ಇಂದಿನಿಂದ ಅರ್ಧದಿನ ಲಾಕ್‌ಡೌನ್

12 tnp photo 01
Published on

ತಿ.ನರಸೀಪುರ: ತಾಲೂಕಿನಲ್ಲಿ ಹೆಚ್ಚುತ್ತಿರುವ ಕರೊನಾ ಪ್ರಕರಣಕ್ಕೆ ಬ್ರೇಕ್ ಹಾಕಲು ಜು.13ರಿಂದ ಅರ್ಧದಿನ ಸ್ವಯಂ ಲಾಕ್‌ಡೌನ್ ಮಾಡಲು ವರ್ತಕರು ನಿಧರಿಸಿದ್ದಾರೆ.

ಪಟ್ಟಣದ ಮಹದೇವಪ್ಪ ಸ್ಮಾರಕ ಭವನದಲ್ಲಿ ನಾಗರಿಕ ಸೇವಾ ವೇದಿಕೆ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ಸಭೆಯಲ್ಲಿ ಸೋಮವಾರದಿಂದ ಪಟ್ಟಣದಲ್ಲಿ ಹಾಫ್ ಲಾಕ್‌ಡೌನ್‌ಗೆ ಸರ್ವಾನುಮತದ ನಿರ್ಧಾರ ಕೈಗೊಳ್ಳಲಾಯಿತು.

ವೇದಿಕೆ ಅಧ್ಯಕ್ಷ ಎಚ್.ಆರೀಫ್ ಮಾತನಾಡಿ, ತಾಲೂಕಿನಲ್ಲಿ ನಿರೀಕ್ಷೆಗೂ ಮೀರಿ ಕರೊನಾ ಅಟ್ಟಹಾಸ ಮೆರೆಯುತ್ತಿದ್ದು, ಎಚ್ಚರಿಕೆ ವಹಿಸದಿದ್ದರೆ ಅಪಾಯದ ಮಟ್ಟ ಮೀರಲಿದೆ. ಆದ್ದರಿಂದ ಪಟ್ಟಣದ ವರ್ತಕರು ಲಾಕ್‌ಡೌನ್‌ಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಆನಂತರ ವರ್ತಕರು ಸಮಾಲೋಚನೆ ನಡೆಸಿ ಅರ್ಧದಿನ ಲಾಕ್‌ಡೌನ್‌ಗೆ ಒಪ್ಪಿಗೆ ಸೂಚಿಸಿದರು. ಅಂತಿಮವಾಗಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಇನ್ನಿತರೆ ಎಲ್ಲ ವಾಣಿಜ್ಯ ಚಟುವಟಿಕೆಯನ್ನು ಬೆಳಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ಸೀಮಿತಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸೇವಾ ವೇದಿಕೆಯ ಗೌರವಾಧ್ಯಕ್ಷ ಪಿ.ಪುಟ್ಟರಾಜು, ಕಾರ್ಯದರ್ಶಿ ಪ್ರಭುಸ್ವಾಮಿ, ಉಪಾಧ್ಯಕ್ಷ ಡಿ.ರಾಮಕೃಷ್ಣ, ಜಂಟಿ ಕಾರ್ಯದರ್ಶಿ ಎಂ.ವೆಂಕಟೇಶ್, ಸಂಚಾಲಕ ಬಸವರಾಜು, ಪತ್ರಿಕಾ ಕಾರ್ಯದರ್ಶಿ ಎಂ.ಮಹದೇವ್, ವರ್ತಕರ ಸಂಘದ ಮುಖ್ಯಸ್ಥ ಮಾದೇಶ್, ಹಾರ್ಡ್‌ವೇರ್ ಸ್ಟೋರ್ ಮಾಲೀಕ ದ್ವಾರಕಾನಾಥ್, ವಿಜಯ ಮಾರ್ಕೆಟ್‌ನ ಶಶಿಕಾಂತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net