ಇಷ್ಟಾರ್ಥ ಈಡೇರಿಸುವ ಶನೈಶ್ಚರಸ್ವಾಮಿ

22 SARAG 7
ಸರಗೂರು ತಾಲೂಕಿನ ಹಾದನೂರು ಗ್ರಾಮದಲ್ಲಿರುವ ಶನೇಶ್ಚರ ದೇವಾಲಯ.
Published on

ಸರಗೂರು: ಇಷ್ಟಾರ್ಥಗಳನ್ನು ಈಡೇರಿಸುವ, ಸಂಕಷ್ಟಗಳನ್ನು ದೂರ ಮಾಡುವ ಮೂಲಕ ಭಕ್ತರ ನೆಮ್ಮದಿಯ ಬದುಕಿಗೆ ಶ್ರೀ ಶನೈಶ್ಚರಸ್ವಾಮಿ ದಾರಿದೀಪವಾಗಿ ನೆಲೆಸಿದ್ದಾನೆ.

ತಾಲೂಕಿನ ಶ್ರೀಕ್ಷೇತ್ರ ಬೇಲದಕುಪ್ಪೆ ಮಹದೇಶ್ವರ ದೇವಾಲಯವನ್ನು ಸಂಪರ್ಕಿಸುವ ರಸ್ತೆಯಲ್ಲಿರುವ ಹಾದನೂರು ಗ್ರಾಮದಲ್ಲಿ ಶನೈಶ್ಚರಸ್ವಾಮಿ ದೇವಸ್ಥಾನವಿದ್ದು, ಭಕ್ತರ ಪಾಲಿನ ಆರಾಧ್ಯ ದೈವವಾಗಿದೆ. ಸುತ್ತಮುತ್ತಲಿನ ಗ್ರಾಮಗಳಲ್ಲದೆ, ದೂರದ ಊರುಗಳಿಂದಲೂ ಜನರು ಬಂದು ದೇವರ ದರ್ಶನ ಪಡೆದು ಜೀವನದಲ್ಲಿ ಹಲವು ಬದಾಲಾವಣೆ ಕಂಡಿದ್ದಾರೆ. ನೂರಾರು ವರ್ಷಗಳ ಹಿಂದೆ ಅರಳಿಮರದ ಕೆಳಗೆ ಗುಡಿಸಲಿನಂತೆ ಇದ್ದ ದೇವಸ್ಥಾನ ಪ್ರಸ್ತುತ ಪ್ರಸಿದ್ಧ ಧಾರ್ಮಿಕ ಸ್ಥಳವಾಗಿ ಮಾರ್ಪಟ್ಟಿದೆ.

ಅರಳಿದಮರದ ಕೆಳಗೆ ಇದ್ದ ಶನೈಶ್ಚರನ ವಿಗ್ರಹವನ್ನು ಈಗಿನ ಪೂಜಾರಿ ನಾರಾಯಣಸ್ವಾಮಿ ಅವರ ತಾತ ಕಾಳಯ್ಯ ಅವರು ನಲವತ್ತು ವರ್ಷ ಪೂಜೆ ಮಾಡಿದ್ದರು. ಅವರು ಲಿಂಗೈಕ್ಯ ಆದ ನಂತರ ಅವರ ಮೊಮ್ಮಗ ಪೂಜೆ ಮುಂದುವರಿಸಿಕೊಂಡು ಬಂದಿದ್ದಾರೆ.

