

ಉಂಡುವಾಡಿ ಕುಡಿಯುವ ನೀರು ಪೂರೈಕೆ ಯೋಜನೆಗೆ ಸಾಕಷ್ಟು ಸಮಸ್ಯೆಗಳು ಎದುರಾಗಿವೆ. ಆ ಎಲ್ಲ ಸಮಸ್ಯೆಗಳನ್ನು ನಿವಾರಿಸಿಕೊಂಡು ಕಾಮಗಾರಿ ನಡೆಯುತ್ತಿದ್ದು, ಯೋಜನೆ ಕಾಮಗಾರಿ 2026ಕ್ಕೆ ಪೂರ್ಣಗೊಳ್ಳಲಿದೆ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಹಿರಿಯ ಅಧಿಕಾರಿಗಳ ಜತೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇವೆ. ಮುಂಬರುವ 2026ಕ್ಕೆ ಕಾಮಗಾರಿ ಪೂರ್ಣಗೊಂಡು ಜನರಿಗೆ ಶುದ್ಧ ಕುಡಿಯುವ ಪೂರೈಕೆ ಮಾಡಲಾಗುವುದು ಎಂದರು.
ಕೂರ್ಗಳ್ಳಿ ಕೆರೆ ಒತ್ತುವರಿ ತೆರವು ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಕೂರ್ಗಳ್ಳಿ ಕೆರೆ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತದೆ. ಮಾತ್ರವಲ್ಲದೇ ಯಾವುದೇ ಕೆರೆಗಳ ಒತ್ತುವರಿ ಆಗಿದ್ದರೂ ತೆರವುಗೊಳಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಕೆರೆಗಳಿಗೆ ನೀರು ತುಂಬಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ರಾಜಕೀಯ ಕೆಸರೆರೆಚಾಟ:
ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಬೇಸರ ಹೊರಹಾಕಿದ ಜಿಟಿಡಿ, ರಾಜಕೀಯ ಎಂದರೆ ಒಬ್ಬರ ಮೇಲೆ ಮತ್ತೊಬ್ಬರು ಕೆಸರು ಎರಚಿಕೊಳ್ಳುವಂತಾಗಿದೆ. ನೋಡುತ್ತಿರುವ ಜನರು ಕೂಡ ಮಜಾ ತೆಗೆದುಕೊಳ್ಳುತ್ತಿದ್ದಾರೆ. ರಾಜಕೀಯ ವಿದ್ಯಮಾನಗಳನ್ನು ಮಾಧ್ಯಮಗಳು ಸಹ ವೈಭವೀಕರಿಸುತ್ತಿವೆ. ಜನರು ಮಜಾ ತೆಗೆದುಕೊಳ್ಳುತ್ತಿದ್ದಾರೆ. ಜನರಿಗೂ ಸಹ ಇದೇ ಬೇಕಾಗಿದೆ ಎಂದರು.
ರಾಜಕೀಯ ಪಕ್ಷಗಳು ಪರಸ್ಪರ ಅರೋಪ ಪ್ರತ್ಯಾರೋಪ ಮಾಡುತ್ತವೆ. ವಿಪಕ್ಷದಲ್ಲಿದ್ದಾಗ ಆರೋಪ ಮಾಡುವ ಪಕ್ಷವೇ ಮುಂದೆ ಅಧಿಕಾರಕ್ಕೆ ಬಂದರೂ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ನಮ್ಮ ರಾಜ್ಯದಲ್ಲೂ ಇದೇ ಪರಿಸ್ಥಿತಿ ಇದೆ ಎಂದು ಹೇಳಿದರು.
ಅನುದಾನ ನೀಡುವ ಭರವಸೆ:
ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಸಿಗದಿರುವುದಕ್ಕೆ ಆಡಳತರೂಢ ಕಾಂಗ್ರೆಸ್ ಪಕ್ಷದ ಶಾಸಕರೇ ಅಸಮಾಧಾನ ವ್ಯಕ್ತಪಡಿಸಿರುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದಾಗಿ ಕಳೆದೆರಡು ವರ್ಷಗಳಿಂದ ಯಾವುದೇ ಅನುದಾನವನ್ನು ನೀಡಿಲ್ಲ. ಈ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಶಾಸಕರ ಕ್ಷೇತ್ರಾಭಿವೃದ್ದಿಗೆ ಅನುದಾನ ನೀಡುವುದಾಗಿ ಬಜೆಟ್ ಮಂಡನೆ ವೇಳೆ ಭರವಸೆ ನೀಡಿದ್ದಾರೆ. ಅದರಂತೆಯೇ ನಡೆದುಕೊಳ್ಳುತ್ತಾರೆಂಬ ವಿಶ್ವಾಸವಿದೆ ಎಂದರು.