

ನಂಜನಗೂಡು: ಕರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಜಾರಿಗೊಳಿಸಿರುವ ಭಾನುವಾರದ ಲಾಕ್‌ಡೌನ್ ನಂಜನಗೂಡಿನಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದು, ಇಡೀ ನಂಜನಗೂಡು ದಿನವಿಡೀ ಸ್ತಬ್ದಗೊಂಡಿತ್ತು.
ಅಗತ್ಯ ವಸ್ತುಗಳ ಸೇವೆ ಹೊರತು ಪಡಿಸಿ ಉಳಿದೆಲ್ಲಾ ವಾಣಿಜ್ಯ ವಹಿವಾಟುಗಳು ಬಂದ್ ಆಗಿದ್ದವು. ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳ ಓಡಾಟ ಸ್ಥಗಿತಗೊಂಡಿದ್ದರಿಂದ ಬಸ್ ನಿಲ್ದಾಣಗಳು ಖಾಲಿಯಾಗಿದ್ದವು.
ಇನ್ನು ರಾಷ್ಟ್ರೀಯ ಹೆದ್ದಾರಿ 766 ಸೇರಿದಂತೆ ನಗರದ ಪ್ರಮುಖ ರಸ್ತೆೆಗಳಲ್ಲಿ ವಾಹನ ಸಂಚಾರ ಬಹುತೇಕ ಬಂದ್ ಆಗಿತ್ತು. ಪೊಲೀಸರು ಹಾಗೂ ಕರೊನಾ ವಾರಿಯರ್ಸ್‌ಗಳ ವಾಹನಗಳು ಅಲ್ಲಲ್ಲಿ ಕಂಡು ಬಂದವು. ಜನರಿಂದ ಸದಾ ತುಂಬಿರುತ್ತಿದ್ದ ಬಜಾರ್‌ರಸ್ತೆ, ತರಕಾರಿ ಮಾರುಕಟ್ಟೆ ಹಾಗೂ ದೇವಾಲಯದ ಮುಖ್ಯರಸ್ತೆಗಳು ಖಾಲಿಯಿದ್ದವು.
ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಆವರಣ ಸಹಾ ಸಂಪೂರ್ಣ ಖಾಲಿಯಿದ್ದು, ದೇವಾಲಯದ ಸ್ನಾನಘಟ್ಟ, ಮುಡಿಕಟ್ಟೆ ಹಾಗೂ ವಾಣಿಜ್ಯ ಸಂಕೀರ್ಣಗಳು ಭಣಗುಡುತ್ತಿದ್ದವು ಸದಾ ಜನಜಂಗುಳಿಯ ಕೆಂದ್ರ ಸ್ಥಳವಾದ ದೇವಾಲಯದ ಭಕ್ತಿಮಾರ್ಗದ ರಸ್ತೆ ಸಹ ಖಾಲಿಯಾಗಿತ್ತು.
ಶನಿವಾರ ನಗರದ ಬಸವನಗುಡಿ ಬಡಾವಣೆಯ 44ವರ್ಷದ ಪುರುಷನಿಗೆ ಸೋಂಕು ತಗುಲಿದ್ದು, ರೋಗಿಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಐವರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಕ್ವಾರಂಟೈನ್‌ನಲ್ಲಿಡಲಾಗಿದೆ. ಮೂರ‌್ನಾಲ್ಕು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಸೋಂಕಿತನನ್ನು ನಗರದ ಇಎಸ್‌ಐ ಆಸ್ಪತ್ರೆಯಲ್ಲಿರುವ ಜ್ವರದ ಕ್ಲಿನಿಕ್‌ನಲ್ಲಿ ಗಂಟಲು ದ್ರವದ ತಪಾಸಣೆಗೊಳಪಡಿಸಿದಾಗ ಕೊರೊನಾ ಪಾಸಿಟಿವ್ ಧೃಡಪಟ್ಟಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.