ನವಗ್ರಹ ದೇವಸ್ಥಾನ, ಶಿವನ ದೇವಸ್ಥಾನ, ನಿರ್ಮಾಣ ಮಾಡಲಾಗಿದೆ. ಒಂದು ಎಕರೆ ವಿಸ್ತೀರ್ಣದಲ್ಲಿ ದೇವಸ್ಥಾನ ಇದ್ದು, ಸಭಾ ಮಂಟಪ, ದಾಸೋಹ ಭವನ, ಪ್ರಾಂಗಣ ಇದೆ. ಭಕ್ತರು ಮನಸ್ಸಿನಲ್ಲಿ ಕೋರಿಕೆ ಇಟ್ಟುಕೊಂಡರೆ ಅದು ಈಡೇರುತ್ತದೆ ಎಂಬ ನಂಬಿಕೆ ಜನರಲ್ಲಿ ಇದೆ. ಇದೊಂದು ಪುರಾತನ ದೇವಸ್ಥಾನವಾಗಿದ್ದು, ಶಕ್ತಿಯುತವಾದದ್ದು ಎಂಬ ನಂಬಿಕೆ ಜನರದು. ನ್ಯಾಯಾಲಯದಲ್ಲಿನ ವ್ಯಾಜ್ಯ ಇತ್ಯರ್ಥ, ಮದುವೆ, ಜಮೀನು, ಮಕ್ಕಳಾಗದೆ ಇರುವವರು ಸೇರಿದಂತೆ ಯಾವುದೇ ದೋಷವಿದ್ದರೂ ಇಲ್ಲಿ ಪೂಜೆ ಮಾಡಿದರೆ ಬಗೆಹರಿಯುತ್ತದೆ ಎಂಬ ನಂಬಿಕೆ ಭಕ್ತರದು. ಹೀಗಾಗಿಯೇ ಇಲ್ಲಿಗೆ ಎಚ್.ಡಿ.ಕೋಟೆ, ಸರಗೂರು, ನಂಜನಗೂಡು, ಗುಂಡ್ಲುಪೇಟೆ ಸೇರಿದಂತೆ ವಿವಿಧೆಡೆಯಿಂದ ಭಕ್ತರು ಬರುವ ವಾಡಿಕೆ ಇದೆ.

ಚರ್ಮರೋಗ ಸೇರಿದಂತೆ ಯಾವುದೇ ಕಾಯಿಲೆ ಇದ್ದರೂ ಪ್ರತಿ ಶನಿವಾರ ಸ್ವಾಮಿಗೆ ಎಳ್ಳಿನ ಎಣ್ಣೆಯ ಅಭಿಷೇಕ ಮಾಡಿಸಿ ಅದನ್ನು ರೋಗಿಗಳು ತಮ್ಮ ದೇಹಕ್ಕೆ ಲೇಪನ ಮಾಡಿಕೊಂಡರೆ ರೋಗ ವಾಸಿಯಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿ ಮನೆಮಾಡಿದೆ. ಪ್ರತಿ ಶನಿವಾರ, ಶ್ರಾವಣ, ಕಾರ್ತಿಕ ಮಾಸ, ಯುಗಾದಿ, ಸಂಕ್ರಾಂತಿ ದಿನದಂದು ಸ್ವಾಮಿಗೆ ವಿಶೇಷ ಪೂಜೆ ನೆರವೇರುತ್ತದೆ.

ದೇವಸ್ಥಾನ ಸ್ಥಾಪನೆಗೂ ಮುನ್ನ ಕಾಡಿನಂತಿದ್ದ ಈ ಸ್ಥಳ ಈಗ ಬೃಂದಾವನವಾಗಿ ಬೆಳೆದಿದೆ. ಪ್ರತಿವರ್ಷ ಫೆಬ್ರವರಿಯಲ್ಲಿ ಜಾತ್ರೆ ನಡೆಯಲಿದ್ದು, ಐದರಿಂದ ಹತ್ತು ಸಾವಿರ ಜನರು ಸೇರುತ್ತಾರೆ. ವಿವಿಧ ಗ್ರಾಮಗಳ ಜನರು ತಮ್ಮಿಂದಾಗುವ ಕಾಣಿಕೆ ನೀಡುತ್ತಾರೆ. ದೇವಸ್ಥಾನ ದಲ್ಲಿ ಇಪ್ಪತ್ತು ವರ್ಷಗಳಿಂದ ಬಿಳಿ ಕುದುರೆ ಇದ್ದು ಮೊದಲ ಪೂಜೆ ಇದಕ್ಕೆ.

ದೇವಸ್ಥಾನ ಅಭಿವೃದ್ಧಿಗೊಂಡು ಐದು ವರ್ಷ ಕಳೆದಿದ್ದು, ಇಲ್ಲಿಗೆ ಭಕ್ತರು ನೀಡುವ ದೇಣಿಗೆಯಿಂದ ದೇವಾಲಯ ಅಭಿವೃದ್ಧಿ ಹೊಂದಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಟ್ರಸ್ಟ್ ರಚಿಸಿ ಈ ಭಾಗದ ಬಡ ಹಾಗೂ ಅನಾಥ ಮಕ್ಕಳಿಗೆ ಉಚಿತ ಅನಾಥಾಶ್ರಮ ತೆರೆಯುವ ಗುರಿ ಹೊಂದಲಾಗಿದೆ.

