

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಬಿಜೆಪಿಯ ಉನ್ನತ ನಾಯಕರು, ಸಾವಿರಾರು ಕಾರ್ಯಕರ್ತರ ಉಪಸ್ಥಿತಿಯಲ್ಲಿ ಯೋಗಿ ಆದಿತ್ಯನಾಥ ಅವರು ಲಖನೌದ ಏಕಾನಾ ಕ್ರೀಡಾಂಗಣದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ 2ನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದರು. ಉಪಮುಖ್ಯಮಂತ್ರಿಗಳಾಗಿ ಒಬಿಸಿ ನಾಯಕ ಕೇಶವ್ ಪ್ರಸಾದ್ ಮೌರ್ಯ ಮತ್ತು ಬ್ರಾಹ್ಮಣ ಸಮಾಜದ ಬ್ರಿಜೇಶ್ ಪಾಠಕ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಮಾಜಿ ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಅವರಿಗೆ ಸಂಘಟನೆಯಲ್ಲಿ ಪ್ರಮುಖ ಜವಾಬ್ದಾರಿ ನೀಡುವ ಬಗ್ಗೆ ಚರ್ಚೆಗಳು ನಡೆದಿವೆ.
ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಸೇರಿ 200 ಅತಿಗಣ್ಯರು, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹಿತ ಬಿಜೆಪಿ ಆಡಳಿತವಿರುವ ರಾಜ್ಯಗಳ ಎಲ್ಲ ಸಿಎಂಗಳು, 50,000ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಮತ್ತು ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಯೋಗಿ ಸರ್ಕಾರದ ಸಚಿವರ ಪಟ್ಟಿಯಲ್ಲಿ ಒಟ್ಟು 52 ಹೆಸರುಗಳಿದ್ದು, ಕೇಂದ್ರ ನಾಯಕತ್ವ ಈ ಪಟ್ಟಿಗೆ ಇನ್ನೂ ಹಲವು ಹೆಸರುಗಳನ್ನು ಸೇರಿಸುವ ಸಾಧ್ಯತೆಯಿದೆ. 52 ಮಂದಿಯ ಹೊಸ ಸಂಪುಟದಲ್ಲಿ 32 ಹೊಸ ಮುಖಗಳಿಗೆ ಅವಕಾಶ ಸಿಕ್ಕಿರುವುದು ವಿಶೇಷ. ಈ ಮಧ್ಯೆ ಪಕ್ಷದ ಹಲವು ಪ್ರಮುಖ ನಾಯಕರಿಗೆ ಸಂಪುಟದಲ್ಲಿ ಸ್ಥಾನ ಸಿಗದಿರುವುದು ಅಚ್ಚರಿಗೆ ಕಾರಣವಾಗಿದೆ. ವಿದ್ಯುತ್ ಸಚಿವರಾಗಿದ್ದ ಮಥುರಾ ಕ್ಷೇತ್ರದ ಶಾಸಕ ಶ್ರೀಕಾಂತ್ ಶರ್ಮ, ಸಿದ್ಧಾರ್ಥನಾಥ ಸಿಂಗ್ರನ್ನು ಕೈಬಿಡಲಾಗಿದೆ. ಕೈಗಾರಿಕೆ ಸಚಿವರಾಗಿದ್ದ ಮಹಾರಾಜಪುರದಿಂದ ಆಯ್ಕೆಯಾಗಿದ್ದ ಸತೀಶ್ ಮಹಾನಾ, ಗೊಂಡಾ ಜಿಲ್ಲೆಯ ಮಂಕಾಪುರದ ಶಾಸಕ ರಮಾಪತಿ ಶಾಸ್ತ್ರಿ ಹೆಸರೂ ಪಟ್ಟಿಯಲ್ಲಿಲ್ಲ. ಈ ಮಧ್ಯೆ, ಯುಪಿ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವುದರಿಂದ, ಹೊಸ ಅಧ್ಯಕ್ಷರ ನೇಮಕವಾಗುವ ಸಾಧ್ಯತೆಯಿದೆ.
