ಈಶಾ ಫೌಂಡೇಷನ್‌ನಿಂದ ಸಾವಿರ ಕಿಟ್ ವಿತರಣೆ: ರಾಜ್ಯದಲ್ಲಿ 4 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಅನುಕೂಲ

27CBP8(isha)
Published on

ಚಿಕ್ಕಬಳ್ಳಾಪುರ: ಸದ್ಗುರು ಜಗ್ಗಿ ವಾಸುದೇವ್ ಮಾರ್ಗದರ್ಶನದಲ್ಲಿ ಈಶಾ ಫೌಂಡೇಷನ್ ಜಿಲ್ಲೆಯಲ್ಲಿನ ಸರ್ಕಾರಿ ಆಸ್ಪತ್ರೆಗಳಿಗೆ ವೈದ್ಯಕೀಯ ಸಲಕರಣೆಗಳು, ವಿವಿಧ ವಲಯಗಳ ಸೇವಾ ಕಾರ್ಯಕರ್ತರ ಜತೆಗೆ ಕರೊನಾ ಸೋಂಕಿನಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ಸೇರಿ ವಿವಿಧ ಸೇವಾ ಚಟುವಟಿಕೆಯನ್ನು ಕೈಗೊಂಡಿದೆ.

ಕಳೆದ 50 ದಿನಗಳಲ್ಲಿ ರಾಜ್ಯದ ಕರೊನಾ ಮುಂಚೂಣಿ ಯೋಧರಿಗೆ ಮತ್ತು ದೀನದಲಿತ ಸಮುದಾಯಗಳಿಗೆ 4 ಲಕ್ಷಕ್ಕೂ ಹೆಚ್ಚು ಆಹಾರ ಪ್ಯಾಕೆಟ್‌ಗಳನ್ನು ವಿತರಿಸಿದ್ದು ಇದೇ ವೇಳೆ ಜಿಲ್ಲೆಯಲ್ಲೂ ಸಾಮಾಜಿಕ ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ.

ಕರೊನಾ ಸೋಂಕಿನ ಪರಿಣಾಮಕಾರಿ ನಿಯಂತ್ರಣಕ್ಕಾಗಿ ಜಿಲ್ಲಾಡಳಿತವು ಸರ್ಕಾರಿ ನೆರವಿನ ಜತೆಗೆ ಸ್ವಯಂ ಸೇವಾ ಸಂಸ್ಥೆಗಳ ಸಹಕಾರ ಅಗತ್ಯವಿರುವುದನ್ನು ಮನವರಿಕೆ ಮಾಡಿಕೊಟ್ಟಿದೆ. ಇದರ ಕರೆಯ ಮೇರೆಗೆ ಸೇವಾ ಚಟುವಟಿಕೆಗೆ ಕೈ ಜೋಡಿಸಿರುವ ಸಂಸ್ಥೆಗಳಲ್ಲಿ ಈಶಾ ಫೌಂಡೇಷನ್ ಸಹ ಒಂದು.

ಕೆಲಸದ ಒತ್ತಡದ ನಡುವೆ ಸೋಂಕು ಹರಡುವಿಕೆ ತಡೆಗೆ ನಿರಂತರವಾಗಿ ಶ್ರಮಿಸುತ್ತಿರುವ ಆರೋಗ್ಯ, ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿ ಕರೊನಾ ವಾರಿಯರ್ಸ್‌ಗೆ ಅಗತ್ಯ ನೆರವು ಒದಗಿಸುವ ಮೂಲಕ ಆತ್ಮಸ್ಥೈರ್ಯ ತುಂಬಲಾಗುತ್ತಿದೆ. ಈ ನಿಟ್ಟಿನಲ್ಲಿ ಫೌಂಡೇಷನ್ ವತಿಯಿಂದ ಜಿಲ್ಲಾ ಮತ್ತು ತಾಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿನ ಸಿಬ್ಬಂದಿ ಮತ್ತು ರೋಗಿಗಳಿಗೆ ಪೌಷ್ಟಿಕತೆ ಹೆಚ್ಚಳಕ್ಕಾಗಿ ಪ್ರತಿದಿನ ತಿಂಡಿ ಮತ್ತು ಪಾನಿಯಗಳನ್ನು ಪೂರೈಸಲಾಗುತ್ತಿದೆ.

ಸುರಕ್ಷತೆ ಉದ್ದೇಶದಿಂದ ಎನ್ 95 ಮಾಸ್ಕ್ ಗಳು ಮತ್ತು ಔಷಧ ಕಿಟ್‌ಗಳನ್ನು ವಿತರಿಸಲಾಗಿದೆ. ಈಗಾಗಲೇ ನೂತನ ಸರ್ಕಾರಿ ಆಸ್ಪತ್ರೆಗೆ ಇಸಿಜಿ ಮತ್ತು ಇತರ ವೈದ್ಯಕೀಯ ಉಪಕರಣಗಳನ್ನು ಒದಗಿಸಲಾಗಿದೆ.

