ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ / ವೈದ್ಯರು ಮತ್ತು ಸಿಬ್ಬಂದಿ ಧರಣಿ / ತುರ್ತು ಸೇವೆ ಹೊರತುಪಡಿಸಿ ಆಸ್ಪತ್ರೆಯ ವೈದ್ಯಕೀಯ ಸೇವೆಗಳು ಬಂದ್ / ಆರೋಪಿಗಳ ಬಂಧನಕ್ಕೆ ಆಗ್ರಹ

Published on

ವಿಜಯವಾಣಿ ಸುದ್ದಿಜಾಲ ಕೋಲಾರ
ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಗಳನ್ನು ಆಂಬುಲೆನ್ಸ್ ಮೂಲಕ ಜಿಲ್ಲಾ ಆಸ್ಪತ್ರೆಗೆ ಶಿಫ್ಟ್ ಮಾಡುವ ವಿಚಾರದಲ್ಲಿ ಆಸ್ಪತ್ರೆ ಸಿಬ್ಬಂದಿ ಮೇಲೆ ಸಾರ್ವಜನಿಕರು ಹಲ್ಲೆ ನಡೆಸಿದ್ದಕ್ಕೆ ಆಸ್ಪತ್ರೆ ಸಿಬ್ಬಂದಿ ಶುಕ್ರವಾರ ವೈದ್ಯಕೀಯ ಸೇವೆಗಳನ್ನು ಬಂದ್ ಮಾಡಿ, ಪ್ರತಿಭಟನೆ ನಡೆಸಿದ ಪ್ರಸಂಗ ಕೋಲಾರ ಜಿಲ್ಲೆಯ ಮಾಲೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯಿತು.

ಮಾಲೂರು ಸರ್ಕಾರಿ ಆಸ್ಪತ್ರೆಗೆ ಗುರುವಾರ ರಾತ್ರಿ ಅಪಘಾತದಲ್ಲಿ ಗಾಯಗೊಂಡಿದ್ದ ಸಂತೆಹಳ್ಳಿ ಆನಂದ್ ಹಾಗೂ ಚಿಕ್ಕಕಲ್ಲಹಳ್ಳಿಯ ಶೇಖರ್ ಎಂಬುವವರನ್ನು ಗಾಯಾಳುಗಳ ಕಡೆಯವರಾದ ಭರತ್, ಗೋಪಿ, ಯಶ್ವಂತ್ ಎಂಬುವವರು ಆಸ್ಪತ್ರೆಗೆ ಕರೆತರಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರಕ್ಕೆ ಆಂಬುಲೆನ್ಸ್ ಮೂಲಕ ಸಾಗಿಸುವ ವಿಚಾರದಲ್ಲಿ ಆಸ್ಪತ್ರೆ ವೈದ್ಯರ, ನರ್ಸ್ ಮತ್ತು ಡಿ.ಗ್ರೂಪ್ ಸಿಬ್ಬಂದಿ ಮೇಲೆ ಭರತ್, ಗೋಪಿ, ಯಶ್ವಂತ್ ಹಲ್ಲೆಗೆ ಮುಂದಾಗಿದ್ದಾರೆ. ಡಿ.ಗ್ರೂಪ್ ನೌಕರರಾದ ಮಂಜು ಮತ್ತು ಕೃಷ್ಣನ ಮೇಲೆ ಹಲ್ಲೆ ನಡೆಸಿದ್ದಾರೆ.

ಇದರಿಂದ ಬೇಸತ್ತ ಆಸ್ಪತ್ರೆಯ ಸಿಬ್ಬಂದಿ ಶುಕ್ರವಾರ ಬೆಳ್ಳಗ್ಗಿನಿಂದ ಆಸ್ಪತ್ರೆಯ ಆಡಳಿತಾಧಿಕಾರಿ ವಸಂತ್ ನೇತೃತ್ವದಲ್ಲಿ ವೈದ್ಯರು, ದಾದಿಯರು ಹಾಗೂ ಡಿ.ಗ್ರೂಪ್ ನೌಕರರು ಆಸ್ಪತ್ರೆಯ ವೈದ್ಯಕೀಯ ಸೇವೆಗಳನ್ನು ಬಂದ್ ಮಾಡಿ, ಪ್ರತಿಭಟನೆ ನಡೆಸಿ, ಹಲ್ಲೆ ನಡೆಸಿದ ಆರೋಪಿಗಳನ್ನು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಡಳಿತಾಧಿಕಾರಿ ವಸಂತ್ ಒತ್ತಾಯಿಸಿದರು.

ಮಧ್ಯಾಹ್ನ ೧೨ ಗಂಟೆಯ ಸಮಯಕ್ಕೆ ಪೋಲಿಸ್ ಇನ್ಸ್ಪೆಕ್ಟರ್ ವಸಂತ್ ಸ್ಥಳಕ್ಕೆ ಆಗಮಿಸಿ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಿ, ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಹಾಗೂ ಇನ್ನು ಮುಂದೆ ಈ ರೀತಿ ಆಗದಂತೆ ಆಸ್ಪತ್ರೆಗೆ ಪೋಲಿಸ್ ರಕ್ಷಣೆ ಒದಗಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ವಾಪಸ್ಸು ಪಡೆದರು.

ಕನ್ನಡಪರ ಸಂಘಟನೆಗಳ ಬೆಂಬಲ :
ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ತಾಲ್ಲೂಕಿನ ನಮ್ಮ ಕರ್ನಾಟಕ ಕನ್ನಡ ಸೇನೆ ಅಧ್ಯಕ್ಷರಾದ ಎಸ್.ಎಂ.ರಾಜು ಮತ್ತು ರಾಜ್ಯ ಉಪಾಧ್ಯಕ್ಷ ಚಾಕನಹಳ್ಳಿ ನಾಗರಾಜು ನೇತೃತ್ವದಲ್ಲಿ ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿ, ಆರೋಪಿಗಳನ್ನು ಬಂಧಿಸಬೇಕೆAದು ಒತ್ತಾಯಪಡಿಸಿ ಪೋಲಿಸ್ ಇನ್ಸ್ಪೆಕ್ಟರ್ ವಸಂತ್‌ಗೆ ಮನವಿ ಸಲ್ಲಿಸಿದರು.

ಶಾಸಕರ ಭೇಟಿ :
ವಿಷಯ ತಿಳಿದ ಶಾಸಕ ನಂಜೇಗೌಡ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರು ಮತ್ತು ಸಿಬ್ಬಂದಿಗೆ ಧೈರ್ಯ ತುಂಬಿ ಈ ರೀತಿ ಆಗದಂತೆ ಪೋಲಿಸ್ ಬಂದೋಬಸ್ತ್ ಒದಗಿಸಲಾಗುವುದು. ಕೃತ್ಯ ನಡೆಸಿದ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಪೋಲಿಸರಿ ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ವೈದ್ಯರಾದ ಡಾ.ರಾಮರಾಜೇಶ್, ಡಾ.ವೆಂಕಟರೆಡ್ಡಿ, ಡಾ.ಚನ್ನಕೇಶವ, ಡಾ.ಮಧುಸೂದನ್, ಡಾ.ಹರೀಶ್, ಡಿ.ಗ್ರೂಪ್ ನೌಕರರಾದ, ಮಂಜು, ಕೃಷ್ಣ, ಸುಭಾಷ್, ಮಂಜುನಾಥ್, ಕೃಷ್ಣಕುಮಾರ್, ಶಿವಣ್ಣ ಹಾಗೂ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.

ಚಿತ್ರ ೨೬ ಕೆ.ಎಲ್.ಆರ್. ೦೪ : ಮಾಲೂರು ಸರ್ಕಾರಿ ಆಸ್ಪತ್ರೆ ಮುಂಭಾಗ ಪ್ರತಿಭಟಣೆ ನಿರತ ವೈದ್ಯಾಧಿಕಾರಿಗಳೊಂದಿಗೆ ಶಾಸಕ ಕೆ.ವೈ.ನಂಜೇಗೌಡ ಮಾತನಾಡುತ್ತಿರುವುದು.
ಚಿತ್ರ ೨೬ ಕೆ.ಎಲ್.ಆರ್. ೦೪ಎ : ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ಕನ್ನಡ ಪರ ಸಂಘಟನೆಗಳು ಬೆಂಬಲ ಸೂಚಿಸಿ, ಸರ್ಕಲ್ ಇನ್ಸ್ಪೆಕ್ಟರ್ ರವರಿಗೆ ಆರೋಪಿಗಳನ್ನು ಬಂಧಿಸಬೇಕೆAದು ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net