ಸಚಿವ ಸ್ಥಾನ ಪಡೆಯಲು ವಿಫಲರಾದ ನಾಯಕರಲ್ಲಿ ಜೈ ಪ್ರತಾಪ್ ಸಿಂಗ್, ರಾಮ್ ನರೇಶ್ ಅಗ್ನಿಹೋತ್ರಿ, ಅಶುತೋಷ್ ಟಂಡನ್, ನೀಲಕಂಠ ತಿವಾರಿ ಮತ್ತು ಮಹೇಂದ್ರ ಸಿಂಗ್ ಕೂಡ ಇದ್ದಾರೆ. ಹಿಂದಿನ ಸರ್ಕಾರ ಏಕೈಕ ಮುಸ್ಲಿಂ ಸಚಿವರಾಗಿದ್ದ ಮೊಹ್ಸಿನ್ ರಾಜಾ ಬದಲಿಗೆ ಈ ಬಾರಿ ಡ್ಯಾನಿಶ್ ಆಜಾದ್ ಅನ್ಸಾರಿಗೆ ಅವಕಾಶ ನೀಡಲಾಗಿದೆ. ಕೇಶವ್ ಪ್ರಸಾದ್ ಮೌರ್ಯರನ್ನು ಮತ್ತೊಂದು ಅವಧಿಗೆ ಉಪಮುಖ್ಯಮಂತ್ರಿಯನ್ನಾಗಿ ನೇಮಿಸಿರುವ ಹಿಂದೆ ಒಬಿಸಿ ಮತಗಳನ್ನು ಪಕ್ಷದ ತೆಕ್ಕೆಯಲ್ಲಿಟ್ಟುಕೊಳ್ಳುವ ಉದ್ದೇಶ ಅಡಗಿದೆ. 2024 ಲೋಕಸಭೆ ಚುನಾವಣೆಗೆ ಸಮಾಜವಾದಿ ಪಾರ್ಟಿ ಪ್ರಮುಖ ಎದುರಾಳಿಯಾಗಿರುವುದರಿಂದ ಒಬಿಸಿ ನಾಯಕರೊಬ್ಬರಿಗೆ ಪ್ರಮುಖ ಸ್ಥಾನ ನೀಡುವುದು ಅನಿವಾರ್ಯವಾಗಿತ್ತು. ಹೀಗಾಗಿ, ಸಿರಾಥು ಕ್ಷೇತ್ರದಿಂದ ಸೋತಿದ್ದರೂ, ರಾಜ್ಯಾದ್ಯಂತ ಪ್ರವಾಸ ಮಾಡಿ ಚುನಾವಣೆ ಗೆಲುವಿಗೆ ಕೊಡುಗೆ ನೀಡಿದ್ದ ಕೇಶವ್ ಪ್ರಸಾದ್ ಮೌರ್ಯರನ್ನು ಸಂಪುಟದಲ್ಲಿ ಉಳಿಸಿಕೊಳ್ಳಲು ದಿಲ್ಲಿ ನಾಯಕರು ತೀರ್ವನಿಸಿದರು.
ಬ್ರಿಜೇಶ್ ಪಾಠಕ್ ಯಾರು?: ಹೊಸ ಉಪಮುಖ್ಯಮಂತ್ರಿ ಬ್ರಿಜೇಶ್ ಪಾಠಕ್, ಚುನಾವಣೆಯಲ್ಲಿ ಲಖನೌ ಕಂಟೋನ್ಮೆಂಟ್ ಕ್ಷೇತ್ರದಿಂದ ಗೆದ್ದಿದ್ದರು. 2017ರ ಚುನಾವಣೆಯ ಮೊದಲು ಬಹುಜನ ಸಮಾಜ ಪಕ್ಷದಲ್ಲಿದ್ದ ಅವರು ನಂತರ ಬಿಜೆಪಿ ಸೇರಿ, ಯೋಗಿ ಸರ್ಕಾರದಲ್ಲಿ ಕಾನೂನು ಸಚಿವರಾಗಿದ್ದರು. ಅವರನ್ನು ರಾಜ್ಯದ ಪ್ರಬಲ ಬ್ರಾಹ್ಮಣ ನಾಯಕ ಎಂದು ಪರಿಗಣಿಸಲಾಗಿದ್ದು, ವಿಧಾನಸಭಾ ಚುನಾವಣೆಯಲ್ಲಿ ಕೂಡ ಪ್ರಚಾರ ಮಾಡಲೆಂದು ಪ್ರಚಾರಕ್ಕಾಗಿ ಹಲವು ಅಭ್ಯರ್ಥಿಗಳು ತಮ್ಮ ಕ್ಷೇತ್ರಗಳಿಗೆ ಕರೆದಿದ್ದರು. 1989 ರಲ್ಲಿ ವಿದ್ಯಾರ್ಥಿ ರಾಜಕೀಯದಿಂದ ಹೋರಾಟ ಶುರುಮಾಡಿದ್ದ ಅವರು 1990ರಲ್ಲಿ ಲಖನೌ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷರಾಗಿದ್ದರು.
