ಆಸ್ಪತ್ರೆಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ

21 HANUR 3
Published on

ಡಿಎಚ್‌ಒ ಡಾ.ಚಿದಂಬರಂ ಸಲಹೆ

ಹನೂರು : ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡುವುದರ ಜತೆಗೆ ರೋಗಿಗಳಿಗೆ ಸ್ಪಂದಿಸುವುದರ ಮೂಲಕ ಉತ್ತಮ ಸೇವೆ ಒದಗಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಿದಂಬರಂ ತಿಳಿಸಿದರು.

ತಾಲೂಕಿನ ಲೊಕ್ಕನಹಳ್ಳಿ ಹಾಗೂ ಪಿ.ಜಿ. ಪಾಳ್ಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದ ಬಳಿಕ ಆಯೋಜಿಸಿದ್ದ ಸಭೆಯಲ್ಲಿ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು.

ಹನೂರು ತಾಲೂಕು ಗುಡ್ಡಗಾಡು ಪ್ರದೇಶದಿಂದ ಕೂಡಿದ್ದು, ಇಲ್ಲಿನ ಹೆಚ್ಚಿನ ಜನರು ಸರ್ಕಾರಿ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ. ಹಾಗಾಗಿ ಜನರಿಗೆ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಆದ್ದರಿಂದ ಪ್ರತಿಯೊಬ್ಬರೂ ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು. ನಿಗದಿತ ಸಮಯಕ್ಕೆ ಆಸ್ಪತ್ರೆಗೆ ಆಗಮಿಸಬೇಕು. ರೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸುವುದರ ಮೂಲಕ ಅಗತ್ಯ ಚಿಕಿತ್ಸೆ ಒದಗಿಸಬೇಕು. ಜತೆಗೆ ಅಗತ್ಯ ಸಲಹೆಗಳನ್ನು ನೀಡಬೇಕು. ಆಸ್ಪತ್ರೆಯಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.

ಇದೇ ವೇಳೆ ಪಿ.ಜಿ. ಪಾಳ್ಯ ಗ್ರಾಮಸ್ಥರು ಮಾತನಾಡಿ, ಈ ಭಾಗದಲ್ಲಿ ಯಾವುದೇ ಖಾಸಗಿ ಆಸ್ಪತ್ರೆಯಿಲ್ಲ. ಹಾಗಾಗಿ ಇಲ್ಲಿನ ಜನರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನೇ ಅಲವಂಬಿಸಿದ್ದಾರೆ. ಆದ್ದರಿಂದ ಈ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಡಾ. ಚಿದಂಬರಂ ಅಗತ್ಯ ಕ್ರಮವಹಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಲೋಕೇಶ್, ವೈದ್ಯರಾದ ಡಾ. ಪ್ರಸಾದ್, ಪ್ರಿಯ, ಮುಖಂಡರಾದ ಕೃಷ್ಣಮೂರ್ತಿ, ಮಹಾದೇವ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net