

ಬೆಂಗಳೂರು:
ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿಯಾಗಿ ಹಾಲಿವುಡ್ ನಟಿಯರನ್ನು ಆಯ್ಕೆಮಾಡುವ ಚಿಂತನೆ ಇದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.
ಸದ್ಯ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರನ್ನು ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ. ದಕ್ಷಿಣ ಭಾರತಕ್ಕೆ ಮಾತ್ರವೇ ಸೀಮಿತವಾಗಿರುವ ಮೈಸೂರು ಸ್ಯಾಂಡಲ್ ಸೋಪನ್ನು ಇಡೀ ದೇಶಕ್ಕೆ ವಿಸ್ತರಿಸುವ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಂಡಿದ್ದೇವೆ ಎಂದರು.
ರಾಜ್ಯದಲ್ಲಿ ಮೈಸೂರು ಸ್ಯಾಂಡಲ್ ಬಳಸುವವರ ಸಂಖ್ಯೆ ಶೇ.18 ಮಾತ್ರ. ಇನ್ನು ಶೇ.82 ಜನರು ಹೊರಗಿನವರು. ಆದ್ದರಿಂದ ಬಳಕೆದಾರರ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಈ ರೀತಿಯ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ ಎಂದರು.
ಮೈಸೂರು ಸ್ಯಾಂಡಲ್ ಸೋಪ್‌ಗೆ ವಾಟಾಳ್ ನಾಗರಾಜ್ ಸೇರಿದಂತೆ ಕನ್ನಡಿಗರೆಲ್ಲರೂ ರಾಯಭಾರಿಗಳಿದ್ದಂತೆ ಎಂದು ಹೇಳಿದರು.
ಗವಿಸಿದ್ದೇಶ್ವರ ಸ್ವಾಮೀಜಿ ಜೊತೆಗೆ ಚರ್ಚೆ
ಮಾಲಿನ್ಯವಾಗುವ ಕೈಗಾರಿಕೆಗಳಿಗೆ ಅನುಮತಿ ನೀಡಬೇಕು ಎನ್ನುವುದು ನಮ್ಮ ಉದ್ದೇಶವಲ್ಲ.
ಕೊಪ್ಪಳದಲ್ಲಿ ಗವಿಸಿದ್ದೇಶ್ವರ ಸ್ವಾಮೀಜಿಗೆ ಇರುವ ಆತಂಕಗಳ ಬಗ್ಗೆ ಮತ್ತೊಮ್ಮೆ ಪರಿಶೀಲನೆ ಮಾಡಿ, ತಜ್ಞರ ಸಮಿತಿ ವರದಿ ತರಿಸಿಕೊಂಡು ನಿರ್ಣಯಿಸಲಾಗುವುದು. ಈ ಬಗ್ಗೆ ನಾನೇ ಸ್ವತಃ ಭೇಟಿ ಮಾಡಿ ಚರ್ಚೆ ಮಾಡುತ್ತೇನೆ. ಬಳಿಕ ಅಂತಿಮ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಪಾಟೀಲ್ ತಿಳಿಸಿದರು.
ವಿಮಾನ ನಿಲ್ದಾಣಗಳ ಅಭಿವೃದ್ಧಿ:
ರಾಜ್ಯದಲ್ಲಿ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಮುಗಿದಿದ್ದು, ಪರಿಸರ ಮಂತ್ರಾಲಯ ಒಪ್ಪಿಗೆ ಮಾತ್ರ ಬಾಕಿ ಇದೆ. 993 ಕೋಟಿ ಅಂದಾಜಿನ ಹಾಸನದ ವಿಮಾನ ನಿಲ್ದಾಣಕ್ಕೆ 164 ಕೋಟಿ ವೆಚ್ಚ ಮಾಡಲಾಗಿದೆ. ರಾಯಚೂರು, ಕಾರವಾರ ನಿಲ್ದಾಣ ನಿರ್ಮಾಣ ಪ್ರಗತಿಯಲ್ಲಿದೆ. ಚಿಕ್ಕಮಗಳೂರು, ಕೊಡಗಿನಲ್ಲಿಯೂ ವಿಮಾನ ನಿಲ್ದಾಣ ಮಾಡಲಾಗುವುದು ಎಂದು ಸಚಿವ ಪಾಟೀಲ್ ಹೇಳಿದರು.
ರಾಜ್ಯದಲ್ಲಿ ಕೈಗಾರಿಕಗೆ ಪೂರಕವಾಗಿ ಸಂಪರ್ಕ ಕಲ್ಪಿಸುವ ರೈಲ್ವೆ ಇಲಾಖೆ ಯೋಜನೆಗಳನ್ನು ಆದ್ಯತೆ ಮೇಲೆ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಸಚಿವರು ಸಹಕಾರ ನೀಡುತ್ತಿದ್ದಾರೆ ಎಂದರು.