ಏಕೈಕ ಮುಸ್ಲಿಮ್: ವಿದ್ಯಾರ್ಥಿಯಾಗಿದ್ದಾಗಲೇ ರಾಜಕೀಯ ಇನ್ನಿಂಗ್ಸ್ ಆರಂಭಿಸಿದ ಡ್ಯಾನಿಶ್ ಆಜಾದ್ ಅನ್ಸಾರಿ, ಲಖನೌ ವಿವಿಯಲ್ಲಿ ಬಿಕಾಂ, ನಂತರ ಮಾಸ್ಟರ್ ಆಫ್ ಕ್ವಾಲಿಟಿ ಮ್ಯಾನೇಜ್ವೆುಂಟ್, ಮಾಸ್ಟರ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನಲ್ಲಿ ಉನ್ನತ ವ್ಯಾಸಂಗ ಮಾಡಿದ್ದಾರೆ. ಪಕ್ಷದಲ್ಲಿ ಅನ್ಸಾರಿ ಸಕ್ರಿಯ ಕಾರ್ಯನಿರ್ವಹಣೆಯನ್ನು ಗುರುತಿಸಿಯೇ ಚುನಾವಣೆಗೆ ಮುನ್ನ (2021 ಅಕ್ಟೋಬರ್) ಅವರನ್ನು ಪಕ್ಷದ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿತ್ತು. ಚುನಾವಣೆಯಲ್ಲಿ ಅನ್ಸಾರಿ ಸ್ಪರ್ಧಿಸಿಲ್ಲ. 32 ವರ್ಷದ ಅನ್ಸಾರಿ ಯೋಗಿ ಸಂಪುಟದ ಏಕೈಕ ಮುಸ್ಲಿಂ ಸಮುದಾಯದ ಸಚಿವರಾಗಿದ್ದು, ವಿಧಾನ ಪರಿಷತ್ ಸದಸ್ಯತ್ವ ನೀಡಲು ಪಕ್ಷ ನಿರ್ಧರಿಸಿದೆ.
ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಯೋಗಿ ಆದಿತ್ಯನಾಥ ಮತ್ತು ಅವರ ಸಂಪುಟ ಸದಸ್ಯರಿಗೆ ಹೃತ್ಪೂರ್ವಕ ಅಭಿನಂದನೆಗಳು. ಕಳೆದ 5 ವರ್ಷಗಳಲ್ಲಿ ರಾಜ್ಯದ ಅಭಿವೃದ್ಧಿ ಪಯಣದಲ್ಲಿ ಹಲವಾರು ಪ್ರಮುಖ ಮೈಲಿಗಲ್ಲುಗಳನ್ನು ಕಂಡಿದೆ. ನಿಮ್ಮ ನಾಯಕತ್ವದಲ್ಲಿ ರಾಜ್ಯವು ಜನರ ಆಶೋತ್ತರಗಳನ್ನು ಈಡೇರಿಸುವ ಮೂಲಕ ಪ್ರಗತಿಯ ಮತ್ತೊಂದು ಹೊಸ ಅಧ್ಯಾಯ ಬರೆಯಲಿದೆ ಎಂಬ ಖಾತರಿ ನನಗಿದೆ. | ನರೇಂದ್ರ ಮೋದಿ ಪ್ರಧಾನಿ ಸಮಾಜವಾದಿ ಪಕ್ಷ ನಿರ್ವಿುಸಿರುವ ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ನೂತನ ಸರ್ಕಾರಕ್ಕೆ ಅಭಿನಂದನೆಗಳು. ಪ್ರಮಾಣ ವಚನವು ಕೇವಲ ಸರ್ಕಾರ ರಚನೆಗಷ್ಟೇ ಸೀಮಿತವಾಗ ಬಾರದು. ನಿಜವಾದ ಅರ್ಥದಲ್ಲಿ ಜನರಿಗೆ ಸೇವೆ ಸಲ್ಲಿಸುವಂತಾಗಲಿ. | ಅಖಿಲೇಶ್ ಯಾದವ್ ಸಮಾಜವಾದಿ ಪಕ್ಷದ ನಾಯಕ ಜನ ಕಲ್ಯಾಣ ಕಾರ್ಯಕ್ರಮಗಳ ಜತೆಗೆ ಕಾನೂನು ಸುವ್ಯವಸ್ಥೆ ಸದೃಢ ಗೊಳಿಸಿದ ಯೋಗಿ ಆದಿತ್ಯನಾಥ ಅವರು ಉತ್ತರ ಪ್ರದೇಶದ ಮುಖ್ಯ ಮಂತ್ರಿಯಾಗಿ ಎರಡನೇ ಅವಧಿಗೆ ಆಯ್ಕೆಯಾಗಿ, ಪ್ರಮಾಣ ವಚನ ಸ್ವೀಕರಿಸಿರುವುದು ಸಂತಸದ ವಿಚಾರ. ಮುಂದಿನ 5 ವರ್ಷಗಳಲ್ಲಿ ರಾಜ್ಯ ಮತ್ತಷ್ಟು ಪ್ರಗತಿ ಸಾಧಿಸಲಿದೆ. ಸಿಎಂ ಯೋಗಿ ಮತ್ತವರ ಸಂಪುಟ ಸಹೋದ್ಯೋಗಿಗಳಿಗೆ ಅಭಿನಂದನೆಗಳು | ಪ್ರಲ್ಹಾದ ಜೋಶಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ
ಯೋಗಿ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಹಿನ್ನೆಲೆಯಲ್ಲಿ ಸಮಾರಂಭದ ಪೂರ್ವಭಾವಿಯಾಗಿ ಪಕ್ಷದ ಬೆಂಬಲಿಗರು ವಾರಣಾಸಿ, ಮಥುರಾ, ಅಯೋಧ್ಯೆ ಸೇರಿ ರಾಜ್ಯದ ಹಲವೆಡೆ ದೇವಾಲಯಗಳಲ್ಲಿ ವಿಶೇಷ ಪ್ರಾರ್ಥನೆಗಳನ್ನು ಮಾಡಿದರು. ಪಕ್ಷದ ಉತ್ಸಾಹಿ ಬೆಂಬಲಿಗರು ಯೋಗಿ ಆದಿತ್ಯನಾಥ ಸರ್ಕಾರದ ಹೊಸ ಲಾಂಛನದಂತಿರುವ ಬುಲ್ಡೋಜರ್ನ್ನೂ ಪೂಜಿಸುತ್ತಿದ್ದರು. ಲಖನೌದಲ್ಲಿ ರೋಮಾಂಚನಗೊಂಡಿದ್ದ ಬಿಜೆಪಿ ಬೆಂಬಲಿಗರು ಬುಲ್ಡೋಜರ್ ಮೇಲೆ ಸವಾರಿ ಮಾಡಿ ಬುಲ್ಡೋಜರ್ ಬಾಬಾ ಜಿಂದಾಬಾದ್ ಎಂದು ಘೊಷಣೆ ಕೂಗುತ್ತಿದ್ದ ದೃಶ್ಯ ಕಂಡುಬಂತು. ಕ್ರಿಮಿನಲ್ಗಳು ಮತ್ತು ಮಾಫಿಯಾ ಡಾನ್ಗಳ ಅಕ್ರಮ ಆಸ್ತಿಗಳನ್ನು ಧ್ವಂಸಗೊಳಿಸಿದ್ದಕ್ಕಾಗಿ ಸಿಎಂ ಆದಿತ್ಯನಾಥ ರಾಜ್ಯದಲ್ಲಿ ಬುಲ್ಡೋಜರ್ ಬಾಬಾ ಎಂದೇ ಖ್ಯಾತಿಯಾಗಿದ್ದಾರೆ.
ಉಡುಪಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಶುಕ್ರವಾರ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪಾಲ್ಗೊಂಡರು. ಲಖನೌನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪೇಜಾವರ ಶ್ರೀಗಳ ವಾಹನವೂ ರಸ್ತೆಯಲ್ಲಿ ಸಿಲುಕಿದ್ದು, ಶ್ರೀಗಳು ವಾಹನದಿಂದ ಇಳಿದು 2 ಕಿ.ಮೀ. ನಡೆದುಕೊಂಡೇ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂ ತಲುಪಿದರು. ರಾಜ್ಯದಿಂದ ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಇಸ್ಕಾನ್ನ ಮಧುಪಂಡಿತ ದಾಸ್ ಕೂಡ ಆಗಮಿಸಿದ್ದರು. ಸಮಾರಂಭಕ್ಕೆ ನೂರಾರು ಸಾಧು ಸಂತರನ್ನು ಆಮಂತ್ರಿಸಲಾಗಿದ್ದು, ಆತಿಥ್ಯಕ್ಕಾಗಿ ಹಿರಿಯ ಅಧಿಕಾರಿಗಳಾದ ಅವನೀಶ್ ಅವಸ್ಥಿ, ಆರ್.ಪಿ.ಸಿಂಗ್, ಅಶೋಕ್ ತಿವಾರಿ, ಆರ್ಬಿಎಸ್ ರಾವತ್ ಮೊದಲಾದವರ ನೇತೃತ್ವದಲ್ಲಿ ಪ್ರತ್ಯೇಕ ತಂಡ ರಚಿಸಲಾಗಿತ್ತು. ಸಂತರಿಗೆ ಪ್ರತ್ಯೇಕ ಆಸನ ವ್ಯವಸ್ಥೆಗೊಳಿಸಲಾಗಿತ್ತು. ಪೇಜಾವರ ಶ್ರೀಗಳ ಜತೆ ಬೆಂಗಳೂರಿನ ಉದ್ಯಮಿ ರಾಮ್್ರಸಾದ್, ವಾಸುದೇವ ಭಟ್ ಪೆರಂಪಳ್ಳಿ, ದೆಹಲಿ ಪೇಜಾವರ ಮಠದ ಮ್ಯಾನೇಜರ್ ದೇವಿಪ್ರಸಾದ್ ಭಟ್, ಕೃಷ್ಣ ಭಟ್ ಉಪಸ್ಥಿತರಿದ್ದರು.
ಮಂಗಳೂರು: ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ ಎರಡನೇ ಬಾರಿ ಪ್ರಮಾಣ ವಚನ ಸ್ವೀಕಾರ ಪ್ರಯುಕ್ತ ಶುಕ್ರವಾರ ಮಂಗಳೂರಿನ ಕದ್ರಿ ಜೋಗಿ ಮಠದಲ್ಲಿ ಆರಾಧ್ಯದೇವ ಶ್ರೀಕಾಲಭೈರವ ಮೂರ್ತಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಕದ್ರಿಯ ಕದಳಿ ಮಠದ ಪೀಠಾಧಿಪತಿ ಶ್ರೀ ನಿರ್ಮಲನಾಥ್ಜಿ ಮಹಾರಾಜ್ ನೇತೃತ್ವದಲ್ಲಿ ವಿಶೇಷ ಪೂಜೆ, ನೈವೇದ್ಯ ಸಮರ್ಪಿಸಲಾಯಿತು. ಮುಂದಿನ ಐದು ವರ್ಷ ಯೋಗಿ ಆದಿತ್ಯನಾಥರ ಆಡಳಿತ ಸುಭದ್ರವಾಗಿರಲಿ ಎಂದು ಪ್ರಾರ್ಥಿಸಲಾಯಿತು. ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಜೋಗಿ, ಪ್ರಧಾನ ಕಾರ್ಯದರ್ಶಿ ಎಚ್.ಕೆ.ಪುರುಷೋತ್ತಮ ಜೋಗಿ ಮೊದಲಾದವರು ಉಪಸ್ಥಿತರಿದ್ದರು. ಗೋರಖಪುರ ಮಠದ ಮಠಾಧೀಶರಾಗಿರುವ ಯೋಗಿ ಆದಿತ್ಯನಾಥ ಅವರು ಕದ್ರಿ ಯೋಗೇಶ್ವರ ಮಠದ ಮಠಾಧೀಶರ ಆಯ್ಕೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ಮಠಾಧೀಶರ ಪಟ್ಟಾಭಿಷೇಕ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದರು. ಕದ್ರಿ ಜೋಗಿ ಮಠದ ಕಾಲಭೈರವೇಶ್ವರ ದೇವಸ್ಥಾನದ ಜೀಣೋದ್ಧಾರ ನಡೆಯುತ್ತಿದ್ದು, ಇದರ ಲೋಕಾರ್ಪಣೆಗೆ ಯೋಗಿ ಆದಿತ್ಯನಾಥ ಅವರನ್ನು ಆಹ್ವಾನಿಸಲು ಪ್ರಮುಖರು ನಿರ್ಧರಿಸಿದ್ದಾರೆ.