ಮಾರ್ಗ: ತಾಲೂಕು ಕೇಂದ್ರದಿಂದ 25 ಕಿ.ಮೀ. ದೂರದಲ್ಲಿ ಈ ದೇವಾಲಯವಿದೆ. ನಂಜನಗೂಡಿನಿಂದ 60 ಕಿಲೋ ಮೀಟರ್ ಕ್ರಮಿಸಿದರೆ ಈ ದೇವಾಲಯ ಸಿಗಲಿದೆ. ಪಟ್ಟಣ ಹಾಗೂ ಗ್ರಾಮಾಂತರ ಬಸ್ ನಿಲ್ದಾಣದಿಂದ ಬಸ್ ವ್ಯವಸ್ಥೆ ಇದ್ದು, ಇಲ್ಲಿಗೆ ತಲುಪಬಹುದಾಗಿದೆ.

ನಮ್ಮ ತಾತ ಹಾಗೂ ಪಾಲಕರು ಸ್ವಾಮಿಯ ಭಕ್ತರಾಗಿದ್ದರು. ಅವರ ಸೇವಾ ಕಾರ್ಯವನ್ನು ನಾವು ಮುಂದುವರಿಸುತ್ತಿದ್ದೇವೆ. ಸ್ವಾಮಿಯ ಕೃಪೆಯಿಂದ ಎಲ್ಲ ಕೆಲಸಗಳು ಸುಲಲಿತವಾಗಿ ಆಗಿವೆ. ಭಕ್ತರನ್ನು ಸ್ವಾಮಿ ಎಂದಿಗೂ ಕೈಬಿಡುವುದಿಲ್ಲ ಎಂಬುದಕ್ಕೆ ನಮ್ಮ ಕುಟುಂಬ ಉದಾಹರಣೆ.
ಮಂಜುಳಾ ರಾಮಚಂದ್ರ ಅಧ್ಯಕ್ಷೆ , ಹಾದನೂರು ಗ್ರಾಮ ಪಂಚಾಯಿತಿ

ಈ ಕ್ಷೇತ್ರವನ್ನು ಧಾರ್ಮಿಕ ಕ್ಷೇತ್ರವನ್ನಾಗಿ ಅಭಿವೃದ್ಧಿ ಮಾಡುವುದರ ಜತೆಗೆ, ಶೈಕ್ಷಣಿಕ ಕ್ಷೇತ್ರವಾಗಿಯೂ ಮಾಡಬೇಕೆಂಬ ಅಭಿಲಾಷೆ ಈ ಭಾಗದ ಜನರದು. ಅದರಂತೆ, ನಾನು ಸ್ವಾಮಿಯ ಸೇವೆ ಮಾಡುತ್ತಿದ್ದೇನೆ. ಸರ್ಕಾರ ಹಾಗೂ ಶಾಸಕರ ಸಹಕಾರ ಅಗತ್ಯ.
ನಾರಾಯಣಸ್ವಾಮಿ ದೇವಸ್ಥಾನದ ಪೂಜಾರಿ

ಆರ್ಥಿಕ ಹಾಗೂ ಸಾಮಾಜಿಕವಾಗಿ ಕಷ್ಟಗಳು ಎದುರಾದಾಗ ಸಾಮಾನ್ಯವಾಗಿ ‘ಶನಿ ಹೆಗಲೇರಿದ್ದಾನೆ’ ಎಂಬ ಮಾತು ಪ್ರತೀತಿಯಲ್ಲಿದೆ. ಶನಿದೇವರ ಪೂಜೆ ಮಾಡಿದರೆ ಸರಿ ಹೋಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಅದಕ್ಕೆಂದೇ ಶನಿವಾರ ಬಂತೆಂದರೆ ಶನಿ ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಿರುತ್ತದೆ.
ಸಿದ್ದರಾಜು ಚಿಕ್ಕ ಯಜಮಾನರು, ಹಾದನೂರು ಗ್ರಾಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net