ಇದೊಂದು ಬಾರಿ ಜೆಡಿಎಸ್ ಬೆಂಬಲಿಸಿ

31. Pyp.01
Published on

ಪಿರಿಯಾಪಟ್ಟಣ: ದೇವೇಗೌಡರು ಬದುಕಿದ್ದಾಗಲೇ ಎಚ್.ಡಿ. ಕುಮಾರಸ್ವಾಮಿ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿಯನ್ನಾಗಿ ಮಾಡಲು ಜೆಡಿಎಸ್ ಕಾರ್ಯಕರ್ತರು ಪಣ ತೊಡಬೇಕಿದೆ ಎಂದು ಶಾಸಕ ಜಿ.ಟಿ. ದೇವೇಗೌಡ ಕರೆ ನೀಡಿದರು.


ತಾಲೂಕಿನ ಮಲ್ಲಿನಾಥಪುರ ಗ್ರಾಮದ ಬಳಿ ಮಂಗಳವಾರ ಆಯೋಜಿಸಲಾಗಿದ್ದ ಚಿಟ್ಟೇನಹಳ್ಳಿ, ಪುನಾಡಹಳ್ಳಿ, ಹುಣಸವಾಡಿ ಮತ್ತು ನವಿಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ತಂಬಾಕು ಬೆಳೆಗಾರರ ಕಷ್ಟಗಳು ಏನೆಂಬುದನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟವರು ದೇವೇಗೌಡರು. ವಿವಿಧ ನೀರಾವರಿ ಯೋಜನೆಗಳ ಮೂಲಕ ರಾಜ್ಯದ ಎಲ್ಲೆಡೆಗೂ ನೀರನ್ನು ಹರಿಸಿದ ಕೀರ್ತಿ ಅವರದು ಎಂದರು.


ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವಾಗಿ ಜೆಡಿಎಸ್ ಉಳಿದಿದ್ದರೆ ಅದು ದೇವೇಗೌಡರಿಂದಾಗಿ ಮಾತ್ರ ಎಂದ ಅವರು, ಬಂಗಾರಪ್ಪ, ಗುಂಡೂರಾವ್, ಯಡಿಯೂರಪ್ಪ ಸೇರಿದಂತೆ ಹಲವರು ಪ್ರಾದೇಶಿಕ ಪಕ್ಷಗಳನ್ನು ಕಟ್ಟಿದರೂ ಯಶಸ್ವಿಯಾಗಲು ಸಾಧ್ಯವಾಗಿಲ್ಲ. ದೇವೇಗೌಡರು ಇರುವಾಗಲೇ ಇದೊಂದು ಬಾರಿ ಎಲ್ಲರೂ ಜೆಡಿಎಸ್ ಪಕ್ಷವನ್ನು ಬೆಂಬಲಿಸಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ಕಾರ್ಯಕರ್ತರು ಕಟಿಬದ್ಧರಾಗಿ ಶ್ರಮಿಸೋಣ ಎಂದು ಕರೆ ನೀಡಿದರು.


ಈ ಹಿಂದೆ ಎಚ್.ಡಿ. ಕುಮಾರಸ್ವಾಮಿ 20 ತಿಂಗಳು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಗ್ರಾಮವಾಸ್ತವ್ಯ ಕಾರ್ಯಕ್ರಮವನ್ನು ಆಯೋಜಿಸಿ ಜನರ ಮನೆ ಬಾಗಿಲಿಗೆ ತೆರಳಿ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ಜನಾನುರಾಗಿಯಾಗಿದ್ದರು ಎಂದರು.


