ಇನ್‌ಸ್ಪೆಕ್ಟರ್ ಸೋಗಿನಲ್ಲಿ ಹಣ ಪೀಕಿದ್ದವನ ಬಂಧನ

Published on

ಬೆಂಗಳೂರು: ಸಹೋದ್ಯೋಗಿ ಯುವತಿ ಜತೆ ಅನೈತಿಕ ಸಂಬಂಧ ಹೊಂದಿದ್ದ ಉದ್ಯಮಿಗೆ ಸಿಸಿಬಿ ಪೊಲೀಸ್ ಇನ್‌ಸ್ಪೆಕ್ಟರ್ ಸೋಗಿನಲ್ಲಿ ಬೆದರಿಸಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದ ಆರೋಪಿಯನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ.

ನಾಗಸಂದ್ರ ನಿವಾಸಿ ಶ್ರೀನಿವಾಸ್ ಗದ್ದಿಗೆ (40) ಬಂಧಿತ. ಆರೋಪಿಯನ್ನು  ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚೊಕ್ಕಸಂದ್ರದ ಟಿ.ದಾಸರಹಳ್ಳಿ ನಿವಾಸಿ ಸಂತ್ರಸ್ತ ಉದ್ಯಮಿ, ಕೇಬಲ್ ಕನೆಕ್ಷನ್ ಕಚೇರಿ ಹೊಂದಿದ್ದಾರೆ. ೈನಾನ್ಸ್ ಕಚೇರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪಕ್ಕದ ಮನೆಯ ಯುವತಿ ಜತೆ ಸ್ನೇಹ ಬೆಳೆದಿತ್ತು. ಇಬ್ಬರ ನಡುವಿನ ಸ್ನೇಹ ಆತ್ಮೀಯತೆಗೆ ತಿರುಗಿತ್ತು. ಕೆಲ ತಿಂಗಳ ಹಿಂದೆ ಯುವತಿ ಹಾಗೂ ಉದ್ಯಮಿ, ಬಸವೇಶ್ವರ ಟರ್ಮಿನಲ್ ಬಸ್ ನಿಲ್ದಾಣದ ಬಳಿಯ ಲಾಡ್ಜ್‌ವೊಂದರಲ್ಲಿ ಉಳಿದುಕೊಂಡಿದ್ದರು. ಈ ವಿಚಾರ ಯುವತಿ ಕೆಲಸ ಮಾಡುತ್ತಿದ್ದ ಕಚೇರಿಯ ಮಾಲೀಕ ಶ್ರೀನಿವಾಸ್‌ಗೆ ಗೊತ್ತಾಗಿತ್ತು.

ಅನಾಮಿಕ ನಂಬರ್‌ನಿಂದ ಉದ್ಯಮಿಗೆ ಕರೆ ಮಾಡಿದ್ದ ಶ್ರೀನಿವಾಸ್, ‘ತಾನು ಸಿಸಿಬಿ ಇನ್‌ಸ್ಪೆಕ್ಟರ್ ರಾಜು ಎಂದು ಹೇಳಿದ್ದ. ಯುವತಿ ಜೊತೆಗಿರುವ ಖಾಸಗಿ ವಿಡಿಯೋ ಹಾಗೂ ಇನ್ನಿತರ ಮಾಹಿತಿ ಇದೆ. ಈ ನಂಬರ್‌ಗೆ ಮತ್ತೇ ಕರೆ ಮಾಡಿದರೆ ಸಿಗುವುದಿಲ್ಲ. ನಾನೇ ಸಂಪರ್ಕಿಸುತ್ತೇನೆ’ ಎಂದು ಬೆದರಿಸಿದ್ದ. ಇದಾದ ಬಳಿಕ ಕಚೇರಿಯಲ್ಲಿ ಯುವತಿ ಜತೆ ಮಾತನಾಡಿದ್ದ ಶ್ರೀನಿವಾಸ್, ನೀನು ಉದ್ಯಮಿ ಜತೆಗೆ ಲಾಡ್ಜ್‌ನಲ್ಲಿದ್ದ ವಿಚಾರವನ್ನು ಸಿಸಿಬಿ ಇನ್‌ಸ್ಪೆಕ್ಟರ್ ರಾಜು ತಿಳಿಸಿದರು. ಉದ್ಯಮಿಗೆ ನನ್ನನ್ನು ಭೇಟಿಯಾಗುವಂತೆ ತಿಳಿಸು ಎಂದು ಯುವತಿಗೆ ಹೇಳಿದ್ದ. ಈ ವಿಚಾರವನ್ನು ಯುವತಿ, ಆತ್ಮೀಯತೆ ಹೊಂದಿದ್ದ ಉದ್ಯಮಿಗೆ ಕರೆ ಮಾಡಿ ತಿಳಿಸಿದ್ದಳು.

