ಇಷ್ಟಪಟ್ಟ ಆಹಾರ ಸೇವಿಸಲು ಸಂವಿಧಾನದಲ್ಲಿ ಅವಕಾಶವಿದೆ

22tnpnewsfile02
Published on

ತಿ.ನರಸೀಪುರ: ಆಹಾರ ಎನ್ನುವುದು ಜನರ ಮೂಲಭೂತ ಹಕ್ಕು. ಯಾರ‌್ಯಾರಿಗೆ ಯಾವ್ಯಾವ ಆಹಾರದಲ್ಲಿ ಆಸಕ್ತಿ ಇದೆ ಅದನ್ನು ಬಳಸಲು ಸಂವಿಧಾನದಲ್ಲಿ ಮುಕ್ತವಾದ ಅಕಾರವನ್ನು ಅಂಬೇಡ್ಕರ್ ಕೊಟ್ಟಿದ್ದಾರೆ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಪ್ರತಿಪಾದಿಸಿದರು.

ಸ್ವಾತಂತ್ರದ ಅಮೃತ ಮಹೋತ್ಸವದ ಪ್ರಯುಕ್ತ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮಕ್ಕೆ ಸೋಮವಾರ ತಾಲೂಕಿನ ಸೋಮನಾಥಪುರ ಗ್ರಾಮದಲ್ಲಿ ಚಾಲನೆ ನೀಡಿ ಮಾತನಾಡಿ, 2017ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಲಲಿತಮಹಲ್ ಹೋಟೆಲ್‌ನಲ್ಲಿ ನಾಟಿ ಕೋಳಿ ಊಟ ಮಾಡಿ ದಸರೆಯಲ್ಲಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿದ್ದರು ಎಂದು ಸಂಸದ ಪ್ರತಾಪ್ ಸಿಂಹ ಮಾಡಿದ್ದ ಆರೋಪಕ್ಕೆ ಅಂದು ಉಸ್ತುವಾರಿ ಸಚಿವನಾಗಿದ್ದ ನಾನು ಪ್ರತಿಕ್ರಿಯೆ ನೀಡಿದ್ದೆ. ಧಾರ್ಮಿಕವಾಗಿ ಯಾವ ರೀತಿ ನಡೆದುಕೊಳ್ಳಬೇಕೆಂಬ ಸೂಚನೆ, ಕಾನೂನುಗಳೇನು ಪ್ರತ್ಯೇಕವಾಗಿಲ್ಲ. ಸಿದ್ದರಾಮಯ್ಯ ಅಂದು ಏನು ಊಟ ಮಾಡಿದ್ದರೆಂಬುದು ನೆನಪಿನಲ್ಲಿಲ್ಲ. ಅದು ಆರು ವರ್ಷವಾಗಿದೆ. ಅಷ್ಟಾಗಿ ನೆನಪಿಟ್ಟುಕೊಳ್ಳುವ ವಿಷಯವೇ ಅಲ್ಲ. ನಮಗೆ ಆವಾಗ ಮುಖ್ಯವಾಗಿದ್ದ ವಿಷಯ ಅಭಿವೃದ್ಧಿ ಮಾತ್ರ ಎಂದರು.

ದೇಶದಲ್ಲಿ ಜನರು ಹೊಟ್ಟೆಗೆ ಆಹಾರ ಸಿಗದೆ ಪರದಾಡುವ ಸ್ಥಿತಿ ಇದೆ. ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿವೆ. ರಸಗೊಬ್ಬರದ ಬೆಲೆ ಹೆಚ್ಚಿದೆ. ರೈತರ ಆದಾಯದ ದ್ವಿಗುಣ ಮಾಡುತ್ತೇವೆಂದು ಹೇಳಿದ ಮಾತಿಗೆ ಪ್ರಧಾನಿ ಗಮನ ಹರಿಸುತ್ತಿಲ್ಲ. ಸಿಲಿಂಡರ್, ಪೆಟ್ರೋಲ್ ಬೆಲೆ ಇತಿಹಾಸದಲ್ಲೇ ಕಂಡು ಕೇಳರಿಯದಷ್ಟು ಹೆಚ್ಚಳವಾಗಿದೆ. ಪ್ರತಿ ಪ್ರಜೆಗಳ ಖಾತೆಗೆ 15 ಲಕ್ಷ ರೂ.ಗಳನ್ನು ಜಮಾ ಮಾಡುತ್ತೇವೆಂದು ನೀಡಿದ ಭರವಸೆ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಇವರಿಗೆ ಸೂಕ್ಷ್ಮವಿಚಾರಗಳು ಮಾತ್ರವೇ ಮುಖ್ಯವಾಗಿವೆ. ಜನರ ಕಷ್ಟ-ನಷ್ಟ, ದುಃಖ-ದುಮ್ಮಾನಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಬಿಜೆಪಿಗರ ಬಗ್ಗೆ ಮಹದೇವಪ್ಪ ಕಿಡಿಕಾರಿದರು.

