ಇಬ್ಬರಿಗೆ 20 ವರ್ಷ ಜೈಲು ಶಿಕ್ಷೆ

gavel
Published on

ಗದಗ: ಜಿಲ್ಲೆಯ ನರಗುಂದದಲ್ಲಿ ಅಪ್ರಾಪ್ತೆ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗಳಿಬ್ಬರಿಗೆ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 20 ವರ್ಷ ಜೈಲು ಶಿಕ್ಷೆ ಹಾಗೂ ತಲಾ 50 ಸಾವಿರ ರೂ. ದಂಡ ವಿಧಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಹೇಳಿದರು.
ಮೊದೀನಸಾಬ ತೆಗ್ಗಿನಮನಿ ಹಾಗೂ ಮುಕ್ತುಂಸಾಬ ತೆಗ್ಗಿನಮನಿ ಶಿಕ್ಷೆಗೊಳಗಾದವರು. ಮನೆಯಲ್ಲಿಯೇ ನಿರಂತರವಾಗಿ ಅತ್ಯಾಚಾರ ಮಾಡುತ್ತಿದ್ದ ಅಪರಾಧಿಗಳು, 2016ರಲ್ಲಿ ಈ ಪ್ರಕರಣ ಬೆಂಕಿಗೆ ಬಂದಿತ್ತು. ಅಷ್ಟೇ ಅಲ್ಲ, ಅತ್ಯಾಚಾರಕ್ಕೊಳಗಾಗಿದ್ದ ಸಂತ್ರಸ್ತೆ 2016 ರ ಮೇ 4ರಂದು ಹೆಣ್ಣುಮಗುವಿಗೆ ಜನ್ಮ ನೀಡಿದ್ದಳು.
ಈ ಕುರಿತು ಸಂತ್ರಸ್ತೆ ಸಲ್ಲಿಸಿದ್ದ ದೂರು ಆಧರಿಸಿ ಅಂದಿನ ಸಿಪಿಐ ರಮಾಕಾಂತ ಎಚ್.ವೈ. ಅವರು ಜೈತುನಬಿ ತೆಗ್ಗಿನಮನಿ, ಅವರ ಮಕ್ಕಳಾದ ಮೊದೀನಸಾಬ ತೆಗ್ಗಿನಮನಿ ಹಾಗೂ ಮುಕ್ತುಂಸಾಬ ತೆಗ್ಗಿನಮನಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು ಎಂದರು.
ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಾದ ಮಂಡಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಅಮರೇಶ ಹಿರೇಮಠ ಮಾತನಾಡಿ, ಈ ಪ್ರಕರಣವು ಗ್ಯಾಂಗ್​ರೇಪ್ ಎಂದು ಸಾಬೀತಾಗಿತ್ತು. ಅಲ್ಲದೆ, ಈ ಬಗ್ಗೆ ಡಿಎನ್​ಎ ಪರೀಕ್ಷೆ ಕೂಡ ನಡೆದಿತ್ತು. ಮೇಲಾಗಿ ತಾಯಿಯನ್ನು ಕಳೆದುಕೊಂಡಿದ್ದ ಸಂತ್ರಸ್ತೆ ತಂದೆ ಮತ್ತೊಂದು ಮದುವೆಯಾಗಿದ್ದರು. ಬಳಿಕ ಅವರು ಧಾರವಾಡದ ವೈದ್ಯರೊಬ್ಬರ ಮನೆಯಲ್ಲಿ ಬಾಲಕಿಯನ್ನು ಕೆಲಸಕ್ಕಿಟ್ಟು ಮಂಗಳೂರಿಗೆ ದುಡಿಯಲು ಹೋಗಿದ್ದರು. ಈ ವೇಳೆ ಬಾಲಕಿ ಕೆಲಸ ಬಿಟ್ಟು, ಸ್ವಗ್ರಾಮ ನರಗುಂದಕ್ಕೆ ಆಗಮಿಸಿ ತಮ್ಮ ಮನೆಯಲ್ಲಿ ಒಬ್ಬಳೇ ಇದ್ದಳು.
ಈ ವೇಳೆ ಶಿಕ್ಷೆಗೊಳಗಾಗಿರುವ ಆರೋಪಿಯ ತಾಯಿಯು, ನೀನು ನನ್ನ ಸಂಬಂಧಿ ಎಂದು ಹೇಳಿ ತನ್ನ ಮನೆಯಲ್ಲಿ ಅಪ್ರಾಪ್ತೆಯನ್ನು ಅಕ್ರಮವಾಗಿ ಇಟ್ಟುಕೊಂಡಿದ್ದರು. ಮನೆಯಲ್ಲೇ ನಿರಂತರವಾಗಿ ಬಲತ್ಕಾರದಿಂದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದರು. ಈ ಪ್ರಕರಣ ನಡೆದಾಗ ಒಬ್ಬ ಆರೋಪಿಗೆ ಅದಾಗಲೇ ಮದುವೆಯಾಗಿ ಮೂವರು ಮಕ್ಕಳಿದ್ದರು ಎಂದು ವಿವರಿಸಿದರು.
ಈ ಪ್ರಕರಣದ ಬಗ್ಗೆ ವಾದ-ಪ್ರತಿವಾದ ಆಲಿಸಿದ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಶ್ವರ ಶೆಟ್ಟಿ ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗಳಿಗೆ 20 ವರ್ಷ ಜೈಲು ಶಿಕ್ಷೆ ಹಾಗೂ ತಲಾ 50 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದ್ದಾರೆ ಎಂದು ಹೇಳಿದರು.

ನೊಂದ ಸಂತ್ರಸ್ತೆಗೆ ವೈದ್ಯಕೀಯ ವೆಚ್ಚ ಹಾಗೂ ಶೈಕ್ಷಣಿಕ ವೆಚ್ಚ, ಪುನರ್ ವಸತಿಗಾಗಿ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರವು ಐದು ಲಕ್ಷ ರೂ. ಪರಿಹಾರ ನೀಡಿದೆ.ಅಮರೇಶ ಹಿರೇಮಠ, ವಿಶೇಷ ಸರ್ಕಾರಿ ಅಭಿಯೋಜಕ (ಪೋಕ್ಸೋ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net