

ಮೈಸೂರ: ಪೌಷ್ಟಿಕ ಆಹಾರ ಸೇವನೆಯಿಂದ ಆರೋಗ್ಯವಾಗಿರಲು ಸಾಧ್ಯ. ಅಲ್ಲದೆ, ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದೂ ಮುಖ್ಯ ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು
ಎಚ್.ಡಿ.ಕೋಟೆ ಪಟ್ಟಣದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಬುಧವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ, ಎಚ್.ಡಿ.ಕೋಟೆ ತಾಲೂಕು ಆರೋಗ್ಯಾಧಿಕಾರಿ ಕಚೇರಿ ಮತ್ತು ಶಿಶು ಅಭಿವೃದ್ಧಿ ಯೋಜನೆ ಹಾಗೂ ತಾಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ ಆಶಾ ಕಾರ್ಯಕರ್ತೆಯರಿಗೆ ಕಿಟ್ ವಿತರಣೆ ಮತ್ತು ಪೋಷಣ್ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಒಬ್ಬ ಮಹಿಳೆ ಗರ್ಭ ಧರಿಸಿದ ದಿನದಿಂದ ಮಗು ಜನಿಸುವವರೆಗೂ ಯಾವ ರೀತಿಯ ಆಹಾರ ಸೇವಿಸಬೇಕು ಎಂದು ಆಶಾ ಕಾರ್ಯಕರ್ತೆಯರಿಗೆ ತಿಳಿದಿರುತ್ತದೆ. ಆದ್ದರಿಂದ, ಗರ್ಭಿಣಿಯರು ಮತ್ತು ಬಾಣಂತಿಯರು ಆರೋಗ್ಯ ಇಲಾಖೆಯ ಸಲಹೆಯಂತೆ ಪೌಷ್ಟಿಕ ಆಹಾರವನ್ನು ತೆಗೆದುಕೊಳ್ಳಬೇಕು. ಆಶಾ ಕಾರ್ಯಕರ್ತೆಯರಿಗೆ ನೀಡುವ ಕಿಟ್ ಅನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಲಾಗುವುದು ಎಂದು ಅಂಗನವಾಡಿ ಕಾರ್ಯಕರ್ತೆಯರಿಗೆ ಭರವಸೆ ನೀಡಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್ ಮಾತನಾಡಿ, ತಾಯಿ ಮತ್ತು ಮಕ್ಕಳ ಮರಣ ತಪ್ಪಿಸಲು ಪೋಷಣ್ ಅಭಿಯಾನ ಜಾರಿಗೊಳಿಸಲಾಗಿದೆ. ಗರ್ಭಿಣಿಯರು ಕಡ್ಡಾಯವಾಗಿ ತಾಯಿ ಕಾರ್ಡ್‌ನಲ್ಲಿ ನಮೂದಿಸಿರುವ ಸೂಚನೆಗಳನ್ನು ಓದಿ ಅದನ್ನು ಪಾಲಿಸಬೇಕು. ಅದರಂತೆ ನಡೆದುಕೊಂಡರೆ ತಾಯಿ ಮಗು ಆರೋಗ್ಯದಿಂದ ಇರಲು ಸಾಧ್ಯ ಎಂದರು.
ಸರಗೂರು ಮತ್ತು ಎಚ್.ಡಿ.ಕೋಟೆಯಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ 11 ಮಕ್ಕಳಿದ್ದಾರೆ. ಅಲ್ಲದೆ, ತಾಲೂಕಿನಲ್ಲಿ ಬಾಲ್ಯವಿವಾಹ ನಡೆಯುತ್ತಿವೆ. ಇದರಿಂದ ಹೆಣು ್ಣಮಕ್ಕಳು ಕಡಿಮೆ ವಯಸ್ಸಿಗೆ ಗರ್ಭ ಧರಿಸುತ್ತಿದ್ದಾರೆ. ಇದರಿಂದ ಮಗುವಿನ ಬೆಳವಣಿಗೆಗೆ ತೊಂದರೆಯಾಗಲಿದೆ ಎಂದು ತಿಳಿಸಿದರು.
ಬಾಲ್ಯವಿವಾಹದ ಒಂದು ಪ್ರಕರಣ ಬೆಳಕಿಗೆ ಬಂದಿದ್ದು ಪೋಕ್ಸೋ ಕಾಯ್ದೆಯಡಿ ಪ್ರಕರಣವೂ ದಾಖಲಾಗಿದೆ. ಈ ನಿಟ್ಟಿನಲ್ಲಿ ಬಾಲ್ಯವಿವಾಹ ತಡೆಯಲು ಆಶಾ ಕಾರ್ಯಕರ್ತೆಯರು ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದರು.
ಸಿಡಿಪಿಒ ಆಶಾ ಪೋಷಣ್ ಅಭಿಯಾನ ಕುರಿತು ಮಾತನಾಡಿ, 2018ರಿಂದಲೂ ಪೋಷಣ್ ಅಭಿಯಾನ ಮಾಡುತ್ತಿದ್ದೇವೆ. ಇತ್ತೀಚೆಗೆ ಗರ್ಭಿಣಿ ಮತ್ತು ಬಾಣಂತಿಯರಲ್ಲಿ ರಕ್ತ ಹೀನತೆ ಕಂಡುಬರುತ್ತಿದೆ. ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಅಂಗನವಾಡಿಯಲ್ಲಿ ಮೊಟ್ಟೆಗಳನ್ನು ನೀಡುತ್ತಿದ್ದು ಅದರ ಪ್ರಯೋಜನ ಪಡೆಯಬೇಕು. ಇದರಿಂದ ಮಗುವಿನ ಮೆದುಳು ಬೆಳವಣಿಗೆ ಹೊಂದಲು ಸಹಕಾರಿ ಆಗಲಿದೆ ಎಂದರು.
ತಹಸೀಲ್ದಾರ್ ಸಣ್ಣರಾಮಪ್ಪ, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಸೋಮಣ್ಣ, ಜಿಪಂ ಮಾಜಿ ಸದಸ್ಯ ಚಿಕ್ಕವೀರನಾಯಕ, ಬಾಬು ಜಗಜೀವನ ರಾಂ ವೇದಿಕೆ ಅಧ್ಯಕ್ಷ ನಾಗರಾಜು ಇತರರಿದ್ದರು.