ಆಸ್ಪತ್ರೆಯಲ್ಲಿ ವೈದ್ಯರಿಲ್ಲ, ತುರ್ತು ಸೇವೆಯೂ ಸಿಗ್ತಿಲ್ಲ

19hos1p strike
ಹೊಸನಗರ ತಾಲೂಕು ನಗರ ಆಸ್ಪತ್ರೆ ಅವ್ಯವಸ್ಥೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಗರ ನಿತಿನ್, ಕೆ.ವಿ.ಸುಬ್ರಹ್ಮಣ್ಯ, ಎಚ್.ಜಿ.ರಮಾಕಾಂತ್ ಇದ್ದರು.
Published on

ಹೊಸನಗರ: ನಗರ ಹೋಬಳಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲ. ಸಿಬ್ಬಂದಿ ಇಲ್ಲ, ಸಕಾಲದಲ್ಲಿ ಚಿಕಿತ್ಸೆ ಸಿಗುತ್ತಿಲ್ಲ, ತುರ್ತು ಸೇವೆಯೂ ಇಲ್ಲ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಮಂಗಳವಾರ ಬೆಳಗ್ಗೆ ಆಸ್ಪತ್ರೆ ಮುಂದೆ ಜಮಾಯಿಸಿದ ಕಾರ್ಯಕರ್ತರು ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಗಮನ ಹರಿಸದ ರಾಜ್ಯ ಸರ್ಕಾರದ ವಿರುದ್ಧ ೋಷಣೆ ಕೂಗಿದರು.

ಬಿಜೆಪಿ ಸರ್ಕಾರವಿದ್ದಾಗ ನಗರ ಹೋಬಳಿಯ 24*7 ಆಸ್ಪತ್ರೆಗೆ ಮೂವರು ವೈದ್ಯರನ್ನು ನೇಮಿಸಲಾಗಿತ್ತು. ಇಲ್ಲಿ ಇರುವ ಆಂಬುಲೆನ್ಸ್ ಪಂಚರ್ ಆಗಿ ನಾಲ್ಕು ದಿನಗಳಿಂದ ನಿಂತಿದ್ದರೂ ಸರಿಪಡಿಸುವ ಗೋಜಿಗೆ ಹೋಗಿಲ್ಲ ಎಂದು ಪ್ರತಿಭಟನಕಾರರು ಆರೋಪಿಸಿದರು.

ತಾಲೂಕು ಬಿಜೆಪಿ ಯುವಮೋರ್ಚಾ ಮಾಜಿ ಅಧ್ಯಕ್ಷ ನಗರ ನಿತಿನ್ ಮಾತನಾಡಿ, ಜನರಿಗೆ ಸಮಸ್ಯೆ ಆಗುತ್ತಿರುವ ಕಾರಣ ಪ್ರತಿಭಟಿಸಲಾಗುತ್ತಿದೆ. ನಗರ ಪ್ರವಾಸೋದ್ಯಮವಾಗಿ ಬೆಳೆದಿದೆ. ಇಲ್ಲಿರುವುದು ಹೋಬಳಿ ಕೇಂದ್ರದ ಆಸ್ಪತ್ರೆ. ಒಬ್ಬ ವೈದ್ಯರೂ ಇಲ್ಲ. ವೈದ್ಯಾಧಿಕಾರಿಗಳು ಅಸಡ್ಡೆಯ ಉತ್ತರಗಳನ್ನು ನೀಡುತ್ತಾರೆ ಎಂದು ಆರೋಪಿಸಿದರು.

ಇಲ್ಲಿನ ಲ್ಯಾಬ್ ಟೆಕ್ನಿಷಿಯನ್‌ಗಳನ್ನು ಕಾರಣವಿಲ್ಲದೆ ಹುಂಚಾ ಹೋಬಳಿಗೆ ವರ್ಗಾಯಿಸಲಾಗಿದೆ. ಹಾಗಾದರೆ ನಗರ ಹೋಬಳಿ ಜನ ಏನು ಮಾಡಬೇಕು ಎಂದು ಪ್ರಶ್ನಿಸಿದ ಅವರು, ಈ ಆಸ್ಪತ್ರೆಗೆ ಕೂಡಲೇ ಇಬ್ಬರು ವೈದ್ಯರನ್ನು ನೇಮಿಸಬೇಕು. ಲ್ಯಾಬ್ ಟೆಕ್ನಿಷಿಯನ್ ನೇಮಿಸಬೇಕು. ಆಂಬುಲೆನ್ಸ್ ಸುವ್ಯವಸ್ಥೆಯಲ್ಲಿ ಇಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ನಗರ ಹೋಬಳಿ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಎಚ್.ಜಿ.ರಮಾಕಾಂತ್ ಹೆಬ್ಬುರುಳಿ, ಗ್ರಾಪಂ ಸದಸ್ಯರಾದ ಕೆ.ಬಿ.ಕುಮಾರ್, ಅರುಣ ಬೈಸೆ, ಪ್ರಮುಖರಾದ ಕೆ.ವಿ.ಕೃಷ್ಣಮೂರ್ತಿ, ಮಧುಕರ್ ಶೆಟ್ಟಿ, ಸುರೇಶ್, ಉಮೇಶ ಕಾಡಿಗ್ಗೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net