ಈಗಾಗಲೇ ತಾಲೂಕಿನ ದಿನ್ನೇಹೊಸಹಳ್ಳಿ, ಸೂಸೆಪಾಳ್ಯ, ಹನುಮಂತಪುರ, ಹಾರೋಬಂಡೆ, ಗುಂಡಪ್ಪನಹಳ್ಳಿ, ಗೊಂಡಹಳ್ಳಿ, ಅರಿಕರೆ, ಕುರ‌್ಲಹಳ್ಳಿ, ವಡ್ಡರ ಪಾಳ್ಯ ಮತ್ತು ಹರಿಹರಪುರ ವಿವಿಧೆಡೆ 1 ಸಾವಿರ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಲಾಗಿದೆ. ಅದರಲ್ಲೂ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಅಲೆಮಾರಿ ಮತ್ತು ಅರೆ ಅಲೆಮಾರಿ ಬುಡಕಟ್ಟು ಜನಾಂಗಕ್ಕೆ ಅಗತ್ಯ ಆಹಾರ ಪಾರ್ಥಗಳನ್ನು ಪೂರೈಸಿದೆ.

ಇಂದು ಜಗತ್ತು ಕಠಿಣ ಪರಿಸ್ಥಿತಿಯಲ್ಲಿದೆ. ಬಹುತೇಕ ಎಲ್ಲ ಕ್ಷೇತ್ರಗಳೂ ಹಿನ್ನಡೆ ಕಂಡಿವೆ. ಈ ಸಂದರ್ಭದಲ್ಲಿ ಉಳ್ಳವರು ಕೈಲಾದ ನೆರವು ಒದಗಿಸಬೇಕು ಎಂಬ ಸಂದೇಶವನ್ನು ಸದ್ಗುರು ನೀಡಿದ್ದಾರೆ.ಇತ್ತೀಚೆಗೆ ಆರೋಗ್ಯ ಸಚಿವ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ.ಸುಧಾಕರ್ ಮತ್ತು ಜಿಲ್ಲಾಧಿಕಾರಿ ಆರ್.ಲತಾ ಈಶಾ ಫೌಂಡೇಷನ್ ಒದಗಿಸಿರುವ ಆಹಾರ ಕಿಟ್ ಮತ್ತು ಸಲಕರಣೆಗಳನ್ನು ಫಲಾನುಭವಿಗಳಿಗೆ ತಲುಪಿಸಿದ್ದಾರೆ.

ಆತಂಕ ನಿವಾರಣೆಗೆ ಆತ್ಮಸ್ಥೈರ್ಯ : ಕರೊನಾ ಸೋಂಕು ದೈಹಿಕ ಮತ್ತು ಮಾನಸಿಕವಾಗಿ ಕುಗ್ಗಿಸಿದೆ. ಆತಂಕ ದೂರವಾಗಿಸುವ ನಿಟ್ಟಿನಲ್ಲಿ ಜನರಿಗೆ ಆತ್ಮಸ್ಥೈರ್ಯ ತುಂಬಬೇಕು. ಇದಕ್ಕೆ ಈಶಾ ಸ್ವಯಂ ಸೇವಕರು ನಿರಂತರವಾಗಿ ಆನ್‌ಲೈನ್ ಮೂಲಕ ವೈದ್ಯರು, ಆಸ್ಪತ್ರೆಗಳು ಮತ್ತು ಕರೊನಾ ರೋಗಿಗಳ ಕುಟುಂಬಗಳೊಂದಿಗೆ ಆನ್‌ಲೈನ್ ಆರೋಗ್ಯ ಸಮನ್ವಯವನ್ನು ಸಾಧಿಸಲು ಶ್ರಮಿಸುವ ಮೂಲಕ ಆರೋಗ್ಯ ಇಲಾಖೆಗೆ ಬೆಂಬಲವಾಗಿ ನಿಂತಿದ್ದು ಶ್ವಾಸಕೋಶದ ಸ್ವಾಸ್ಥ್ಯ ಹೆಚ್ಚಿಸಲು ಮತ್ತು ಸೋಂಕಿನ ವಿರುದ್ಧ ದೈಹಿಕ ಮತ್ತು ಮಾನಸಿಕವಾಗಿ ಹೋರಾಡುವಂತಾಗಲು ಯೋಗಾಭ್ಯಾಸ ಮಾಡಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net