ಇ-ಸ್ವತ್ತು ಪಡೆಯಲು ಬಡವರ ಪರದಾಟ

30sri-2 jivraja
ಶೃಂಗೇರಿಯಲ್ಲಿ ಬಿಜೆಪಿ ಮಂಡಲ ಆಯೋಜಿಸಿದ್ದ ವಿಕಸಿತ ಭಾರತ ಸಂಕಲ್ಪ ಸಭೆಯಲ್ಲಿ ಮಾಜಿ ಸಚಿವ ಡಿ.ಎನ್.ಜೀವರಾಜ್ ಮಾತನಾಡಿದರು. ಶಿಲ್ಪಾ ರವಿ, ಎಚ್.ಎಸ್.ನಟೇಶ್, ವೇಣುಗೋಪಾಲ್ ಇದ್ದರು.
Published on

ಶೃಂಗೇರಿ: ಪ್ರಸ್ತುತ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಸಾಕಷ್ಟು ಪ್ರಗತಿ ಹೊಂದಿದ್ದು 2047ರಲ್ಲಿ ವಿಶ್ವದಲ್ಲೇ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ನಿರ್ಮಾಣ ಮಾಡುವ ಗುರಿ ಹೊಂದಿದ್ದಾರೆ ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ತಿಳಿಸಿದರು.

ಪಟ್ಟಣದ ಚಪ್ಪರದ ಅಂಜನೇಯ ಸ್ವಾಮಿ ದೇವಸ್ಥಾನ ಸಭಾಂಗಣದಲ್ಲಿ ಸೋಮವಾರ ಬಿಜೆಪಿ ಮಂಡಲ ಆಯೋಜಿಸಿದ್ದ ವಿಕಸಿತ ಭಾರತ ಸಂಕಲ್ಪ ಸಭೆಯಲ್ಲಿ ಮಾತನಾಡಿದರು.

ಆರ್ಥಿಕ ಅಭಿವೃದ್ಧಿ ಜತೆಗೆ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಪರಿಸರದ ಸುಸ್ಥಿರತೆ ಒಳಗೊಂಡಿರುವ ವಿಕಸಿತ ಭಾರತ ಪ್ರಮುಖ ಉದ್ದೇಶವಾಗಿದೆ. ಮೂಲ ಸೌಕರ್ಯಗಳಾದ ರಸ್ತೆ, ಶಿಕ್ಷಣ, ಆರೋಗ್ಯ ಸೌಲಭ್ಯ ಕಲ್ಪಿಸುವುದು ಹಾಗೂ ಆಡಳಿತ ವ್ಯವಹಾರಗಳನ್ನು ಸರಳಗೊಳಿಸುವುದರ ಜತೆಗೆ ಉದ್ಯೋಗ ಸೃಷ್ಟಿಸುವ ಸಲುವಾಗಿ ಕಾರ್ಯನಿರ್ವಹಿಸುವುದು ಉನ್ನತ ಪರಿಕಲ್ಪನೆಯಾಗಿದೆ ಎಂದರು.ಶೃಂಗೇರಿ ಕ್ಷೇತ್ರದಲ್ಲಿ ಅಭಿವೃದ್ಧಿ ಎಂಬುದು ಶೂನ್ಯವಾಗಿದೆ. ರಸ್ತೆಗಳಲ್ಲಿ ಹೊಂಡ-ಗುಂಡಿಗಳಾಗಿವೆ. ರೈತರ 54-57 ಅರ್ಜಿಗಳು ಹಾಗೂ ವಸತಿಗಾಗಿ ಜನಸಾಮಾನ್ಯರು ಸಲ್ಲಿಸಿದ 94ಸಿ ಅರ್ಜಿಗಳು ಕಚೇರಿಯಲ್ಲಿ ಯಥಾಸ್ಥಿತಿಯಲ್ಲಿವೆ. ರೈತರ ಹಾಗೂ ಜನಸಾಮಾನ್ಯರ ಪರವಾಗಿ ಕೆಲಸ ಮಾಡುತ್ತಿದ್ದೇವೆ ಎನ್ನುವ ರಾಜ್ಯ ಸರ್ಕಾರದ ಹೇಳಿಕೆಗಳು ವೇದಿಕೆಗೆ ಮಾತ್ರ ಸೀಮಿತವಾಗಿದೆ. ಇ-ಸ್ವತ್ತು ಪಡೆಯಲು ಬಡವರು ಪರದಾಡುವಂತಾಗಿದೆ ಎಂದರು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪುಣ್ಯಪಾಲ್ ಮಾತನಾಡಿ, ಸ್ವಾತಂತ್ರೃ ಬಂದು 2047ಕ್ಕೆ ಭಾರತ ನೂರು ವರ್ಷಕ್ಕೆ ದಾಪುಗಾಲು ಇಡುತ್ತಿದೆ. ತಾಂತ್ರಿಕ ಉನ್ನತೀಕರಣದ ಜತೆಗೆ ದೇಶದ ಸುಸ್ಥಿರತೆಗೆ ಹೆಚ್ಚಿನ ಆದ್ಯತೆ ನೀಡುವುದು ನರೇಂದ್ರ ಮೋದಿ ಕನಸಾಗಿದೆ. ಸಾಮಾಜಿಕ ಹಾಗೂ ಆರ್ಥಿಕ ಸಬಲೀಕರಣಕ್ಕಾಗಿ ಸರ್ಕಾರದ ಜತೆಗೆ ಯುವಶಕ್ತಿ ಕೈಜೋಡಿಸಬೇಕು. ಯುವಕರು ದೇಶಪ್ರೇಮ ಬೆಳೆಸಿಕೊಂಡು ದೇಶಕ್ಕಾಗಿ ಸಮಯ ಮೀಸಲಿಡಬೇಕು ಎಂದು ಹೇಳಿದರು.

ಬಿಜೆಪಿ ಮಂಡಲ ಅಧ್ಯಕ್ಷ ಉಮೇಶ್ ತಲಗಾರು, ಪ್ರಧಾನ ಕಾರ್ಯದರ್ಶಿಗಳಾದ ಎಚ್.ಎಸ್.ವೇಣುಗೋಪಾಲ್,ನೂತನ್‌ಕುಮಾರ್, ಬಿಜೆಪಿ ಮುಖಂಡರಾದ ಕಚ್ಚೋಡಿ ಶ್ರೀನಿವಾಸ್, ಹರೀಶ್ ವಿ. ಶೆಟ್ಟಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಭಾಗ್ಯಲಕ್ಷ್ಮೀ, ರಾಜ್ಯ ಎಸ್ಸಿ ಮೋರ್ಚಾ ವಕ್ತಾರ ಬಿ.ಶಿವಶಂಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net