ಮರುದಿನ ಬೆಳಗ್ಗೆ ಶ್ರೀನಿವಾಸ್‌ನನ್ನು ಭೇಟಿ ಮಾಡಲು ಯುವತಿ ಕೆಲಸ ಮಾಡುತ್ತಿದ್ದ ೈನಾನ್ಸ್ ಕಚೇರಿಗೆ ಹೋಗಿದ್ದ. ಈ ವೇಳೆ ಕಚೇರಿಯಲ್ಲಿ ಶ್ರೀನಿವಾಸ್ ಇರಲಿಲ್ಲ. ಯುವತಿಯಿಂದ ಆತನ ೆನ್ ನಂಬರ್ ಪಡೆದು, ಕರೆ ಮಾಡಿದ್ದ. ಇನ್‌ಸ್ಪೆಕ್ಟರ್ ರಾಜು ಅವರು ನನ್ನನ್ನು ಭೇಟಿಯಾಗಿ ಎಲ್ಲ ವಿಚಾರ ಹೇಳಿದ್ದಾರೆ. ನಾನು ನೀನು ಒಂದೇ ಸಮುದಾಯದವರು. 10 ಲಕ್ಷ ರೂ. ಹೊಂದಿಸು, ಪ್ರಕರಣವನ್ನು ಮುಚ್ಚಿ ಹಾಕಿಸೋಣ ಎಂದು ಉದ್ಯಮಿಗೆ ಶ್ರೀನಿವಾಸ್ ಹೇಳಿದ್ದ. ಉದ್ಯಮಿ ಅಷ್ಟೊಂದು ಹಣವಿಲ್ಲ ಎಂದಾಗ 5 ಲಕ್ಷ ರೂ. ಆದರೂ ಹೊಂದಿಸುವಂತೆ ಸೂಚಿಸಿದ್ದ. ಆತನ ಮಾತನ್ನು ನಂಬಿದ ಉದ್ಯಮಿ, ಪ್ರಕರಣವನ್ನು ಮುಚ್ಚಿ ಹಾಕಲು ಹಂತಹಂತವಾಗಿ ಒಟ್ಟು 5 ಲಕ್ಷ ರೂ. ಕೊಟ್ಟಿದ್ದ.

ಇದಾದ ಕೆಲ ತಿಂಗಳ ನಂತರ ಸಿಸಿಬಿ ಇನ್‌ಸ್ಪೆಕ್ಟರ್ ರಾಜು ಹೆಸರಿನಲ್ಲಿ ಮತ್ತೇ ಕರೆ ಮಾಡಿ 9 ಲಕ್ಷ ರೂ. ಗೆ ಬೇಡಿಕೆ ಇಟ್ಟಿದ್ದ. ಈ ಕುರಿತು ಉದ್ಯಮಿ ದೂರು ಕೊಟ್ಟಿದ್ದರು. ಅನುಮಾನದ ಮೇರೆಗೆ ಶ್ರೀನಿವಾಸ್‌ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಆತನ ಬಳಿ ಯಾವುದೇ ಖಾಸಗಿ ವಿಡಿಯೋಗಳಿರಲಿಲ್ಲ. ಹಣ ವಸೂಲಿ ಮಾಡುವ ಉದ್ದೇಶದಿಂದ ಸುಳ್ಳು ಹೇಳಿ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net