ಊಟ ಮಾಡಿದ್ದು ಚರ್ಚೆಯ ವಿಷಯವೇ ಅಲ್ಲ!
ರಾಜಕಾರಣದಲ್ಲಿ ಊಟ ಮಾಡಿದ್ದು ವಿಷಯವೇ ಅಲ್ಲ. ಧರ್ಮ, ಆಹಾರ, ಬಟ್ಟೆ, ಆಚಾರ-ವಿಚಾರಗಳು ಸಂವಿಧಾನದಲ್ಲಿ ಮುಕ್ತವಾಗಿ ಜನರಿಗೆ ಕೊಟ್ಟಿರುವ ಹಕ್ಕು. ಈ ವಿಷಯಗಳಿಗೆ ರಾಜಕಾರಣದಲ್ಲಿ ಮಾನ್ಯತೆಯೇ ಇಲ್ಲ ಎಂದರು.

ಸಿದ್ದರಾಮಯ್ಯ ಅವರು ದಾವಣಗೆರೆಯಲ್ಲಿ ಮಾಡಿದ ಸಮಾವೇಶಕ್ಕೆ ಸೇರಿದ ಜನರನ್ನು ನೋಡಿ ಬಿಜೆಪಿಯವರಿಗೆ ಉರಿ ಶುರುವಾಗಿದೆ. ಅದಕ್ಕೆ ಇಲ್ಲಸಲ್ಲದ ವಿಷಯದ ಬಗ್ಗೆ ಪ್ರಸ್ತಾಪ ಮಾಡಿ ಧರ್ಮ ಮತ್ತು ದೇವರ ಹೆಸರಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಕಾನೂನು ಸಂವಿಧಾನ, ಜನರ ಹಿತ ಮತ್ತು ಅಭಿವೃದ್ಧಿಯಲ್ಲಿ ಜನರ ಕಷ್ಟ-ನಷ್ಟಗಳಲ್ಲಿ ಭಾಗಿಯಾಗುವಂತಹ ಯಾವ ಗುಣಲಕ್ಷ್ಮಣಗಳು ಬಿಜೆಪಿಯವರಿಗೆ ಇಲ್ಲ ಎಂದು ಆರೋಪಿಸಿದರು.

ಶಾಸಕ ಯತೀಂದ್ರ ಸಿದ್ದರಾಮಯ್ಯ, ಮೈಸೂರು ಜಿಲ್ಲಾ ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ವಿಜಯಕುಮಾರ್, ವಸತಿ ಯೋಜನೆ ಜಾಗೃತಿ ಸಮಿತಿ ಮಾಜಿ ಅಧ್ಯಕ್ಷ ಸುನೀಲ್ ಬೋಸ್, ಮೈಮುಲ್ ನಿರ್ದೇಶಕ ಆರ್.ಚೆಲುವರಾಜು, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ವಜ್ರೇಗೌಡ, ಹಿಂದುಳಿದ ವರ್ಗಗಳ ಜಿಲ್ಲಾ ಉಪಾಧ್ಯಕ್ಷ ಎ.ಎನ್.ಸ್ವಾಮಿ, ಮಾಜಿ ಜಿ.ಪಂ. ಸದಸ್ಯೆ ಸುಧಾ ಮಹದೇವಯ್ಯ, ಸೋಮನಾಥಪುರ ಗ್ರಾಪಂ ಅಧ್ಯಕ್ಷೆ ಅರ್ಚನಾ ಸಂದೀಪ್, ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ವಕ್ತಾರ ಹುಣಸೂರು ಬಸವಣ್ಣ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net