2 ಬಂಧಿಖಾನೆಗಳನ್ನು ಒಳಗೊಂಡಿದೆ. ಹೊರಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ವಿಶಾಲವಾದ ಜಾಗ ನಿಗದಿ ಮಾಡಿದ್ದು, ಸುತ್ತಲೂ ಕಾಂಪೌಂಡ್ ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಎರಡು ಠಾಣೆಗಳನ್ನು ಹಸಿರೀಕರಣ ಗೊಳಿಸುವ ಉದ್ದೇಶದಿಂದ ಗಿಡಗಳನ್ನು ನೆಟ್ಟು, ಬೆಳೆಸಲು ಠಾಣೆಯ ಸುತ್ತಲೂ ಸ್ಥಳ ಮೀಸಲಿರಿಸಲಾಗಿದೆ. ಆದರೆ ಇಂತಹ ಸುಸಜ್ಜಿತವಾದ ಪೊಲೀಸ್ ಠಾಣೆಗಳು ಸಾರ್ವಜನಿಕರ ಅನುಕೂಲಕ್ಕೆ ಸಿಗುತ್ತಿಲ್ಲ ಎಂಬುದು ಬೇಸರದ ಸಂಗತಿಯಾಗಿದೆ.

ಶಿಥಿಲಾವಸ್ಥೆಯಲ್ಲಿ ಪಟ್ಟಣ ಪೊಲೀಸ್‌ಠಾಣೆ:
ನಗರದ ಸತ್ತಿ ರಸ್ತೆಯಲ್ಲಿರುವ ಪಿಡಬ್ಲ್ಯುಡಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಪಟ್ಟಣ ಪೊಲೀಸ್ ಠಾಣೆ ಶಿಥಿಲಾವಸ್ಥೆಗೊಂಡಿದೆ. ಕಟ್ಟವು ಸಾಕಷ್ಟು ಹಳೆಯದಾಗಿದ್ದು, ಗೋಡೆಗಳು ಮಳೆ ಬಂದರೆ ಸೋರುವಂತಹ ಪರಿಸ್ಥಿತಿಗೆ ತಲುಪಿದೆ. ಪೊಲೀಸ್ ಠಾಣೆಗೆ ಅಗತ್ಯವಾಗಿ ಬೇಕಾಗುವಷ್ಟು ಕೊಠಡಿಗಳು ವಿಸ್ತೀರ್ಣವಾಗಿರದೇ ತುಂಬಾ ಕಿರಿದಾಗಿದೆ. ವಾಹನಗಳ ನಿಲುಗಡೆಗೂ ಅಗತ್ಯವಾದ ಜಾಗವಿರದೇ ಪೊಲೀಸರಿಗೆ ಮತ್ತು ಸಾರ್ವಜನಿಕರಿಗೂ ಕಿರಿಕಿರಿ ಉಂಟಾಗುತ್ತಿದೆ. ಅದರಲ್ಲೂ ಪಟ್ಟಣ ಪೊಲೀಸ್ ಠಾಣೆಗೆ ನಿತ್ಯವೂ ಸಾಕಷ್ಟು ಸಮಸ್ಯೆಗಳನ್ನು ಹೊತ್ತುಕೊಂಡು ನೂರಾರು ಜನರು ಬರುತ್ತಾರೆ. ಸದ್ಯಕ್ಕೆ ಕಿರಿದಾಗಿರುವ ಪೊಲೀಸ್ ಠಾಣೆಯನ್ನು ಆದಷ್ಟು ಬೇಗ ಹೊಸ ಪೊಲೀಸ್ ಠಾಣೆಗೆ ಸ್ಥಳಾಂತರ ಮಾಡಬೇಕಾಗಿದೆ.

ಕೆಲಸ ಕಾರ್ಯಗಳು ಪೂರ್ಣ:
ಗುಂಡ್ಲುಪೇಟೆ ರಸ್ತೆಯ ಉತ್ತುವಳ್ಳಿ ಗ್ರಾಮದ ಸಮೀಪ ನಿರ್ಮಿಸಿರುವ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಸಂತೇಮರಹಳ್ಳಿ ವೃತ್ತದ ಹಳೇ ರೇಷ್ಮೆ ಮಾರುಕಟ್ಟೆ ಬಳಿ ನಿರ್ಮಾಣ ಮಾಡಿರುವ ಹೊಸ ಪಟ್ಟಣ ಪೊಲೀಸ್ ಠಾಣೆ ನಿರ್ಮಾಣ ಕಾಮಗಾರಿ ಸಾಕಷ್ಟು ತಿಂಗಳ ಹಿಂದೆಯೇ ಮುಕ್ತಾಯಗೊಂಡಿದೆ. ಎರಡು ಪೊಲೀಸ್ ಠಾಣೆಗಳಿಗೆ ಬೇಕಾಗಿದ್ದ ಪೀಠೋಪಕರಣಗಳು ಬರುವುದು ತಡವಾಗಿತ್ತು, ಆದರೆ ಈಗ ಅಗತ್ಯವಾದ ಪೀಠೋಪಕರಣಗಳು ಬಂದಿದೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕವಲಂದೆಗೆ ಭೇಟಿ ನೀಡುವ ಸಾಧ್ಯತೆ ಇದೆ. ಆ ಸಂದರ್ಭದಲ್ಲಿ ಪೊಲೀಸ್ ಠಾಣೆಗಳನ್ನು ಉದ್ಘಾಟನೆ ಮಾಡುವಂತೆ ಹೇಳಿದ್ದಾರೆ. ನಾವು ಕೂಡ ಆದಷ್ಟು ಬೇಗ ಉದ್ಘಾಟನೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮನಿ ಸಾಹು ವಿಜಯವಾಣಿಗೆ ಮಾಹಿತಿ ನೀಡಿದರು.

ನೂತನ ಪೊಲೀಸ್ ಠಾಣೆಗಳ ಉದ್ಘಾಟನೆ ಮಾಡಿಸುವಂತೆ ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದೇವೆ. ಸಿಎಂ ಸಿದ್ದರಾಮಯ್ಯ ಅವರು ಕವಲಂದೆಗೆ ಭೇಟಿ ನೀಡಲು ದಿನಾಂಕ ನಿಗದಿಯಾಗಿದೆ. ಆಸಂದರ್ಭದಲ್ಲಿ ಉದ್ಘಾಟನೆ ಮಾಡಿಸುವ ಪ್ರಯತ್ನದಲ್ಲಿದ್ದೇವೆ.-ಪದ್ಮನಿ ಸಾಹು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net