ಮೈಮುಲ್ ಅಧ್ಯಕ್ಷ ಪಿ.ಎಂ. ಪ್ರಸನ್ನ ಮಾತನಾಡಿ, ದೇವೇಗೌಡರು ಕಟ್ಟಿರುವ ಪ್ರಾದೇಶಿಕ ಜೆಡಿಎಸ್ ಪಕ್ಷವನ್ನು ಉಳಿಸಲು ಕಾರ್ಯಕರ್ತರಾದ ನಾವೆಲ್ಲರೂ ಛಲದಿಂದ ಶ್ರಮಿಸಬೇಕಿದೆ. ಎರಡು ವರ್ಷಗಳ ಕೋವಿಡ್ ಸಂಕಷ್ಟದ ನಡುವೆಯೂ ಶಾಸಕ ಕೆ. ಮಹದೇವ್ ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಅನುದಾನ ತಂದು ತಾಲೂಕನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದಾರೆ. ಆದರೆ ವಾಟ್ಸ್‌ಆ್ಯಪ್, ಫೇಸ್‌ಬುಕ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ವಿರೋಧಿಗಳು ಶಾಸಕರ ವಿರುದ್ಧ ಟ್ರೋಲ್‌ಗಳನ್ನು ಮಾಡುವ ಮೂಲಕ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಮುಂದಿನ ದಿನಗಳಲ್ಲಿ ಇದಕ್ಕೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.


ಶಾಸಕ ಕೆ. ಮಹದೇವ್ ಮಾತನಾಡಿ, ತಾಲೂಕಿನ 150 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮಾಜಿ ಶಾಸಕರು ಕೇವಲ ಭೂಮಿಪೂಜೆ ನೆರವೇರಿಸಿ ಹೋಗಿಬಿಟ್ಟರು. ನಾನು ಶಾಸಕನಾಗಿ ಆಯ್ಕೆಯಾದ ಬಳಿಕ ಮುಖ್ಯಮಂತ್ರಿ, ಸಚಿವರು ಮತ್ತು ಅಧಿಕಾರಿಗಳ ಕಾಲು ಹಿಡಿದು ಅನುದಾನ ತಂದು ಶೇ. 90ರಷ್ಟು ಕಾಮಗಾರಿ ಮುಕ್ತಾಯಗೊಳಿಸಿದ್ದೇನೆ ಎಂದರು.


ಮೈಮುಲ್ ನಿರ್ದೇಶಕ ಎಚ್.ಡಿ. ರಾಜೇಂದ್ರ, ಜಿಲ್ಲಾ ಬ್ಯಾಂಕ್ ನಿರ್ದೇಶಕ ಸಿ.ಎನ್. ರವಿ, ಪುರಸಭೆ ಅಧ್ಯಕ್ಷ ಕೆ. ಮಹೇಶ್, ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ತಾಲೂಕು ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷ ಪ್ರೀತಿ ಅರಸ್, ಟಿಎಪಿಸಿಎಂಎಸ್ ನಿರ್ದೇಶಕಿ ಸುನಿತಾ ಮಂಜುನಾಥ್, ತಾಪಂ ಮಾಜಿ ಸದಸ್ಯರಾದ ಎಸ್. ರಾಮು, ಎ.ಟಿ. ರಂಗಸ್ವಾಮಿ, ಮಲ್ಲಿಕಾರ್ಜುನ, ರಘುನಾಥ್, ಮುಖಂಡರಾದ ಅಣ್ಣೇಗೌಡ, ಚಂದ್ರಶೇಖರ್, ಹೇಮಂತ್‌ಕುಮಾರ್, ಗೋವಿಂದೇಗೌಡ, ಜಲೇಂದ್ರ, ವೆಂಕಟೇಶ್, ತಿಮ್ಮನಾಯ್ಕ, ದಿನೇಶ್ ಮತ್ತಿತರರು ಇದ್ದರು.


ಸಭೆಗೂ ಮೊದಲು ತಾಲೂಕಿನ ಚಿಟ್ಟೇನಹಳ್ಳಿ ಗ್ರಾಮದಿಂದ ಬೆಳತೂರು, ನಂದಿನಾಥಪುರ, ಹುಣಸವಾಡಿ, ಕುಂದನಹಳ್ಳಿ ಸರ್ಕಲ್ ಮಾರ್ಗವಾಗಿ ಮಲ್ಲಿನಾಥಪುರ ಗ್ರಾಮದವರೆಗೆ ಜೆಡಿಎಸ್ ಕಾರ್ಯಕರ್ತರು ಬೈಕ್ ರ‌್ಯಾಲಿ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net