

ಆರ್‌ಎಸ್‌ಎಸ್ ಮತ್ತು ಬಿಜೆಪಿ ಒತ್ತಾಯದಿಂದ ಜಾರಿ ನಿರ್ದೇಶನಾಲಯ ಲೋಕಾಯುಕ್ತಕ್ಕೆ ವರದಿಯನ್ನು ಸಲ್ಲಿಸಿದೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸುಳ್ಳು ಅಪಾದನೆ ಮಾಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.
ಹಣದ ವಹಿವಾಟಿನಲ್ಲಿ ವ್ಯತ್ಯಾಸ ಕಂಡು ಬಂದರೆ ಹಾಗೂ ಮನಿ ಲಾಂಡ್ರಿಂಗ್ ನಡೆದಿದೆ ಎಂದು ನ್ಯಾಯಾಲಯವು ಸೂಚಿಸಿದ್ದರೆ ಜಾರಿ ನಿರ್ದೇಶನಾಲಯ ತನಿಖೆ ಮಾಡಬೇಕು. ಆದರೆ, ಮುಡಾ ಪ್ರಕರಣದಲ್ಲಿ ತನಿಖೆಯನ್ನು ಮಾಡಿ ಲೋಕಾಯುಕ್ತಕ್ಕೆ ಕೊಡಿ ಎಂದು ಯಾರು ಹೇಳಿದ್ದಾರೆ. ಹೈಕೋರ್ಟಿಗೂ ಸಹ ತನಿಖೆಯ ವರದಿಯನ್ನು ಕೊಟ್ಟಿದ್ದೀರ. ಇದರ ಅರ್ಥ ಏನು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು 14 ನಿವೇಶನ ವಿಷಯದಲ್ಲಿ ಮನಿ ಲಾಂಡ್ರಿಂಗ್ ಮಾಡಿದ್ದಾರೆ ಎಂದು ಎಲ್ಲೂ ಉಲ್ಲೇಖ ಮಾಡಿಲ್ಲ. 1997ರಲ್ಲಿ ಡಿನೋಟಿಫಿಕೇಷನ್ ಆದಾಗ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಆಗಿದ್ದರು. ದೂರ ದೃಷ್ಟಿಯಿಂದ ಡಿನೋಟಿಫಿಕೇಷನ್ ಮಾಡಿದ್ದಾರೆ ಎಂದು ಹೇಳಲಾಗುತ್ತದೆಯೇ? ಎಂದು ಪ್ರಶ್ನಿಸಿದರು.
2004ರಲ್ಲಿ ಈ ಜಾಗದ ಡೆವಲಪ್‌ಮೆಂಟ್ ಆಗಿತ್ತು ಎಂದು ಸ್ಯಾಟಲೈಟ್ ಚಿತ್ರಗಳ ಮುಖಾಂತರ ಈವಾಗ ಹೇಳಬಹುದಾ? ವಿಜಯನಗರದಲ್ಲಿ ಚದರ ಅಡಿಗೆ 17 ಸಾವಿರ ಇದೆಯೇ? ಎಂದು ಪ್ರಶ್ನಿಸಿದ ಅವರು, ಜಾರಿ ನಿರ್ದೇಶನಾಲಯ ಹಸಿ ಸುಳ್ಳು ಹೇಳುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಲೋಕಾಯುಕ್ತ ತನ್ನ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ಇ.ಡಿ. ತನ್ನ ವರದಿಯನ್ನು ಸಹ ನ್ಯಾಯಾಲಯಕ್ಕೆ ನೀಡಿದ್ದು, ಈ ಸಂಬಂಧಿಸಿದಂತೆ ನ್ಯಾಯಾಲಯ ವಿಭಿನ್ನವಾದ ವರದಿಯನ್ನು ನೋಡಿ ಮೂರನೇ ಅಥವಾ ಬದಲಿ ತನಿಖೆಗೆ ಆದೇಶಿಸುವ ನಿಟ್ಟಿನಲ್ಲಿ ಬಿಜೆಪಿ, ಆರ್‌ಎಸ್‌ಎಸ್ ಜಾರಿ ನಿರ್ದೇಶನಾಲಯವನ್ನು ಬಳಸಿಕೊಳ್ಳುತ್ತಿದೆ ಎಂದರು.
ಪೊಲೀಸರು ವಶಕ್ಕೆ ಪಡೆಯಬೇಕು:
ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ವಿರುದ್ಧ ನ್ಯಾಯಾಲಯದ ಚೆಕ್‌ಬೌನ್ಸ್ ಪ್ರಕರಣದಲ್ಲಿ ಶಿಕ್ಷೆ ಪ್ರಮಾಣವನ್ನು ಇನ್ನೆರಡು ದಿನಗಳಲ್ಲಿ ಪ್ರಕಟಿಸಲಿದೆ. ಶಿಕ್ಷೆ ಪ್ರಕಟಣೆ ಆಗುತ್ತಿದ್ದಂತೆ ಪೊಲೀಸರು ವಶಕ್ಕೆ ಪಡೆಯಬೇಕು. ಇಲ್ಲದಿದ್ದರೆ ನಗರ ಪೊಲೀಸ್ ಆಯುಕ್ತರ ಕಚೇರಿ ಮುಂದೆ ಅಹೋರಾತ್ರಿ ಧರಣಿ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ಸೇವಾದಳದ ಗಿರೀಶ್ ಇದ್ದರು.